ಮಂಗಳೂರು, ಡಿಸೆಂಬರ್ 20: ಧಾರ್ಮಿಕ ಹಿನ್ನೆಲೆಯ ಕೋಳಿ ಕಾಳಗಕ್ಕೆ ಪೊಲೀಸರಿಂದ ನಿರ್ಬಂಧ ಬೆನ್ನಲ್ಲೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ತಾವೇ ಮುಂದೆ ನಿಂತು ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ (ಅಶೋಕ್ ಕುಮಾರ್ ರೈ) ಕೋಳಿ ಅಂಕ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಗ್ರಾಮದ ಸಮೀಪ ಘಟನೆ ನಡೆದಿದೆ. ನಾನಿಲ್ಲೆ ಇರ್ತೇನೆ ನೀವು ಕೋಳಿ ಅಂಕ ಮುಂದುವರಿಸಿ. ಬಂಧಿಸುವುದಾದರೆ ಮೊದಲು ನನ್ನನ್ನು ಬಂಧಿಸಿ ಎಂದು ಶಾಸಕ ಹೇಳಿದರು.
ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನೆಲೆ ವರ್ಷಕ್ಕೊಮ್ಮೆ ಕೋಳಿ ಅಂಕ ನಡೆಯುತ್ತಿದೆ. ಜೂಜು ಕಟ್ಟದೆ ಕೇವಲ ಪದ್ಧತಿಗಾಗಿ ಕೋಳಿ ಕಾಳಗ ಮಾಡಿದರು. ಆದರೆ ಈ ಕೋಳಿ ಅಂಕ ಮಾಡದಂತೆ ವಿಟ್ಲ ನಿರ್ಬಂಧ ಹೇರಿದ್ದರು. ಖುದ್ದು ಸ್ಥಳಕ್ಕೆ ಬಂದ ಅಶೋಕ್ ಕುಮಾರ್ ರೈ, ಕೋಳಿ ಅಂಕ ನಡೆಸಲು ಅನುಕೂಲ ಮಾಡಿದರು. ಈ ವೇಳೆ ಕೋಳಿ ಅಂಕ ಕಾನೂನು ಬಾಹಿರ ಎಂದ ಸಬ್ಇನ್ಸ್ ಪೆಕ್ಟರ್ ಗೆ, ಇದು ಧಾರ್ಮಿಕವಾಗಿ ನಡೆಯುವ ಕೋಳಿ ಅಂಕ. 3 ದಿನದ ಬದಲು 1 ದಿನ ನಡೆಯಲಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ.
ಕಾನೂನಿಗೆ ವಿರುದ್ಧವಾಗಿ ನಾವು ಯಾವುದನ್ನು ಮಾಡಿಲ್ಲ: ಅಶೋಕ್ ಕುಮಾರ್ ರೈ
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಕಾನೂನಿಗೆ ವಿರುದ್ಧವಾಗಿ ನಾವು ಯಾವುದನ್ನು ಮಾಡಿಲ್ಲ. ಪ್ರತಿ ವರ್ಷ ಮೂರು ದಿನ ಕೋಳಿ ಅಂಕ ನಡೆಯುತ್ತೆ. ಇಲ್ಲಿ ಸಾವಿರಾರು ಜನ ದೇವರಲ್ಲಿ ಹರಕೆ ಹೊತ್ತಿರುತ್ತಾರೆ. ಇಲ್ಲಿ ಯಾವುದೇ ಜೂಜುಗಳಿಲ್ಲ, ಧಾರ್ಮಿಕ ನಂಬಿಕೆ. ಹರಕೆ ರೂಪದಲ್ಲಿ ಕೋಳಿ ತಂದು ಅಂಕ ಮಾಡಿಸ್ತಾರೆ ಎಂದರು.
ಇದನ್ನೂ ಓದಿ: ಬಿಸಿಯೂಟದಲ್ಲಿ ಹುಳುಗಳ ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗೆ ಬಂತು ಗುಣಮಟ್ಟದ ಬೇಳೆ
ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿಲ್ಲ ಅಂತಾ ಗೊತ್ತಿದೆ, ಆದರೆ ಇದು ಧಾರ್ಮಿಕ ಜನರ ಭಾವನೆಗಳ ವಿಚಾರಕ್ಕೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದೇನೆ. 3 ಗಂಟೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೆವು. ಆದರೂ ಸಹ ಜನರನ್ನ ಚದುರಿಸಲು ಯತ್ನಿಸಿದ್ದಾರೆ. ಧರ್ಮವನ್ನು ಕಿತ್ತುಕೊಳ್ಳುವ ಪ್ರಯತ್ನ ಆಗ್ತಿದೆ. ನನ್ನ ವಿಧಾನಸಭಾ ಕ್ಷೇತ್ರದ ಜನರು ನನ್ನ ಬಳಿ ಹೇಳಿದರು. ನಾನು ಜನರ ಜೊತೆಗೆ ಮೂರು ಗಂಟೆಗಳ ಕಾಲ ಇದ್ದೆ. ಜನರು ತಮ್ಮ ಹರಕೆಯನ್ನು ತೀರಿಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.