ಚಿನ್ನ ಖರೀದಿ, ಮಾರಾಟ ಮಾಡುವ ಮುನ್ನ ಈ ಹೊಸ ತೆರಿಗೆ ನಿಯಮ ತಿಳಿದುಕೊಳ್ಳಿ, ನೀವು ಚಿನ್ನದ ಆಭರಣ, ನಾಣ್ಯ ಅಥವಾ ಡಿಜಿಟಲ್ ಗೋಲ್ಡ್ ಖರೀದಿಸಿದರೆ ಶೇ. 3ರಷ್ಟು ಜಿಎಸ್‌ಟಿ ಕಟ್ಟಬೇಕು. ಇತರ ತೆರಿಗೆ ಕುರಿತು ಮಾಹಿತಿ ಇಲ್ಲಿದೆ.

ಕನ್ನಡಿಗರಿಗೆ ಚಿನ್ನ ಅಂದ್ರೆ ಬರೀ ಆಭರಣ ಅಲ್ಲ, ಅದೊಂದು ದೊಡ್ಡ ಹೂಡಿಕೆ. ಆದರೆ ಚಿನ್ನ ಕೊಳ್ಳುವಾಗ, ಮಾರುವಾಗ ಯಾವೆಲ್ಲಾ ತೆರಿಗೆ ಕಟ್ಟಬೇಕು ಅನ್ನೋ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ನೀವು ಚಿನ್ನವನ್ನು ಆಭರಣ, ಡಿಜಿಟಲ್ ರೂಪ ಅಥವಾ ಬಾಂಡ್‌ಗಳ ರೂಪದಲ್ಲಿ ಇಟ್ಟುಕೊಂಡಿದ್ದರೆ, ಯಾವೆಲ್ಲಾ ತೆರಿಗೆ ನಿಯಮಗಳು ಅನ್ವಯವಾಗುತ್ತವೆ ಎಂಬುದನ್ನು ಇಲ್ಲಿ ಸುಲಭವಾಗಿ ವಿವರಿಸಲಾಗಿದೆ.

ಚಿನ್ನದ ಆಭರಣ ಮತ್ತು ಡಿಜಿಟಲ್ ಗೋಲ್ಡ್: ನೀವು ಚಿನ್ನದ ಆಭರಣ, ನಾಣ್ಯ ಅಥವಾ ಡಿಜಿಟಲ್ ಗೋಲ್ಡ್ ಖರೀದಿಸಿದರೆ, ಅದರ ಮೇಲೆ ಶೇ. 3ರಷ್ಟು ಜಿಎಸ್‌ಟಿ ಪಾವತಿಸಬೇಕು. ಅಷ್ಟೇ ಅಲ್ಲ, ಆಭರಣದ ಮೇಕಿಂಗ್ ಚಾರ್ಜ್ (ತಯಾರಿಕಾ ಶುಲ್ಕ) ಮೇಲೆ ಶೇ. 5ರಷ್ಟು ಜಿಎಸ್‌ಟಿ ಪ್ರತ್ಯೇಕವಾಗಿ ಬೀಳುತ್ತದೆ.

ಗೋಲ್ಡ್ ಇಟಿಎಫ್, ಮ್ಯೂಚುವಲ್ ಫಂಡ್, ಎಸ್‌ಜಿಬಿ: ನೀವು ಗೋಲ್ಡ್ ಇಟಿಎಫ್ (Exchange Traded Funds), ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಅಥವಾ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು (SGB) ಖರೀದಿಸಿದರೆ ಜಿಎಸ್‌ಟಿ ಕಟ್ಟಬೇಕಾಗಿಲ್ಲ.

ವಿದೇಶದಿಂದ ತರುವ ಚಿನ್ನ: ವಿದೇಶದಿಂದ ಚಿನ್ನವನ್ನು ಆಮದು ಮಾಡಿಕೊಂಡರೆ, ಶೇ. 6ರಷ್ಟು ಕಸ್ಟಮ್ಸ್ ಡ್ಯೂಟಿ ಪಾವತಿಸಬೇಕು.

ಉಡುಗೊರೆಯಾಗಿ ಸಿಕ್ಕರೆ?: ಹತ್ತಿರದ ಸಂಬಂಧಿಕರು ಉಡುಗೊರೆಯಾಗಿ ಕೊಟ್ಟ ಚಿನ್ನಕ್ಕೆ ಯಾವುದೇ ತೆರಿಗೆ ಇಲ್ಲ. ಆದರೆ, ಸಂಬಂಧಿಕರಲ್ಲದವರಿಂದ ಒಂದೇ ವರ್ಷದಲ್ಲಿ ₹50,000ಕ್ಕಿಂತ ಹೆಚ್ಚು ಮೌಲ್ಯದ ಚಿನ್ನ ಉಡುಗೊರೆಯಾಗಿ ಬಂದರೆ, ಅದನ್ನು ‘ಇತರೆ ಮೂಲಗಳಿಂದ ಬಂದ ಆದಾಯ’ ಎಂದು ಪರಿಗಣಿಸಿ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ಕಟ್ಟಬೇಕು. ಇನ್ನು, ಮರಣ ಅಥವಾ ವಿಲ್ ಮೂಲಕ ಬಂದ ಚಿನ್ನಕ್ಕೆ ಸದ್ಯಕ್ಕೆ ಯಾವುದೇ ತೆರಿಗೆ ಇಲ್ಲ.

2024ರ ಜುಲೈ 23ರ ನಂತರ ಚಿನ್ನ ಮಾರಾಟ ಮಾಡಿದರೆ, ಲಾಭವನ್ನು ಲೆಕ್ಕ ಹಾಕುವ രീതിಯಲ್ಲಿ ಬದಲಾವಣೆ ಆಗಿದೆ. ಒಂದು ವೇಳೆ, ಚಿನ್ನ ಮಾರಿ ಬಂದ ಪೂರ್ತಿ ಹಣವನ್ನು ಮನೆ ಖರೀದಿಸಲು ಬಳಸಿದರೆ, ಸೆಕ್ಷನ್ 54F ಅಡಿಯಲ್ಲಿ ಕೆಲವು ಷರತ್ತುಗಳೊಂದಿಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಚಿನ್ನದ ಆಭರಣ ಮತ್ತು ಡಿಜಿಟಲ್ ಗೋಲ್ಡ್: 24 ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡು ಮಾರಾಟ ಮಾಡಿದರೆ, ಬಂದ ಲಾಭದ ಮೇಲೆ ಶೇ. 12.5ರಷ್ಟು ತೆರಿಗೆ ಕಟ್ಟಬೇಕು. ಇದಕ್ಕೆ ಇಂಡೆಕ್ಸೇಶನ್ ಪ್ರಯೋಜನ ಸಿಗುವುದಿಲ್ಲ. ಒಂದು ವೇಳೆ 24 ತಿಂಗಳೊಳಗೆ ಮಾರಿದರೆ, ಆ ಲಾಭವನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.

ಗೋಲ್ಡ್ ಇಟಿಎಫ್: 12 ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡರೆ ಶೇ. 12.5ರಷ್ಟು ತೆರಿಗೆ. 12 ತಿಂಗಳೊಳಗೆ ಮಾರಿದರೆ ನಿಮ್ಮ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆ ಕಟ್ಟಬೇಕು.

ಗೋಲ್ಡ್ ಮ್ಯೂಚುವಲ್ ಫಂಡ್: 24 ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡರೆ ಶೇ. 12.5ರಷ್ಟು, ಅದಕ್ಕಿಂತ ಕಡಿಮೆ ಅವಧಿಯಾದರೆ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆ ಪಾವತಿಸಬೇಕು.

ಸಾವರಿನ್ ಗೋಲ್ಡ್ ಬಾಂಡ್ (SGB): ಹೊಸ ನಿಯಮದ ಪ್ರಕಾರ, ರಿಸರ್ವ್ ಬ್ಯಾಂಕ್‌ನಿಂದ (RBI) ನೇರವಾಗಿ ಖರೀದಿಸಿ, ಮೆಚ್ಯೂರಿಟಿ ತನಕ ಇಟ್ಟುಕೊಂಡ ಬಾಂಡ್‌ಗಳಿಗೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ. ಸೆಕೆಂಡರಿ ಮಾರುಕಟ್ಟೆಯಿಂದ ಖರೀದಿಸಿದ ಅಥವಾ ಮೆಚ್ಯೂರಿಟಿ ಮುನ್ನ ಮಾರಾಟ ಮಾಡಿದ ಬಾಂಡ್‌ಗಳ ಲಾಭಕ್ಕೆ ತೆರಿಗೆ ಕಟ್ಟಲೇಬೇಕು.

ಪಾರಂಪರಿಕವಾಗಿ ಬಂದ ಚಿನ್ನ: ಪಿತ್ರಾರ್ಜಿತವಾಗಿ ಬಂದ ಚಿನ್ನವನ್ನು ಮಾರಾಟ ಮಾಡಿದರೆ ತೆರಿಗೆ ಕಟ್ಟಬೇಕು. ಇದರ ಖರೀದಿ ಅವಧಿಯನ್ನು, ಮೂಲ ಮಾಲೀಕರು ಅದನ್ನು ಖರೀದಿಸಿದ ದಿನಾಂಕದಿಂದ ಲೆಕ್ಕ ಹಾಕಲಾಗುತ್ತದೆ. ಹೀಗೆ ಲೆಕ್ಕ ಹಾಕಿದಾಗ, ಒಟ್ಟು 24 ತಿಂಗಳಿಗಿಂತ ಹೆಚ್ಚು ಹಳೆಯದಾಗಿದ್ದರೆ, ಲಾಭದ ಮೇಲೆ ಶೇ. 12.5ರಷ್ಟು ತೆರಿಗೆ ಕಟ್ಟಬೇಕು.

Source link
ಚಿನ್ನ ಖರೀದಿ, ಮಾರಾಟ ಮಾಡುವ ಮುನ್ನ ಈ ಹೊಸ ತೆರಿಗೆ ನಿಯಮ ತಿಳಿದುಕೊಳ್ಳಿ