ರಣಬೀರ್ ರಾಮಾಸ್ತ್ರ ರಿವೀಲ್.. ಥ್ರಿಲ್ ಆದ ಫ್ಯಾನ್ಸ್..!ಆಸ್ಕರ್ ವಿಜೇತ ಕಂಪನಿಯಿಂದ ರಾಮಾಯಣ VFX
ಭಾರತದ ಬಹುನಿರೀಕ್ಷೆಯ ಸಿನಿಮಾ ರಾಮಾಯಣ (Ramayana) ಸಿನಿಮಾದ ಮೊದಲ ಟೀಸರ್ ಹೊರಬಂದಿದೆ. ಹನುಮ ಜಯಂತಿ ದಿನ ರಾಮನ ಪಾತ್ರವನ್ನ ಪರಿಚಯಿಸೋ ಟೀಸರ್ ರಿಲೀಸ್ ಮಾಡಿದೆ ರಾಮಾಯಣ ಟೀಂ. ಹಿಂದೂ ಪುರಾಣದ ಪುಣ್ಯಕಥೆಯನ್ನ ತಾಂತ್ರಿಕ ವೈಭವದೊಂದಿಗೆ ತೋರಿಸಹೊರಟಿರೋ ಈ ಸಿನಿಮಾ ಹೇಗೆ ಮೂಡಿಬಂದಿದೆ. ರಣಬೀರ್ ರಾಮಾಸ್ತ್ರ ಹೇಗಿದೆ..? ಇಲ್ಲಿದೆ ಮಾಹಿತಿ..
ಹಿಂದೂ ದಿವ್ಯ ಪುರಾಣ.. ತೆರೆ ಮೇಲೆ ದೃಶ್ಯ ವೈಭವ..!
ಯೆಸ್ ಧುರಂಧರ್ ಬಳಿಕ ಇಡೀ ಭಾರತೀಯ ಸಿನಿರಂಗ ಕಾಯ್ತಾ ಇರೋ ವರ್ಷದ ಮತ್ತೊಂದು ಮೆಗಾಮೂವಿ ಅಂದ್ರೆ ರಾಮಾಯಣ. ಎರಡು ಭಾಗಗಳಲ್ಲಿ ಬರಲಿರೋ ರಾಮಾಯಣದ ಮೊದಲ ಪಾರ್ಟ್ ಈ ವರ್ಷ ದೀಪಾವಳಿಗೆ ರಿಲೀಸ್ ಆಗಲಿದೆ. ಸದ್ಯ ರಾಮಾಯಣ ಸಿನಿಮಾದ ರಾಮನ ಪಾತ್ರ ಪರಿಚಯಿಸೋ ಮೊದಲ ಟೀಸರ್, ಹನುಮ ಜಯಂತಿ ಪ್ರಯುಕ್ತ ರಿವೀಲ್ ಆಗಿದೆ.
ಟೀಸರ್ ಶುರುವಾಗುತ್ತಿದ್ದಂತೆ ನಮಗೆ ಕಾಣೋದು ಅಯೋಧ್ಯೆಯ ಆ ಭವ್ಯತೆ! ಸಿಜಿಐ ಮತ್ತು ವಿಎಫ್‌ಎಕ್ಸ್ ಕೆಲಸಗಳು ಎಷ್ಟು ಅದ್ಭುತವಾಗಿವೆ ಎಂದರೆ, ನಾವು ನಿಜವಾಗಿಯೂ ತ್ರೇತಾಯುಗಕ್ಕೆ ಹೋದ ಅನುಭವವಾಗುತ್ತದೆ. ಪ್ರಕೃತಿಯ ಸೌಂದರ್ಯ, ಅರಮನೆಯ ವೈಭವ ಮತ್ತು ಆ ಶಿಸ್ತುಬದ್ಧ ಮೇಕಿಂಗ್ ಸಿನಿಪ್ರಿಯರ ಕಣ್ಣು ಕೋರೈಸುವಂತಿದೆ
ಆಸ್ಕರ್ ವಿಜೇತ ಕಂಪನಿಯಿಂದ ರಾಮಾಯಣ VFX
ಹೌದು 8 ಆಸ್ಕರ್ಗಳನ್ನ ಗಳಿಸಿರೋ ವಿಶ್ವಪ್ರಸಿದ್ದ DNEG ಕಂಪನಿ, ಈ ಸಿನಿಮಾದ VFX ಜವಾಬ್ದಾರಿ ವಹಿಸಿಕೊಂಡಿದೆ. ಯಶ್, ನಮಿತ್ ಮಲ್ಹೋತ್ರಾ ಜೊತೆ ನಿರ್ಮಾಣದಲ್ಲಿ ಪಾಲುದಾರಿಕೆ ಕೂಡ ಹೊಂದಿದೆ. ಸದ್ಯ ರಿಲೀಸ್ ಆಗಿರೋ ಟೀಸರ್ನಲ್ಲಿರೋ ದೃಶ್ಯವೈಭವ, ಸಣ್ಣ ಸಣ್ಣ ಡಿಟೈಲಿಂಗ್ ನೋಡ್ತಾ ಇದ್ರೆ ಖಂಡಿತ ಇದು ವಿಶೇಷ ಅನುಭವ ನೀಡುವ ಚಿತ್ರವಾಗುತ್ತೆ ಅನ್ನೋ ಭರವಸೆ ಮೂಡಿಸ್ತಾ ಇದೆ.
ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್
ಈ ಸಿನಿಮಾ ಶುರುವಾದಾಗಿನಿಂದಲೂ ಎಲ್ಲರೂ ಕಾತರದಿಂದ ಕಾಯ್ತಿದ್ದಿದ್ದು ರಣಬೀರ್ ಕಪೂರ್ ‘ಶ್ರೀರಾಮ’ನ ಅವತಾರ ನೋಡಲಿಕ್ಕೆ. ರಣಬೀರ್ ಕಣ್ಣುಗಳಲ್ಲಿನ ಆ ಶಾಂತತೆ, ಮುಖದಲ್ಲಿನ ತೇಜಸ್ಸು ಮತ್ತು ಅವರ ನಡಿಗೆಯ ಗಾಂಭೀರ್ಯ.. ಅಬ್ಬಾ! ರಾಮನ ಪಾತ್ರಕ್ಕೆ ರಣಬೀರ್ ಅಕ್ಷರಶಃ ಜೀವ ತುಂಬಿದ್ದಾರೆ ಅನ್ನೋದರಲ್ಲಿ ಡೌಟೇ ಇಲ್ಲ. ಬ್ರಹ್ಮಾಸ್ತ್ರದ ನಂತರ ರಣಬೀರ್ ಮತ್ತೊಮ್ಮೆ ಪೌರಾಣಿಕ ಲೋಕಕ್ಕೆ ನಮ್ಮನ್ನ ಕರೆದೊಯ್ಯಲು ಸಜ್ಜಾಗಿದ್ದಾರೆ.”
ಒಂದೇ ಒಂದು ಶಾಟ್.. ಯಶ್ ಫ್ಯಾನ್ಸ್ಗೆ ರೋಮಾಂಚನ
ಹೌದು ಈ ಟೀಸರ್ನಲ್ಲಿ ರಾವಣ ಪಾತ್ರಧಾರಿ ಯಶ್ ನ ರಿವೀಲ್ ಮಾಡಿಲ್ಲ. ಆದ್ರೆ ಯಶ್ ರ ಒಂದೇ ಬ್ಯಾಕ್ ಶಾಟ್ ಟೀಸರ್ನಲ್ಲಿದೆ ಅಷ್ಟರಿಂದಲೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಸಲಿಗೆ ರಾಮಾಯಣ ಪಾರ್ಟ್-1 ಕೊನೆಗೆ ರಾವಣನ ಎಂಟ್ರಿ ಆಗಲಿದೆ. ಪಾರ್ಟ್-2 ನಲ್ಲಿ ರಾವಣನ ರಾಕಿಂಗ್ ಎಪಿಸೋಡ್ ಇರಲಿದೆ.
ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಪರಸ್ಪರ ಎದುರಾಳಿ ಪಾತ್ರಗಳಲ್ಲಿ ನಟಿಸ್ತಾ ಇರೋದು, ಫ್ಯಾನ್ಸ್ ನ ಹುಚ್ಚೆಬ್ಬಿಸಲಿದೆ. ಇವರೊಂದಿಗೆ ಸೀತಾಮಾತೆ ಪಾತ್ರದಲ್ಲಿ ಸಾಯಿ ಪಲ್ಲವಿ , ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸ್ತಾ ಇದ್ದಾರೆ. ಆಸ್ಕರ್ ವಿಜೇತ ಸಂಗೀತಗಾರರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ನೀಡ್ತಾ ಇದ್ದಾರೆ.
ಸದ್ಯ ರಾಮನ ಪರಿಚಯಿಸೋ ಟೀಸರ್ ಮೂಲಕ ಈ ಚಿತ್ರತಂಡ ದೊಡ್ಡ ಅಲೆ ಎಬ್ಬಿಸಿದೆ. ‘ರಾಮಾಯಣ: ಭಾಗ 1’ 2026ರ ದೀಪಾವಳಿ ಹಬ್ಬದಂದು ವರ್ಲ್ಡ್ವೈಡ್ ತೆರೆಕಾಣಲಿದೆ. ಎರಡನೇ ಭಾಗ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಹಿಂದೂ ಪುರಾಣ ಪುಣ್ಯ ಕತೆಯನ್ನ ಬಿಗ್ ಸ್ಕ್ರೀನ್ ಮೇಲೆ ದೃಶ್ಯ ವೈಭವದಲ್ಲಿ ನೋಡೋ ಚಾನ್ಸ್ ಫ್ಯಾನ್ಸ್ ಗೆ ಸಿಗಲಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..