ಇತ್ತೀಚೆಗೆ ಬಿಡುಗಡೆ ಆದ ‘ಧುರಂಧರ’ (ಧುರಂಧರ) ಸಿನಿಮಾದ ಹವಾ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ. ಸಿನಿಮಾ ನೋಡಿದವರು ಮೆಚ್ಚಿದ್ದಾರೆ. ರಣವೀರ್ ಸಿಂಗ್ (ರಣವೀರ್ ಸಿಂಗ್) ಅವರಿಗೆ ಈ ಸಿನಿಮಾದಿಂದ ಸೂಪರ್ ಸಕ್ಸಸ್ ಸಿಕ್ಕಿದೆ. ದೇಶಭಕ್ತಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. 9ನೇ ದಿನ ಕೂಡ ಈ ಚಿತ್ರಕ್ಕೆ 50 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಆಗಿದೆ. ಆ ಮೂಲಕ ನಿರ್ಮಾಪಕರಿಗೆ ಭರ್ಜರಿ ಲಾಭ ಮಾಡಿಕೊಟ್ಟಿದೆ. 9 ದಿನಕ್ಕೆ ‘ಧುರಂಧರ’ ಸಿನಿಮಾದ ಒಟ್ಟು ಕಲೆಕ್ಷನ್ (ಧುರಂಧರ್ ಬಾಕ್ಸ್ ಆಫೀಸ್ ಕಲೆಕ್ಷನ್) 292 ಕೋಟಿ ರೂಪಾಯಿ ಆಗಿದೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಅವರು ‘ಧುರಂಧರ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಉರಿ’ ರೀತಿಯೇ ‘ಧುರಂಧರ’ ಸಿನಿಮಾದಲ್ಲಿ ಕೂಡ ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ. ಈ ಸಿನಿಮಾದ ಕಥೆ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಜನರು ಮುಗಿದು ಸಿನಿಮಾ ನೋಡುತ್ತಿದ್ದಾರೆ.
ಮೊದಲ ದಿನ ‘ಧುರಂಧರ’ ಸಿನಿಮಾಗೆ 28 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. 2ನೇ ದಿನ 32 ಕೋಟಿ ರೂಪಾಯಿ ಆಯಿತು. 3ನೇ ದಿನ 43 ಕೋಟಿ, 4ನೇ ದಿನ 23.25 ಕೋಟಿ ರೂಪಾಯಿ, 5, 6 ಹಾಗೂ 7ನೇ ದಿನ ತಲಾ 27 ಕೋಟಿ ರೂಪಾಯಿ, 8ನೇ ದಿನ 32.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಚ್ಚರಿ ಎಂದರೆ, ಈ ಎಲ್ಲ ದಿನಗಳಲ್ಲಿ 9ನೇ ದಿನ ಬರೋಬ್ಬರಿ 53 ಕೋಟಿ ರೂಪಾಯಿ ಬಂದಿದೆ ಎಂದು sacnilk ಅಂದಾಜಿಸಿದೆ.
ಡಿಸೆಂಬರ್ 5ರಂದು ‘ಧುರಂಧರ’ ಸಿನಿಮಾ ಬಿಡುಗಡೆ ಆಯಿತು. ಅದರ ನಂತರದ ವಾರ ‘ದಿ ಡೆವಿಲ್’, ‘ಅಖಂಡ 2’ ಸಿನಿಮಾಗಳು ತೆರೆಕಂಡವು. ಆ ಸಿನಿಮಾಗಳ ಎದುರಿನಲ್ಲಿ ‘ಧುರಂಧರ’ ಸಿನಿಮಾ ಗಟ್ಟಿಯಾಗಿ ನಿಂತಿದೆ. ಬೇರೆ ಎಲ್ಲ ಸಿನಿಮಾಗಳಿಗೆ ಖಡಕ್ ಫೈಟ್ ನೀಡುತ್ತಾ ನೂರಾರು ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. 10ನೇ ದಿನವಾದ ಭಾನುವಾರ (ಡಿಸೆಂಬರ್ 14) ಕೂಡ ಈ ಚಿತ್ರಕ್ಕೆ ದೊಡ್ಡ ಮೊತ್ತದ ಕಲೆಕ್ಷನ್ ಆಗಲಿದೆ.
ಇದನ್ನೂ ಓದಿ: ‘ಧುರಂಧರ’ ಚಿತ್ರವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್
ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ನಾಯಕಿಯಾಗಿ ಸಾರಾ ಅರ್ಜುನ್ ಅವರು ನಟಿಸಿದ್ದಾರೆ. ಅಕ್ಷಯ್ ಖನ್ನಾ, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್, ರಾಕೇಶ್ ಬೇಡಿ, ಆರ್. ಮಾಧವನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ವಿಶೇಷವಾಗಿ ಅಕ್ಷಯ್ ಖನ್ನಾ ಅವರ ಅಭಿನಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.