
ಮೈಸೂರು, ಮಾರ್ಚ್ 27: ಫೇಸ್‌ಬುಕ್‌ನಲ್ಲಿ ಐಷಾರಾಮಿ ಕಾರುಗಳ ಫೋಟೋ ನೋಡಿ ಮರುಳಾಗಬೇಡಿ. ಏಕೆಂದರೆ ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುತ್ತೇವೆ ಅಂತ ನಂಬಿಸಿ ಕೋಟ್ಯಂತರ ರೂ ವಂಚಿಸುತ್ತಿದ್ದ (ಐಷಾರಾಮಿ ಕಾರು ಹಗರಣ) ದೊಡ್ಡ ಜಾಲವನ್ನು ಮೈಸೂರು ಭೇದಿಸಿದ್ದಾರೆ. ಅಸಲಿಗೂ ಕೂಡ ಇಲ್ಲ, ಇತ್ತ ಖರೀದಿ ಮಾಡುವವರಿಗೂ ಇಲ್ಲ ಎನ್ನುವ ರೀತಿ ವಂಚಿಸುವಂತೆ. ಈ ಖದೀಮರ ಮೋಸದ ಆಟ ಹೇಗಿತ್ತು ಅಂತಾ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ.
ಅಂತಾರಾಜ್ಯ ವಂಚಕರ ಜಾಲ ಪತ್ತೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ಹೈಟೆಕ್ ವಂಚಕರದ್ದೇ ಸದ್ದು. ಫೇಸ್‌ಬುಕ್ ಎಂಬ ಮಾಯಾಲೋಕವನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು, ಐಷಾರಾಮಿ ಕಾರುಗಳ ಖರೀದಿ ಮತ್ತು ಮಾರಾಟದ ಹೆಸರಿನಲ್ಲಿ ಭಾರೀ ದೋಖಾ ಮಾಡುತ್ತಿದ್ದರು. ಮೈಸೂರು ಮೂಲದ ಅಭಿಷೇಕ್ ಎಂಬುವವರು ನೀಡಿದ ದೂರಿನ ಬೆನ್ನತ್ತಿದ ಮೈಸೂರು ಜಿಲ್ಲಾ ಪೊಲೀಸರು, ಈಗ ಅಂತಾರಾಜ್ಯ ವಂಚಕರ ಜಾಲವನ್ನೇ ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ: ಅಸಲಿ ಬದಲಿಗೆ ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!
ಪ್ರಕರಣದ ಪ್ರಮುಖ ಆರೋಪಿಗಳಾದ ರುಮಾನ್ ಷರೀಫ್, ಮುಜಾಹಿದ್ ಫಾಷಾ, ಶಾಹಬುದ್ದಿನ್ ಅವರನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇವರಿಂದ ಬರೋಬ್ಬರಿ ಒಂದು ಕೋಟಿ, ಹತ್ತು ಲಕ್ಷ ರೂ ಮೌಲ್ಯದ 8 ಐಶಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಗ್ಯಾಂಗ್ ಬಳಸುತ್ತಿದ್ದ ಐಡಿಯಾ ಕೇಳಿದರೆ ನೀವು ಶಾಕ್ ಆಗುತ್ತೀರಾ.
ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿ ವಂಚನೆ
ಹಳೇ ಐಷಾರಾಮಿ ಕಾರುಗಳನ್ನು ಉತ್ತಮ ಬೆಲೆಗೆ ಖರೀದಿಸಲು ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಲಾಗುತ್ತಿದೆ. ನಂಬಿದ ನಿಮಗೆ ಅಲ್ಪ ಸ್ವಲ್ಪ ಮುಂಗಡ ಹಣ ನೀಡಿ ಕಾರನ್ನು ಪಡೆಯುತ್ತಿದ್ದರು. ಅದೇ ಕಾರನ್ನು ಮತ್ತೆ ಯಾರಿಗೋ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹೊಸ ಅಲಂಕರಿಸಿದ ಕಾರಿನ ಅಸಲಿ ದಾಖಲಾತಿ ಕೇಳಿದಾಗ ರಾತ್ರೋರಾತ್ರಿ ನಾಪತ್ತೆಯಾಗುತ್ತಿದ್ದರು.
ಇತ್ತ ಕಾರಿನ ಅಸಲಿಗೂ ಹಣ ಸಿಗದೆ, ಅತ್ತ ಕಾರು ಖರೀದಿಸಿದವರಿಗೂ ದಾಖಲಾತಿ ಸಿಗದೆ ಇಬ್ಬರಿಗೂ ನಾಮ ಹಾಕಲು ಈ ಖದೀಮರು. ಮೈಸೂರು ಜಿಲ್ಲಾ ಪೊಲೀಸ್, ಎಸ್ಪಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿತ್ತು, ಈ ಜಾಲದ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನೋದನ್ನ ಪತ್ತೆ ಹಚ್ಚಲು ಮುಂದಾಗಿದೆ. ಸದ್ಯ ಎಂಟು ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಾರಿನ ಮೂಲ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಣದ ಮಳೆ ಸುರಿಸ್ತೀವಿ ಅಂದೋರು ಮಾಡಿದ್ರು ಚೀಟಿಂಗ್; ಲಕ್ಷ ಲಕ್ಷ ಪಂಗನಾಮ
ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಆಕರ್ಷಕ ಡೀಲ್‌ಗಳ ಹಿಂದೆ ಇಂತಹ ದೊಡ್ಡ ವಂಚನೆ ಜಾಲ ಇರುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಇನ್ನಾದರೂ ಸಾರ್ವಜನಿಕರು ಆನ್‌ಲೈನ್ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.