ನಿರ್ಲಕ್ಷ್ಯದ ಕಾರಣಕ್ಕೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ ಘಟನೆ ಬೆಳಕಿಗೆ ಬಂದಿದೆ.
ಅಚ್ಚರಿ ಅನ್ನಿಸಿದರೂ ಸತ್ಯ. ಪಿಎಸ್ಐ ನೇತ್ರಾವತಿ ಅವರು ತಮ್ಮ ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ನಿನ್ನೆ (ಏಪ್ರಿಲ್ 06) ಮಧ್ಯಾಹ್ನ 2ರಿಂದ 5ರವರೆಗೆ ರಣಬಿಸಿಲಿಗೆ ಬಂದೂಕಾಗಿ ನಿಲ್ಲುವ ಶಿಕ್ಷೆ ವಿಧಿಸಿದ್ದಾರೆ.
ಅರ್ಧದಿನ ರಣಬಿಸಿಲಿನಲ್ಲಿ ನಿಲ್ಲಿಸಿದ್ದಕ್ಕೆ ಕೆಲ ಪೊಲೀಸ್ ಸಿಬ್ಬಂದಿ ಆರೋಗ್ಯದಲ್ಲಿ ಏರುಪೇರಾಗಿರುವುದು ಕಂಡುಬಂದಿದ್ದು, ಕೂಡಲೇ ಹೊಳಲ್ಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಸಂಬಂಧ ಪಿಎಸ್ ಐ ನೇತ್ರಾವತಿ ನಡೆ ಬಗ್ಗೆ ವಿರೋಧದ ಚರ್ಚೆಗಳು ನಡೆದಿದ್ದು, ಕೆಲ ಸಿಬ್ಬಂದಿ, ಪಿಎಸ್ ಐ ನೇತ್ರಾವಳಿ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ಅವರು ಡಿವೈಎಸ್ಪಿ ಗಿರೀಶ್ ಗೌಡ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಪೊಲೀಸ್ ಸಿಬ್ಬಂದಿಗೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷಿ ವಿಧಿಸಿರುವುದು ನಿನ್ನೆ (ಏಪ್ರಿಲ್ 06). ಆದರೆ, ಇಂದು ಫೋಟೋಗಳು ವೈರಲ್ ಆಗಿದ್ದು, ಈ ಸಂಬಂಧ ವಿರೋಧಕ್ಕೆ ಕಾರಣವಾಗಿದೆ.





