
ರಾಮ್ ಚರಣ್ (ರಾಮ್ ಚರಣ್) ಹುಟ್ಟುಹಬ್ಬ ಇಂದು (ಮಾರ್ಚ್ 27). ಅವರ ನಟನೆಯ ಹೊಸ ಸಿನಿಮಾ ‘ಪೆದ್ದಿ’ಯ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಹಾಡು, ಟೀಸರ್ ನೋಡಿ, ‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಅವರದ್ದು ಹಳ್ಳಿ ಕ್ರಿಕೆಟಿಗನೊಬ್ಬನ ಪಾತ್ರ ಎಂದುಕೊಂಡಿದ್ದರು ಅಭಿಮಾನಿಗಳು. ಆದರೆ ಈಗ ಬಿಡುಗಡೆ ಆಗಿರುವ ಟೀಸರ್ ನಲ್ಲಿ ರಾಮ್ ಚರಣ್ ಕುಸ್ತಿ ಪಟುವಾಗಿ ನಟಿಸಿದ್ದಾರೆ. ಕುಸ್ತಿ ಪಟುವಿನಂತೆ ಲಂಗೋಟಿ ಧರಿಸಿ, ಕಟ್ಟುಮಸ್ತಾದ ದೇಹ ಪ್ರದರ್ಶಿಸುತ್ತಾ ಅಖಾಡದಲ್ಲಿ ಕುಸ್ತಿ ಆಡುತ್ತಿದ್ದಾರೆ.
‘ಪೆದ್ದಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಪಾತ್ರದ ಪೋಸ್ಟರ್ ಅನ್ನು ಈ ಹಿಂದೆ ಬಿಡುಗಡೆ ಮಾಡಲಾಗಿದೆ. ಶಿವಣ್ಣನ ಪಾತ್ರದ ಹೆಸರು ಗೌರನಾಯ್ಡು ಎಂದಿದೆ. ಆದರೆ ಶಿವಣ್ಣನ ಪಾತ್ರ ಎಂಥಾಹದ್ದು ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಇದೀಗ ಸಿನಿಮಾದ ಹೊಸ ಟೀಸರ್ ಬಿಡುಗಡೆ ಆದ ಬಳಿಕ ಶಿವಣ್ಣನ ಪಾತ್ರದ ಬಗ್ಗೆ ಸುಳಿವು ಸಿಕ್ಕಿದೆ.
ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಪಾತ್ರದ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಇಂದು ಬಿಡುಗಡೆ ಆಗಿರುವ ಟೀಸರ್ ನಲ್ಲಿ ರಾಮ್ ಚರಣ್ ಕುಸ್ತಿ ಪಟುವಿನ ಪಾತ್ರದಲ್ಲಿ ನಟಿಸಿದ್ದು, ರಾಮ್ ಚರಣ್ ಗೆ ಕುಸ್ತಿ ಹೇಳಿಕೊಡುವ ಗುರುವಾಗಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ‘ಪೆದ್ದಿ’ ಸಿನಿಮಾದ ಟೀಸರ್ ಕನ್ನಡದಲ್ಲಿಯೂ ಬಿಡುಗಡೆ ಆಗಿದ್ದು, ಕನ್ನಡ ಟೀಸರ್ ನಲ್ಲಿ ಖುದ್ದು ಶಿವರಾಜ್ ಕುಮಾರ್ ಅವರೇ ಧ್ವನಿ ನೀಡಿದ್ದಾರೆ. ‘ಕುಸ್ತಿ ಅಂದರೆ ಬ್ಯಾಟಿನಿಂದ ಬಾಲ್ ಹೊಡೆಯೋ ಆಟ ಅಲ್ಲ’ ಎಂದು ರಾಮ್ ಚರಣ್ ಗೆ ಕುಸ್ತಿಯ ಮಹತ್ವ ಹೇಳುವ ಸಂಭಾಷಣೆ ಟೀಸರ್ ನಲ್ಲಿ ಶಿವಣ್ಣ ಹೇಳಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ವರ್ಷದ ಆದಾಯದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
‘ಪೆದ್ದಿ’ ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ ಅವರ ಪಾತ್ರಕ್ಕೆ ಶಿವರಾಜ್ ಕುಮಾರ್ ಅವರೇ ಕಾದು ಅವರಿಂದ ನಟನೆ ಮಾಡಿಸಿಕೊಂಡಿದ್ದಾರೆ. ಸಿನಿಮಾದ ಮುಹೂರ್ತ ನಡೆಯುವ ಮುಂಚೆಯೇ ನಿರ್ದೇಶಕ ಬುಚ್ಚಿಬಾಬು ಸನಾ ಶಿವಣ್ಣನವರನ್ನು ಭೇಟಿಯಾಗಿ ಕತೆ ವಿವರಿಸಿದ್ದರು. ಆ ಬಳಿಕ ಶಿವಣ್ಣ ಆಪರೇಷನ್ ಗಾಗಿ ಅಮೆರಿಕಕ್ಕೆ ತೆರಳಿದರು. ಕೆಲ ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಂಡರು. ಅನಾರೋಗ್ಯದಿಂದ ದೇಹತೂಕವನ್ನೂ ಕಳೆದುಕೊಂಡರು. ಅಷ್ಟೆಲ್ಲ ಆದರೂ ಸಹ ಬುಚ್ಚಿಬಾಬು ಸನಾ, ಪಾತ್ರಕ್ಕೆ ಶಿವಣ್ಣನೇ ಇರಬಾರದು, ಶಿವಣ್ಣನ ಮನೆಗೆ ಬಂದು ಲುಕ್ ಟೆಸ್ಟ್ ಸಹ ಮಾಡಿದ್ದರು. ಕೊನೆಗೆ ಶಿವರಾಜ್ ಕುಮಾರ್ ಅವರು ಗೌರನಾಯ್ಡು ಪಾತ್ರಕ್ಕೆ ಬಣ್ಣ ಹಚ್ಚಿದರು.
‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್ ಜೊತೆಗೆ ಜಾನ್ಹವಿ ಕಪೂರ್ ಸಹ ನಟಿಸಿದ್ದಾರೆ. ಜಗಪತಿ ಬಾಬು, ಬೊಮನ್ ಇರಾನಿ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ