ಬೆಳಗಾವಿ, (ನವೆಂಬರ್ 05): ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸಬೇಕೆಂದು ರೈತರು 7 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ವಿಪಕ್ಷಗಳೂ ಕೈ ಜೋಡಿಸಿವೆ. ಹೀಗಾಗಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ಆಗಮಿಸಿ ರೈತರ ಅಹವಾಲು ಸಭೆ ನಡೆಸಿದರು. ಆದರೆ, ಸಂಧಾನ ಸಭೆ ವಿಫಲವಾಗಿದೆ. ಸಂಧಾನ ಸಭೆ ವಿಫಲವಾಗುತ್ತಿದ್ದಂತೆಯೇ ರೈತರು ಸಚಿವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಾರಿಗೆ ಗುದ್ದಿ ಬೇಕು ನ್ಯಾಯ ಸರ್ಕಾರದ ವಿರುದ್ಧ ಘೋಷಣೆ ಕೂಗು ಹಾಕುತ್ತಿರುವ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಇದರಿಂದ ಹಾಗೂ ಕಬ್ಬು ಬೆಳೆಗಾರರ ನಡುವೆ ತಳ್ಳಾಟ ನೂಕಾಟ ಉಂಟಾಯ್ತು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರೈತ ಮುಖಂಡ ಶಶಿಕಾಂತ ಪಡಸಲಗಿ, ಸಿಎಂ ಭೇಟಿಗೆ ಬರುವಂತೆ ಸಚಿವರು ನೀಡಿದ ಆಹ್ವಾನವನ್ನು ಒಪ್ಪಲಿಲ್ಲ.ನಾಳೆ (ನವೆಂಬರ್ 06) ಸಂಜೆ 7 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದೇವೆ. ಸಕ್ಕರೆ ಕಾರ್ಖಾನೆ ಜೊತೆ ಸಭೆ ನಡೆಸಿ ನಿರ್ಧಾರ ಮಾಡಲಿ. ಡಿಸಿ ಮೂಲಕ ಶುಭ ಸಂದೇಶ ನೀಡಿದರೆ ಹೋರಾಟ ಹಿಂಪಡೆಯುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆ ಸಲ್ಲಿಸದಿದ್ದರೆ ನವೆಂಬರ್ 7 ರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.