ಬೆಂಗಳೂರು, ಜನವರಿ 24: ಕರ್ನಾಟಕದಲ್ಲಿ (ಕರ್ನಾಟಕ) ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಸೂಚನೆಗಳು ಕಂಡುಬಂದಿವೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಉಂಟಾಗಿದ್ದ ಗದ್ದಲದ ಬೆನ್ನಲ್ಲೇ, ಈ ಬಾರಿ ಗಣರಾಜ್ಯೋತ್ಸವದ ಭಾಷಣವೇ ಹೊಸ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಸಂಪ್ರದಾಯದಂತೆ ಗಣರಾಜ್ಯೋತ್ಸವದಂದು ರಾಜ್ಯಪಾಲರು ಓದುವ ಭಾಷಣವನ್ನು ರಾಜ್ಯ ಸರ್ಕಾರವೇ ತಯಾರಿಸಿದೆ. ಆದರೆ ಈ ಬಾರಿ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದ ನೀತಿಗಳ ಕುರಿತು ತೀವ್ರ ಟೀಕೆಗಳಿರುವುದು ರಾಜ್ಯಪಾಲರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಕ್ಕೆ ಅನ್ಯಾಯ, ಅನುದಾನ ಹಂಚಿಕೆಯಲ್ಲಿ ನಡೆಯುತ್ತಿರುವ ತಾರತಮ್ಯ, ಮಲತಾಯಿ ಧೋರಣೆ ಸೇರಿದಂತೆ ಹಲವು ಅಂಶಗಳನ್ನು ನಮೂದಿಸಲಾಗಿದೆ. ಈ ಅಂಶಗಳು ಕೇಂದ್ರ ಸರ್ಕಾರವನ್ನು ಟೀಕಿಸುವಂತಿದೆ, ಅಂತಹ ಭಾಷಣವನ್ನು ಓದುವುದಿಲ್ಲ ಎಂದು ರಾಜ್ಯಪಾಲರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಟ್ಟು ಬಿಡದ ರಾಜ್ಯಪಾಲರು
‘ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ಅಂಶಗಳಿದ್ದರೆ ಅದನ್ನು ಓದಲು ಸಾಧ್ಯವಿಲ್ಲ. ಸರ್ಕಾರ ತಿದ್ದುಪಡಿ ಮಾಡದಿದ್ದರೆ, ನಾನೇ ಸಿದ್ಧಪಡಿಸಿದ ಭಾಷಣವನ್ನು ಓದುತ್ತೇನೆ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಧಾನಸಭೆಯಲ್ಲಿ ನಡೆದಿತ್ತು ಹೈಡ್ರಾಮಾ
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಭಾರಿ ಗದ್ದಲ ಉಂಟಾಗಿತ್ತು. ಭಾಷಣದ ಕೆಲವು ಭಾಗಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಮೊದಲೇ ಸೂಚಿಸಿದ್ದರು. ಆದರೆ, ರಾಜ್ಯಪಾಲರಿಂದ ಭಾಷಣ ಓದಿಸಿಯೇ ಸಿದ್ಧ ಸರ್ಕಾರ ಎಂದು ಹಿಡಿದಿತ್ತು. ಕೊನೆಗೆ ರಾಜ್ಯಗಳು ಸರ್ಕಾರ ಸಿದ್ಧಪಡಿಸಿದ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರದ ಲೈನ್ ಮಾತ್ರ ಓದಿ, ಶುಭಾಶಯ ಕೋರಿ ಸರ್ಕಾರಕ್ಕೆ ಶಾಕ್ ಕೊಟ್ಟು ವಿಧಾನಸಭೆಯಿಂದ ಹೊರನಡೆದಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಾಯಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು, ಸರ್ಕಾರದ ಭಾಷಣವನ್ನು ಓದಲು ನಕಾರ: ವಿಧಾನಸಭೆಯಲ್ಲಿ ಹೈಡ್ರಾಮಾ
ಆ ಘಟನೆಯ ಬಳಿಕವೂ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಪರಿಸ್ಥಿತಿ ತಿಳಿಯಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಈಗ ಗಣರಾಜ್ಯೋತ್ಸವದ ಭಾಷಣದ ವಿಷಯವೇ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಿಡಿ ಹಚ್ಚಿದೆ. ಇದರಿಂದ ರಾಜ್ಯಗಳು ಮತ್ತು ರಾಜ್ಯ ಸರ್ಕಾರ ನಡುವಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಸರ್ಕಾರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡುತ್ತದೆಯೇ? ಅಥವಾ ರಾಜ್ಯಪಾಲರು ಸ್ವತಂತ್ರವಾಗಿ ಭಾಷಣ ಸಿದ್ಧಪಡಿಸುವರೇ? ಎಂಬುದು ಈಗ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 2:41 pm, ಶನಿ, 24 ಜನವರಿ 26