ಮಂಡ್ಯ, ಫೆಬ್ರವರಿ 14: ಜಿಲ್ಲೆಯ ಮಂಡ್ಯ ನಾಗಮಂಗಲ ತಾಲೂಕಿನ ನಲಕುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಕಾಮಗಾರಿಗೆ ಬಳಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ವಿದ್ಯಾರ್ಥಿಗಳನ್ನು ಕೂಲಿ ಆಳುಗಳಂತೆ ಕೆಲಸ ಮಾಡಲು ಶಿಕ್ಷಕರು ಒತ್ತಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಕ್ಕಳ ಸಿಮೆಂಟ್, ಮರಳು ಸಾಗಿಸುವ ಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದೆ.
ಈ ಘಟನೆ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಇಂತಹ ಕಠಿಣ ಕೆಲಸಗಳಿಗೆ ಬಳಸಿಕೊಳ್ಳುವುದು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಂದ ಯಾವುದೇ ರೀತಿಯ ಕೆಲಸಗಳನ್ನು ಮಾಡಬಾರದು ಎಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಶಿಕ್ಷಕರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕಾಮಗಾರಿಗೆ ಸರ್ಕಾರದಿಂದ ಸಾಕಷ್ಟು ಹಣ ಇರುತ್ತದೆ, ಹಾಗಿದ್ದರೂ ಸಹ ದುಡಿಸಿಕೊಳ್ಳುವ ಅಗತ್ಯವೇನಿದೆ ಎಂದು ಸ್ಥಳೀಯರು ಶಿಕ್ಷಕರನ್ನು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿ ಹೆಣ್ಣುಮಗುವೊಂದು ಸಿಮೆಂಟ್ ಸಾಗಿಸುತ್ತಿರುವುದು ಕೂಡ ಕಾಣಿಸಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ