Headlines

ಗ್ರಾಮೀಣ ಭಾಗಕ್ಕೆ ಶ್ರೀಗಳ ಆರೋಗ್ಯ ಸೇವೆ ಶ್ಲಾಘನೀಯ ; ಮುರಳೀಧರ ಹಾಲಪ್ಪ

ಗ್ರಾಮೀಣ ಭಾಗಕ್ಕೆ ಶ್ರೀಗಳ ಆರೋಗ್ಯ ಸೇವೆ ಶ್ಲಾಘನೀಯ ; ಮುರಳೀಧರ ಹಾಲಪ್ಪ

ಮಧುಗಿರಿ 3 : ಗ್ರಾಮೀಣ ಭಾಗದ ಬಡಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ಜಪಾನಂದ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿದರ ಹಾಲಪ್ಪ ಅಭಿಪ್ರಾಯ ಪಟ್ಟರು. ಪಟ್ಟಣದ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀ ಸಿದ್ದಗಂಗಾ ಡಯಾಲಿಸಿಸ್ ಕೇಂದ್ರ ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಶಾಖೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಾವಗಡ ದಂತಹ ಗಡಿಭಾಗದಲ್ಲಿ ಸಾವಿರಾರು ಕುಷ್ಟರೋಗಿಗಳ ಆರೈಕೆ ಮಾಡುವ ಮೂಲಕ ಮಾನವ ಸೇವೆಯೇ ಮಾದವನ ಸೇವೆ ಎಂದು ಭಾವಿಸಿ ಈ ಭಾಗದಲ್ಲಿ ಕುಷ್ಟರೋಗವನ್ನೇ ನಿರ್ಮೂಲನೆ ಗೊಳಿಸಿದ್ದಾರೆ. ಇತ್ತೀಚೆಗೆ ಮಧುಗಿರಿಯಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸುವುದರೊಂದಿಗೆ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಈ ಭಾಗದ ಬಡಜನರಿಗೆ ಆರೋಗ್ಯ ಭಾಗ್ಯ ನೀಡುತ್ತಿದ್ದಾರೆ. ಸ್ವಾಮೀಜಿಯವರ ಈ ಸೇವಾ ಕಾರ್ಯಗಳಿಗೆ ದಾನಿಗಳು , ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಸಹಕಾರ ನೀಡಿದರೆ ಇನ್ನಷ್ಟು ಭಾಗಗಳಿಗೆ ಆರೋಗ್ಯ ಸೇವೆಯನ್ನು ವಿಸ್ತರಿಸಲು ಸಹಕಾರಿಯಾಗುತ್ತದೆ ಎಂದರು.

ಪಾವಗಡದ ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದ ಜಿ ಮಹಾರಾಜ್ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಈ ಆಸ್ಪತ್ರೆಗೆ ಇಡೀ ತುಮಕೂರು ಜಿಲ್ಲೆಯ ಎಲ್ಲಾ ಭಾಗಗಳ ಜನರು ಬರುವಂತೆ ಮಾಡಲು ಅಣಿಯಾಗುತ್ತಿದ್ದು, ಎಲ್ಲಾ ತಜ್ಞ ವೈದ್ಯರು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗುವುದು. ಶ್ರೀಮಂತರಿಗೆ ಕೇವಲ ಹಣ ಇದ್ದರೆ ಸಾಲದು ಹೃದಯವಂತಿಕೆ ಇರಬೇಕು ಎಂದ ಶ್ರೀಗಳು ಮುಂದಿನ ದಿನಗಳಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ನೀಡಲು ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದರು. ಪಾವಗಡದ ಆಶ್ರಮದ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 8.35 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 15,116 ಕ್ಷಯ ರೋಗಿಗಳನ್ನು ಗುಣಪಡಿಸಲಾಗಿದೆ . ಇಡೀ ರಾಜ್ಯದಲ್ಲಿಯೇ ಅಂಗವಿಕಲತೆಯ ಪುನರ್ ಜೋಡಣೆಯ ಏಕೈಕ ಸಂಸ್ಥೆ ಪಾವಗಡದ ನಮ್ಮ ಆಶ್ರಮದಲ್ಲಿದ್ದು, ಇಲ್ಲಿಯವರೆಗೆ 654 ಜನರಿಗೆ ಕೈಕಾಲುಗಳನ್ನು ಪುನರ್ ಜೋಡಣೆ ಮಾಡಲಾಗಿದೆ ಎಂದು ತಿಳಿಸಿದರು.

ತುಮಕೂರಿನ ಶ್ರೀ ಸಿದ್ದಗಂಗಾ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಶಾಲಿನಿ.ಎಂ ಮಾತನಾಡಿ ಈ ಶಿಬಿರದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಸ್ವಾಮೀಜಿ ಅವಕಾಶ ಮಾಡಿಕೊಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲು ಸ್ವಾಮೀಜಿ ಪ್ರೇರಣೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಆಯೋಜಿಸುವ ಆರೋಗ್ಯ ಶಿಬಿರಗಳಿಗೆ ನಮ್ಮ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ದಾನಿಗಳಾದ ಎಚ್. ಬಿ. ಶಿವಕುಮಾರ್ ರವರು 90 ಸಾವಿರ ರೂ ಬೆಲೆಬಾಳುವ ಇ ಸಿಜಿ ಯಂತ್ರವನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು. ಸುಮಾರು 200ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟರು.

ಪುರಸಭೆ ಅಧ್ಯಕ್ಷ ಜಿ. ಎ. ಮಂಜುನಾಥ್, ಹಿರಿಯ ತಜ್ಞರಾದ ಡಾ. ಜಿ. ಕೆ. ಜಯರಾಮ್, ದಾನಿಗಳಾದ ಎಚ್.ಬಿ.ರುದ್ರೇಶ್, ಸಿದ್ದಗಂಗಾ ಆಸ್ಪತ್ರೆಯ ಸಿ.ಇ.ಒ. ಡಾ.ಎಂ.ಎನ್. ಸಂಜೀವ್ ಕುಮಾರ್, ಡಾ. ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಯೋಜನಾಧಿಕಾರಿ ರಿತು ರಾಜನ್, ತಜ್ಞ ವೈದ್ಯರುಗಳಾದ ಡಾ. ಡಿ. ಪಿ. ಕುಶಾಲ್, ಡಾ. ಎಚ್. ವಿ. ನಟರಾಜ್, ಡಾ. ಮಹಾದೇವ್, ಡಾ. ಶೋಭಾ, ಕ. ಸಾ. ಪ. ಅಧ್ಯಕ್ಷರಾದ ಸಹನ ನಾಗೇಶ್, ಎಂಜಿಎಂ ನ್ಯಾಷನಲ್ ಸೊಸೈಟಿ ಕಾರ್ಯದರ್ಶಿ ಎಂ. ಎಸ್. ಶಂಕರ್ ನಾರಾಯಣ, ಸಂಯೋಜಕರಾದ ಅನುರಾಧ ಉಮಾ ಶಂಕರ್, ಅಕ್ಷಯ್, ಎಚ್. ಆರ್. ಶಶಿಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *