ಶನೈಶ್ಚರ ಅಥವಾ ಶನಿ ಗ್ರಹ ಒಂದು ರಾಶಿಯಲ್ಲಿ ಮೂವತ್ತು ತಿಂಗಳು ಅಥವಾ ಎರಡೂವರೆ ವರ್ಷ ಇರುತ್ತದೆ. ಅದರಲ್ಲಿ ಕೆಲವು ಬಾರಿ ವಕ್ರೀ ಸಂಚಾರ ಮಾಡುತ್ತದೆ. ಆ ಅವಧಿಯಲ್ಲಿ ಶನಿಯ ಪ್ರಭಾವ ತೀಕ್ಷ್ಣವಾಗಿದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ವಕ್ರಸ್ಯ ಅಧಿಕ ಬಲ ಎಂಬ ಪ್ರಮಾಣ ಇದೆ. ವಕ್ರ ಗತಿಯಲ್ಲಿ ಸಂಚರಿಸುವ ಗ್ರಹ ಬಲಿಷ್ಠ ಮತ್ತು ಫಲವನ್ನು ಸಹ ಬಲವಾಗಿ ನೀಡಲಾಗುತ್ತದೆ. ರಾಹು- ಕೇತು ಎರಡನ್ನು ಬಿಟ್ಟು ಉಳಿದ ಗ್ರಹಕ್ಕೆ ಇದು ಅನ್ವಯಿಸುತ್ತದೆ. ಏಕೆಂದರೆ ರಾಹು- ಕೇತು ಚಲನೆಯೇ ಅಪ್ರದಕ್ಷಿಣೆಯ. ಈಗ ಮತ್ತೆ ಶನಿ ವಕ್ರ ತ್ಯಾಗದ ವಿಚಾರಕ್ಕೆ ಬರುವುದಾದರೆ, ಜುಲೈ 13 ರಂದು ತಾರೀಕಿನಿಂದ ವಕ್ರ ಗತಿಯಲ್ಲಿ ಸಂಚಾರ ನಡೆಸುತ್ತಿದೆ ಈ ಮಂದ ಗ್ರಹವು ಇದೇ ನವೆಂಬರ್ 28 ರಂದು ತಾರೀಕು ವಕ್ರತ್ಯಾಗ ನಡೆಯಲಿದೆ.
ಹೀಗೆ ಮಾಡುವುದರಿಂದ ಮೇಷ, ಮಿಥುನ, ಸಿಂಹ, ವೃಶ್ಚಿಕ, ಧನುಸ್ಸು ಹಾಗೂ ಮೀನ ರಾಶಿಯವರ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ವೃಷಭ, ತುಲಾ, ಮಕರ ರಾಶಿಯವರಿಗೆ ಶುಭ ಫಲಗಳು ದೊರೆಯುವುದಕ್ಕೆ ಮತ್ತೆ ಆರಂಭವಾಗುತ್ತದೆ. ಮುಖ್ಯವಾಗಿ ಕುಂಭ ರಾಶಿಯವರು ಅನುಭವಿಸುತ್ತಿರುವ ಯಾತನೆ ಕಡಿಮೆ ಆಗುತ್ತದೆ. ದೇಹದ ಆರೋಗ್ಯ ವಿಚಾರದಲ್ಲಿ ಕುಂಭ ರಾಶಿಯವರಿಗೆ ಈಗ ಎದುರಿಸುತ್ತಿರುವ ತೊಂದರೆಗಳು ಕಡಿಮೆಯಾಗುತ್ತಾ ಬರುತ್ತದೆ. ಅದಕ್ಕೆ ಪೂರಕವಾಗಿ ಆರನೇ ಮನೆ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿರುವ ಗುರು ಗ್ರಹವು ಡಿಸೆಂಬರ್ ಐದನೇ ತಾರೀಕಿನಿಂದ ಐದನೇ ಮನೆ ಆಗುವ ಮಿಥುನ ರಾಶಿಗೆ ಬರುವುದು ಕುಂಭ ರಾಶಿಯವರಿಗೆ ಮತ್ತೂ ಒಳ್ಳೇ ವಿಚಾರ ಆಗಲಿದೆ.
ಇದೀಗ ಶನಿ ವಕ್ರ ತ್ಯಾಗ ಮಾಡುವುದರ ಫಲ ಮೇಷದಿಂದ ಮೀನ ರಾಶಿಯ ತನಕ ಯಾರಿಗೆ ಎಂಬ ವಿವರ ಹೀಗಿದೆ:
ಮೇಷ:
ಕಳೆದ ಜುಲೈನಿಂದ ಈಚೆಗೆ ನಿಮಗೆ ಲಾಭ ತಂದುಕೊಟ್ಟಿದ್ದ ವ್ಯವಹಾರಗಳಿಂದ ಆಚೆ ಬರುವುದಕ್ಕೆ ಸಾಧ್ಯವಾದಾಗ ಲಾಭ (ಪ್ರಾಫಿಟ್ ಬುಕ್ಕಿಂಗ್) ಹೊರಗೆ ಬಂದು ಬೀಳುವುದು ಒಳ್ಳೆಯದು. ಹೊಸ ಹೂಡಿಕೆಗಳನ್ನು ಇನ್ನು ಮುಂದೆ ಮಾಡುವ ಮುನ್ನ ಸಾವಿರ ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ. ಇನ್ನು ನಿಮಗೆ ತಿಳಿವಳಿಕೆ ಇಲ್ಲದ ಅಥವಾ ಹೊಸದಾದ ವ್ಯವಹಾರಕ್ಕೆ ಹೆಜ್ಜೆ ಇಡುವುದಕ್ಕೆ ಹೋಗಬೇಡಿ. ಅತಿಯಾದ ಬುದ್ಧಿವಂತಿಕೆ- ಅತಿಯಾದ ಆತ್ಮವಿಶ್ವಾಸ ಎರಡೂ ಒಳ್ಳೆಯದಲ್ಲ. ಭೂಮಿ ವ್ಯವಹಾರಗಳು ವ್ಯಾಜ್ಯಗಳಾಗಿ ಪರಿವರ್ತನೆ ಆಗಬಹುದು. ಕಾನೂನು ವ್ಯಾಪ್ತಿಯಲ್ಲಿರುವ ವಿಚಾರಗಳಿಗೆ ಮಾತ್ರ ತಲೆ ಹಾಕಿ. ಅಗತ್ಯ ಕಂಡುಬಂದಲ್ಲಿ ಕಾನೂನು ಸಲಹೆ ಪಡೆದುಕೊಳ್ಳಿ. ಹೊಸದಾಗಿ ದೊಡ್ಡ ಪ್ರಾಜೆಕ್ಟ್ ಗಳಿಗೆ ಹಣ ಹಾಕದಿರುವುದು ಕ್ಷೇಮ.
ವೃಷಭ:
ಉದ್ಯೋಗ ಸ್ಥಳದಲ್ಲಿ, ವೃತ್ತಿ ಮಾಡುವ ಕಡೆಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕಿರಿಕಿರಿ ಅನುಭವಿಸುತ್ತಿರುವವರಿಗೆ ಅದು ಸಂಪೂರ್ಣ ನಿವಾರಣೆಯಾಗುತ್ತದೆ. ನಿಮ್ಮಲ್ಲಿ ಯಾರಿಗೆ ಉತ್ತಮ ದಶಾ- ಭುಕ್ತಿ ಸಹ ನಡೆಯುತ್ತಿದೆ ಅಂತಹವರು ಬಡ್ತಿಯನ್ನು ಸಹ ನಿರೀಕ್ಷಿಸಬಹುದು. ತಂದೆ ಅಥವಾ ಸಮಾನರಾದವರಿಂದ ನಿಮಗೆ ಬರಬೇಕಾದ ಹಣಕಾಸು ಇದ್ದಲ್ಲಿ ಅದು ನಿಮ್ಮ ಕೈ ಸೇರುವಂಥ ಯೋಗವಿದೆ. ಜಮೀನು, ಸೈಟು ಅಥವಾ ಆಸ್ತಿ ವಿಚಾರದಲ್ಲಿ ಕಾಗದ- ಪತ್ರ, ದಾಖಲೆಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗಲಿದೆ. ಮುಖ್ಯವಾಗಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಈ ಹಿಂದೆ ನೀವು ಮಾಡಿರುವ ಹೂಡಿಕೆಗಳು ಒಳ್ಳೆ ರಿಟರ್ನ್ಸ್ ನೀಡಲಿವೆ. ಒಂದು ಕೆಲಸಕ್ಕೆ ಹಲವು ಬಾರಿ ಅಲೆದಾಡುತ್ತಿದ್ದ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ಸಲೀಸಾಗಿ ಕೆಲಸ- ಕಾರ್ಯಗಳು ಆಗಲಿವೆ.
ಮಿಥುನ:
ಇದು ಅತ್ಯಂತ ಸಮಯವಾಗಿರುತ್ತದೆ. ಒಂದಲ್ಲಾ ಒಂದು ಕಾರಣಕ್ಕೆ ನೋವು- ಹಿಂಸೆ, ಮುಜುಗರ ಅನುಭವಿಸುವಂತೆ ಆಗುವುದು ಈ ರೀತಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಮೇಲೂ ಗಮನವನ್ನು ನೀಡಿ. ತಮ್ಮ ಸಾಲಕ್ಕೆ ಜಾಮೀನು ನೀಡುವಂತೆ ಯಾರಾದರೂ ಕೇಳಿಕೊಂಡು ಬಂದಲ್ಲಿ “ಆಗುವುದಿಲ್ಲ” ಎಂದು ನೇರಾನೇರ ಹೇಳುವುದು ಉತ್ತಮ. ಅಥವಾ ನೀವು ಯಾರಿಗಾದರೂ ಸಾಲದ ವಿಷಯಕ್ಕೆ ಜಾಮೀನು ನೀಡಿದ್ದಲ್ಲಿ ಮರುಪಾವತಿ ಸರಿಯಾಗಿ ಆಗುತ್ತಿದೆಯಾ ಎಂದು ವಿಚಾರಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಹಣ ಕಟ್ಟುವಂತೆ ಫಾಲೋ ಅಪ್ ಮಾಡಿ. ನಿಮ್ಮ ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಕಡೆಗೆ ಲಕ್ಷ್ಯವನ್ನು ಹೊಂದಿರುತ್ತಾರೆ. ಉದ್ಯೋಗ ಬದಲಾವಣೆ ಎಂದಿದ್ದಲ್ಲಿ ಇನ್ನು ಆರು ತಿಂಗಳು ಮಾಡದಿರುವುದು ಉತ್ತಮ.
ಕರ್ಕಾಟಕ:
ಈ ಶನಿ ವಕ್ರ ತ್ಯಾಗದ ಸಮಾಧಾನ ಹಾಗೂ ಅತಿ ದೊಡ್ಡ ನಿಟ್ಟುಸಿರು ಬಿಟ್ಟಂತೆ ಆಗುವ ರಾಶಿ ಇದ್ದರೆ ಮೊದಲನೆಯದು ನಿಮ್ಮದೇ. ಆರೋಗ್ಯದಲ್ಲಿ ಉತ್ತಮವಾಗಿ ಕಾಣಿಸಲಿದೆ. ಹಣಕಾಸಿನ ವಿಚಾರಕ್ಕೆ ನೀವು ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗೋಪಾಯಗಳು ತೆರೆದುಕೊಳ್ಳಲಿವೆ. ದಂಪತಿ ಮಧ್ಯ ಭಿನ್ನಾಭಿಪ್ರಾಯ ಆಗಿ, ಅದೇನಾದರೂ ವಿಚ್ಛೇದನ ತನಕ ಹೋಗಿದ್ದಲ್ಲಿ ನಿಮ್ಮಲ್ಲಿ ಕೆಲವರಿಗೆ ಮಾತುಕತೆ ಮೂಲಕ ಪರಿಹಾರ ಸಾಧ್ಯವಾಗಲಿದೆ. ಜೀರ್ಣಾಂಗ, ಮೇಧೋಜೀರಕ ಗ್ರಂಥಿಗಳು, ಬೆನ್ನು ನೋವು, ಕಾಲಿನ ಮೀನಖಂಡದ ವಿಪರೀತ ನೋವು, ರಾತ್ರಿ ವೇಳೆ ಸರಿಯಾದ ನಿದ್ರೆ ಇಲ್ಲದಿರುವುದು ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಾ ಇರುವವರಿಗೆ ಸೂಕ್ತ ವೈದ್ಯೋಪಚಾರ, ಆರೋಗ್ಯ ಸುಧಾರಣೆ ಕಾಣುತ್ತಾ ಬರಲಿದೆ. ಕುತ್ತಿಗೆ ತನಕ ಬಂದಂತಹ ಕೆಲವು ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದೆ.
ಸಿಂಹ:
ಖರ್ಚು ವಿಪರೀತಕ್ಕೆ ಹೋಗುತ್ತದೆ. ಸಿಕ್ಕಾಪಟ್ಟೆ ಸಿಟ್ಟು, ಯಾವುದನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಯಿಂದ ನರಳುವಂತೆ ಆಗಲಿದೆ. ನಿಮ್ಮ ಆರೋಗ್ಯ ವಿಚಾರದಲ್ಲಿ ಏಳುಪೇರುಗಳು ಕಾಣಿಸಿಕೊಳ್ಳುತ್ತವೆ. ದೇಹದ ತೂಕ, ಕೊಲೆಸ್ಟ್ರಾಲ್, ಗ್ಯಾಸ್ಟ್ರಿಕ್ ಸಮಸ್ಯೆ ಇಂತಹವುಗಳು ಇದ್ದಲ್ಲಿ ಸರಿಯಾದ ಫಾಲೋ ಅಪ್ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಇನ್ನು ನೀವು ಯಾರಿಂದ ಸಾಲ ಪಡೆದಿದ್ದೀರಿ, ಅವರಿಗೆ ಸಮಯಕ್ಕೆ ಸರಿಯಾಗಿ ಹಿಂತಿರುಗಿಸಲು ಪ್ರಯತ್ನಿಸಿ. ನಿಮಗೆ ಶತ್ರುಗಳ ತೊಂದರೆ ಸಹ ಜಾಸ್ತಿ ಆಗಲಿದೆ. ಕೋರ್ಟ್-ಕಚೇರಿಯಲ್ಲಿ ಪ್ರಕರಣಗಳು ಬಾಕಿ ಉಳಿದಿದ್ದ ರಾಜೀ- ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಆದಲ್ಲಿ ಅದನ್ನು ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ಅವಮಾನವನ್ನು ಎದುರಿಸುವಂತೆ ಆಗಲಿದೆ. ಈ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡಲ್ಲಿ ಮತ್ತೆ ಸಿಗುವುದು ತುಂಬ ಕಷ್ಟವಾಗುತ್ತದೆ.
ಇದನ್ನೂ ಓದಿ: ವಿಭೂತಿ ನಾಮಗಳ ಧಾರಣೆಯ ಆಧ್ಯಾತ್ಮಿಕ ರಹಸ್ಯವೇನು ಗೊತ್ತಾ?
ಕನ್ಯಾ:
ನಿಮ್ಮ ಸುತ್ತ ಮುತ್ತ ಯಾರಿದ್ದಾರೆ, ಯಾರು ಇಷ್ಟ ಸಮಯ ನಿಮಗೆ ಅನುಕೂಲವಾಗುವಂತೆ ಕೆಲಸ ಮಾಡುವಂತೆ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸುತ್ತದೆ. ನಿಮಗೆ ಬರಬೇಕಾಗಿರುವ, ನೀವು ಮಾಡಬೇಕಾದ ಕೆಲಸ ಬಾಕಿ ಬರಬೇಕಾಗಿರುವುದು ಬಾರದಂತೆ ಆಗಲಿದೆ. ನಿಮ್ಮಲ್ಲಿ ಯಾರ ಭೂಮಿಯನ್ನು ಖರೀದಿಸಿ, ಅದರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ, ಅಂತಹವರಿಗೆ ಹಣಕಾಸಿಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿವಾಹ ನಿಶ್ಚಿತಾರ್ಥ ಆಗಿರುವವರು ಮಾತುಕತೆ ಆಡುವಾಗ ಜೋಪಾನವಾಗಿದ್ದಾರೆ. ಏಕೆಂದರೆ, ದಶಾ- ಭುಕ್ತಿಯೂ ಅನುಕೂಲಕರವಾಗಿಲ್ಲ ಅಂತಾದಲ್ಲಿ ಮದುವೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ದಂಪತಿ ಮಧ್ಯೆ ಒಂದಲ್ಲಾ ಒಂದು ಕಾರಣಕ್ಕೆ ವಿರಸ, ಮನಸ್ತಾಪ, ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ವಿದೇಶ ಪ್ರಯಾಣ ಮಾಡಬೇಕಾದವರಿಗೆ ನಾನಾ ಬಗೆಯ ಅಡೆತಡೆಗಳು ಕಾಣಿಸಬಹುದು.
ತುಲಾ:
ಆದಾಯ- ಲಾಭದ ಹರಿವಿನಲ್ಲಿ ಇದ್ದಂಥ ಅಡೆತಡೆಗಳು ನಿವಾರಣೆ ಆಗಲಿದೆ. ದಂಪತಿಗಳು ಮನಸ್ತಾಪ ಇದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ಮುಂದಕ್ಕೆ ಬರುತ್ತಿದ್ದ ವಿಚಾರಗಳಲ್ಲಿ ತಕ್ಷಣವೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ನಾಜೂಕಾದ ಪರಿಸ್ಥಿತಿಯಲ್ಲಿ ಇರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಮಯಕ್ಕೆ ಸರಿಯಾಗಿ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಲಾಗಿದೆ. ನಿಮ್ಮಲ್ಲಿ ಯಾರಿಗೆ ಪಿತ್ರಾರ್ಜಿತವಾದ ಆಸ್ತಿ ಬರಬೇಕಾಗಬಹುದು ಅಂಥವರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಆದರೆ ನಿಮ್ಮ ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ತೀವ್ರತರವಾದ ಜ್ವರ, ವಾಂತಿ, ಭೇದಿ ಇಂಥ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸೂಕ್ತ ವೈದ್ಯೋಪಚಾರ ಮಾಡಿ. ದೇವರಿಗೆ ಹೊತ್ತಿದ್ದ ಹರಕೆಗಳನ್ನು ಪೂರೈಸಿದಾಗ ಈ ಎಲ್ಲ ತಡೆಗಳು ನಿವಾರಣೆ ಆಗಲಿವೆ.
ವೃಶ್ಚಿಕ:
ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆ ಇತ್ಯಾದಿ ವಿಚಾರಗಳು ನಿಮಗೆ ಚಿಂತೆಯಾಗಿ ಪರಿಣಮಿಸಲಿವೆ. ಈ ಹಿಂದೆ ನಿಮ್ಮಿಂದ ಆಗಿದ್ದ ತಪ್ಪು ಈಗ ದೊಡ್ಡ ಸಮಸ್ಯೆಯಾಗಿ ತಲೆ ಎತ್ತಲಿವೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಆಗಲಿದೆ. ನಿಮ್ಮಲ್ಲಿ ಕೆಲವರು ಉದ್ಯೋಗವನ್ನೇ ಬಿಡುವ ನಿರ್ಧಾರಕ್ಕೆ ಬರಬಹುದು. ಸಣ್ಣ- ಪುಟ್ಟದು ಎಂದು ಯಾವ ವಿಷಯವನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನಿಯಮ- ಕಾನೂನು ಮೀರಿ ಯಾವುದೇ ಕೆಲಸವನ್ನು ಮಾಡದಿರಿ. ಇನ್ನು ನಿಮ್ಮ ತಾಯಿಯವರ ಆರೋಗ್ಯದ ಬಗ್ಗೆ ಜಾಸ್ತಿ ಲಕ್ಷ್ಯ ವಹಿಸಿ. ಕೆಲವರು ಪದೇ ಪದೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಗಲಿದೆ. ಇಷ್ಟು ಸಮಯ ನೀವು ಉಳಿಸಿಕೊಂಡು ಬಂದಿದ್ದ ವರ್ಚಸ್ಸು, ಜನಪ್ರಿಯತೆಗೆ ಪೆಟ್ಟು ಬೀಳಲಿದೆ, ನಿಮಗಿರುವ ಸ್ಥಾನ- ಮಾನ, ಹುದ್ದೆಯನ್ನು ಬಿಟ್ಟುಕೊಡುವಂತೆ ಸಹ ಆಗಬಹುದು.
ಧನುಸ್ಸು:
ಕೂಡು ಕುಟುಂಬದಲ್ಲಿ ಇರುವಂಥವರಾದರೆ ಮನೆಯಿಂದ ಪ್ರತ್ಯೇಕ ಹೋಗಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮ ಎಲ್ಲಿಗೆ ಇನ್ನೂ ಇರಬಹುದೇ? ಅಥವಾ ಮದುವೆ ಆಗಿ, ಪ್ರತ್ಯೇಕವಾಗಿ ಮನೆ ಮಾಡುವ ಸಾಧ್ಯತೆಯೂ ಇದೆ. ದೇಹದ ತೂಕ ವಿಪರೀತವಾಗಬಹುದು. ದೀರ್ಘಾವಧಿ ಕಾಯಿಲೆಗಳು ಮಧುಮೇಹ-ರೋಗಕ್ಕೆ ಔಷಧಿ ತೆಗೆದುಕೊಳ್ಳುತ್ತಾ ಇದ್ದಲ್ಲಿ ಡೋಸ್ ಆಗಲೇಬೇಕು ಎಂಬ ಸೃಷ್ಟಿಯಾಗುತ್ತದೆ. ಮನೆ ದುರಸ್ತಿ, ವಾಹನ ರಿಪೇರಿ ಇಂಥವುಗಳಿಗೆ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದೆ. ಅಷ್ಟಾದರೂ ಅದು ಸರಿ ಹೋಗದೆ ಮನಸ್ಸಿಗೆ ಬೇಸರ. ಬಾಯಿಯ ಆರೋಗ್ಯದ ಕಡೆಗೆ ಗಮನವನ್ನು ನೀಡಿ. ಸಣ್ಣ- ಪುಟ್ಟದಾದರೂ ಶಸ್ತ್ರಚಿಕಿತ್ಸೆ ಮಾಡುವಂಥ ಸನ್ನಿವೇಶ ಎದುರಾಗಬಹುದು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ.
ಮಕರ:
ಸಾಡೇಸಾತ್ ಮುಗಿದಿದೆ, ಅನುಕೂಲಕರವಾದ ಸಮಯ ಶುರುವಾಗಿದೆ ಎನ್ನುತ್ತಿದ್ದರಾದರೂ ಅನುಭವ ಆಗುತ್ತಿಲ್ಲ ಅನ್ನುತ್ತಿದ್ದವರಿಗೆ ಈಗ ಸಮಾಧಾನದ ನಿಟ್ಟುಸಿರು ಬಿಡುವಂಥ ಕಾಲ. ಆರೋಪ- ನಿಂದೆ ಎದುರಿಸುತ್ತಾ ಇರುವವರಿಗೆ ಹಾಗೂ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ, ಕೋರ್ಟ್- ಕಛೇರಿಯ ವ್ಯಾಜ್ಯಗಳಲ್ಲಿ ಹೈರಾಣ ಆಗಿರುವವರಿಗೆ ತಾತ್ಕಾಲಿಕವಾಗಿ ನಿರಾಳ ಆಗುವಂಥ ಸಾಧ್ಯತೆ ಇದೆ. ಮುಖ್ಯವಾಗಿ ನಿಮ್ಮ ಬಗ್ಗೆ ಇರುವಂಥ ನಕಾರಾತ್ಮಕ ಭಾವನೆಯನ್ನು ತೊಡೆದುಕೊಳ್ಳಲು ವೇದಿಕೆ ದೊರೆಯಲಿದೆ. ಜುಲೈನಿಂದ ಈಚೆಗೆ ಆರೋಗ್ಯ ಸಮಸ್ಯೆಯಿಂದ ಆತಂಕಕ್ಕೆ ಒಳಗಾಗಿರುವವರಿಗೆ, ಸಂಸಾರದಲ್ಲಿ ಕಿರಿಕಿರಿ ಅನುಭವಿಸುತ್ತಾ ಇರುವವರಿಗೆ, ಹಣಕಾಸಿನ ಹರಿವು ಸಮಾಧಾನಕರವಾಗಿಲ್ಲ ಎನ್ನುವವರಿಗೆ ಈ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ. ನಿಮಗಿಂತ ಬಲಿಷ್ಠರಾದವರ ವೈರತ್ವ ಕಟ್ಟಿಕೊಳ್ಳದಂತೆ ಎಚ್ಚರಿಕೆ ವಹಿಸಿ.
ಕುಂಭ:
ಕಳೆದ ನಾಲ್ಕು- ನಾಲ್ಕೂವರೆ ತಿಂಗಳಿನಿಂದ ತೀವ್ರತರವಾದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಲ್ಲಿ ಕಾಣಿಸಿಕೊಳ್ಳಲಿದೆ. ಮುಖ್ಯವಾಗಿ ಸೂಕ್ತೋಪಚಾರ ದೊರೆಯಲಿದೆ. ನೀವು ಯಾವ ವಿಚಾರಕ್ಕೆ ಪೂರ್ತಿಯಾಗಿ ವಿಶ್ವಾಸವನ್ನೇ ಕಳೆದುಕೊಂಡಿದ್ದರೋ ನಿಮಗೆ ಮತ್ತೊಮ್ಮೆ ವಿಶ್ವಾಸ ಮೂಡಲಿದೆ. ಆದರೆ ನೀವು ದುರ್ಗಾದೇವಿ ಆರಾಧನೆಯನ್ನು ಮಾಡುವುದು ಬಹಳ ಮುಖ್ಯ. ಸ್ವಲ್ಪ ಮಟ್ಟಿನ ಫಲಿತಾಂಶ ಕಾಣಿಸಿಕೊಂಡಿತು ಎಂಬ ಕಾರಣಕ್ಕೆ ಅತ್ಯುತ್ಸಾಹದಿಂದ ಎಲ್ಲ ಕೆಲಸವನ್ನು ಮಾಡಲು ಹೊರಟು ಬಿಡಬೇಡಿ. ಸಂಗಾತಿಯ ಮಾತನ್ನು ಗೌರವಿಸುವುದು ಬಹಳ ಮುಖ್ಯ. ನಿಮಗೆ ಈ ಅವಧಿಯಲ್ಲಿ ತಾವಾಗಿಯೇ ಹಣವನ್ನು ನೀಡಲು ಮುಂದಾಗುತ್ತಾರೆ. ಬಡ್ಡಿಯೇ ಇಲ್ಲ ಅಥವಾ ಕಡಿಮೆ ಬಡ್ಡಿ ಅಂತಲೋ ಸಾಲಲ್ಲಿ ಆ ನಂತರ ಪಡಿಪಾಟಲು ಆಗಲಿದೆ.
ಮೀನ:
ನಿಮಗೆ ಇಷ್ಟು ಸಮಯ ಲಾಭ ತಂದುಕೊಡುವಂತೆಯೇ ಇದ್ದ ಅಥವಾ ಲಾಭದಲ್ಲಿಯೇ ಇದ್ದ ವ್ಯವಹಾರ ನಷ್ಟಕ್ಕೆ ತಿರುಗಲಿದೆ. ಬೆನ್ನು ನೋವಿನ ಸಮಸ್ಯೆ ತೀವ್ರ ಆಗಲಿದೆ. ನಿಮ್ಮಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ, ಮತ್ತೆ ಕೆಲವರಿಗೆ ದೀರ್ಘಾವಧಿಗೆ ಔಷಧೋಪಚಾರ ಮಾಡಬೇಕಾದ ಪರಿಸ್ಥಿತಿ ಬರಬಹುದು. ಹೊಸ ವ್ಯಾಪಾರ- ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ನಿಮಗೆ ಹಳೇ ಸ್ನೇಹಿತರು ಅಥವಾ ಸಂಬಂಧಿಗಳ ಮೇಲೆ ಅತಿಯಾದ ಬಡ್ಡಿ ಅಥವಾ ಹೆಚ್ಚಿನ ರಿಟರ್ನ್ಸ್ ನೀಡುವ ಆಮಿಷ ತೋರಿಸಿದಲ್ಲಿ ಒಮ್ಮೆ ನಿಮ್ಮ ಹತ್ತಿರ ಹಣವೂ ಇದೆ ಎಂದಾದಲ್ಲಿ ಅದನ್ನು ಈ ಸಮಯದಲ್ಲಿ ನೀಡಿದರೆ ಅದು ನಿಮಗೆ ವಾಪಸ್ ಬರುವುದಿಲ್ಲ. ಕೆಲವು ಅವಕಾಶಗಳನ್ನು ನಿಮ್ಮ ಆಲಸ್ಯದ ಕಾರಣದಿಂದ ಕಳೆದುಕೊಳ್ಳುವಂತೆ ಆಗಲಿದೆ. ನಿಧಾನವೇ ಪ್ರಧಾನ ಹಾಗೂ ಆಲಸ್ಯಂ ಅಮೃತಂ ವಿಷಂ ಈ ಎರಡಕ್ಕೂ ಇರುವ ವ್ಯತ್ಯಾಸವನ್ನೂ ಅರಿತುಕೊಂಡು ಮುಂದಕ್ಕೆ ಹೆಜ್ಜೆ ಇಡಿ.
ಲೇಖನ- ಸ್ವಾತಿ ಎನ್.ಕೆ.