ಕೊಯಮತ್ತೂರು, ನವೆಂಬರ್ 19: “ಸಾವಯವ ಕೃಷಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ವಿಷಯ” ಎಂದು ಪ್ರಧಾನಿ ಮೋದಿ (ಪಿಎಂ ಮೋದಿ), ಭಾರತವು ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. “ಎಲ್ಲಾ ಕೃಷಿಕರು ಮತ್ತು ಸಂಶೋಧನಾ ಸಂಸ್ಥೆಗಳು ಸಾವಯವ ಕೃಷಿ ಪಠ್ಯಕ್ರಮದ ಪ್ರಮುಖ ಭಾಗವಾಗಿ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ಹಳ್ಳಿಗಳಿಗೆ ರೈತರ ಹೊಲಗಳನ್ನು ನಿಮ್ಮ ಪ್ರಯೋಗಾಲಯಗಳಾಗಿ ಪರಿವರ್ತಿಸಿ” ಎಂದು ಮೋದಿ ಕರೆ ನೀಡಿದರು.
ನೈಸರ್ಗಿಕ ಕೃಷಿಯು ಸ್ವದೇಶಿ, ಸ್ಥಳೀಯ ಮತ್ತು ಸಾಂಪ್ರದಾಯಿಕ ಭಾರತದ ಕಲ್ಪನೆ, ಜೀವಾಮೃತದಂತಹ ಪದ್ಧತಿಗಳನ್ನು ಈಗ ದಕ್ಷಿಣ ರೈತರು ವ್ಯಾಪಕವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಮೋದಿ ಒತ್ತಿ ಹೇಳಿದರು. ಕಳೆದ 11 ವರ್ಷಗಳಲ್ಲಿ ನಮ್ಮ ದೇಶದ ಇಡೀ ಕೃಷಿ ವಲಯವು ಒಂದು ಪ್ರಮುಖ ಪರಿವರ್ತನೆಗೆ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನಮ್ಮ ದೇಶದ ಕೃಷಿ ರಫ್ತು ದ್ವಿಗುಣಗೊಂಡಿದೆ. ರೈತರ ಕಠಿಣ ಪರಿಶ್ರಮ ಮತ್ತು ಸರ್ಕಾರದ ವಿವಿಧ ಪ್ರಯತ್ನಗಳಿಂದ ಭಾರತೀಯ ಕೃಷಿ ಪ್ರಗತಿಯ ಹೊಸ ಎತ್ತರವನ್ನು ತಲುಪಿದೆ” ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಸಮ್ಮೇಳನ ಉದ್ಘಾಟನೆ
ತಮಿಳುನಾಡಿನಲ್ಲಿ ಬಿಹಾರದ ಗಾಳಿ; ಮೋದಿ
ತಮಿಳುನಾಡಿನ ಕೊಯಮತ್ತೂರಿನಲ್ಲಿ ರೈತರು ಮತ್ತು ಜವಳಿ ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರಿಗೆ ರೈತರು ತಮ್ಮ ಶಾಲುಗಳನ್ನು ಬೀಸುತ್ತಾ ಸ್ವಾಗತಿಸಿದರು. “ನಾನು ಇಲ್ಲಿ ವೇದಿಕೆಗೆ ಬಂದಾಗ, ಹಲವಾರು ರೈತರು ತಮ್ಮ ಶಾಲುಗಳನ್ನು ಗಾಳಿಯಲ್ಲಿ ಬೀಸುವುದನ್ನು ನೋಡಿದೆ. ಬಿಹಾರದ ತಂಗಾಳಿ ಇಲ್ಲಿಗೆ ತಲುಪಿದಂತೆ ನನಗೆ ಭಾಸವಾಯಿತು” ಎಂದು ಮೋದಿ ಹೇಳಿದರು. ಈ ಮೂಲಕ ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಬಿಹಾರದಂತೆಯೇ ತಮಿಳುನಾಡಿನಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ಬೃಹತ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಸತ್ಯಸಾಯಿ ಬಾಬಾ ಎಂದರೆ ಪ್ರೀತಿಯ ಸಾಕಾರ ರೂಪ; ಮೋದಿ ಪ್ರಧಾನಿ ಬಣ್ಣನೆ
ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಪ್ರಧಾನಿ ಮೋದಿಯವರ ಈ ಹೇಳಿಕೆ ಮಹತ್ವದ್ದಾಗಿದೆ. ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ದಕ್ಷಿಣ ರಾಜ್ಯದಲ್ಲಿ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ. 2024ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಲೋಕಸಭಾ ಸ್ಥಾನವನ್ನು ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದೆ.
“ಕೊಯಮತ್ತೂರಿನ ಜವಳಿ ವಲಯವು ದೇಶದ ಆರ್ಥಿಕತೆಗೆ ಬಹಳ ಹಿಂದಿನಿಂದಲೂ ಪ್ರಮುಖ ಕೊಡುಗೆ ನೀಡುತ್ತಿದೆ. ಈ ಪ್ರದೇಶದವರೇ ಆದ, ಈಗ ಭಾರತದ ಉಪರಾಷ್ಟ್ರವಾಗಿ ಸೇವೆ ಸಲ್ಲಿಸುತ್ತಿರುವ ಸಿ.ಪಿ. ರಾಧಾಕೃಷ್ಣನ್ ಅವರ ಕೊಡುಗೆ ದೇಶಕ್ಕೆ ಮಹತ್ವದ್ದಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ