
ಅದು 1950 ರ ಕಾಲಘಟ್ಟ. ಸುಳ್ಯವು ನಾಲ್ಕೈದು ಹೆಂಚಿನ ಮನೆಗಳಿದ್ದ ಊರಷ್ಟೇ. ಈಗಿನ ಗಾಂಧಿನಗರ ಕೆಲಸಿಕಟ್ಟೆಯಾಗಿತ್ತು. ಶ್ರೀರಾಂಪೇಟೆ ಅಂದರೆ ಕೆಳಗಿನ ನಾವೂರುಬೈಲು, ಸಬ್ ರಿಜಿಸ್ಟ್ರಿ ಕಛೇರಿ, ಕಾಸರಗೋಡು ವೃತ್ತಕ್ಕೆ ಸೇರಿದ ಸುಳ್ಯ ಪೊಲೀಸ್ ಸ್ಟೇಷನ್, ಸುಳ್ಯ ರೂರಲ್ ಆಸ್ಪತ್ರೆ – ಇವುಗಳು ಹೆಂಚಿನ ಛಾವಣಿಯದ್ದಾಗಿತ್ತು. ಸುಬ್ರಾಯ ಪ್ರಭುಗಳ ಮನೆ, ಕೋಡೋತ್‌ನವರ ಈಗ ಕೃಷ್ಣ ಸ್ಟೋರ್ ಇರುವ ಕಟ್ಟಡ, ತೋಟ ರಾಮಣ್ಣ ಗೌಡರ ಮನೆ ಮಾತ್ರ ಹೆಂಚಿನ ಮನೆಗಳಾಗಿತ್ತು. ಮಿಕ್ಕವುಗಳೆಲ್ಲ ಅಲ್ಲಲ್ಲಿ ಮುಳಿಹುಲ್ಲಿನ ಗುಡಿಸಲುಗಳು.
ಮಹಾಚುನಾವಣೆಯ ನಂತರ ಸುಳ್ಯಕ್ಕೆ ಜೀವ ಬಂತು. ಎಲ್ಲಾ ವಿಭಾಗಗಳಲ್ಲೂ ಅಭಿವೃದ್ಧಿಯ ಹೆಜ್ಜೆ ಇಡಲಾಯಿತು. ಸುಳ್ಯ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಸಂಗೋಪನಾ ಆಸ್ಪತ್ರೆ, ಲೋಕೋಪಯೋಗಿ ಕಛೇರಿ, ವಿದ್ಯುತ್ ಇಲಾಖಾ ಕಛೇರಿ, ಸಹಕಾರಿ ಸಂಘ, ಪ್ರೌಢಶಾಲೆಗಳು, ರಬ್ಬರ್ ಕೃಷಿಗೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದ ಮೂರು ಕಛೇರಿಗಳು.. ಹೀಗೆ ಸಾರ್ವಜನಿಕ ಕಚೇರಿಗಳು ಮತ್ತು ಕೆಲಸಗಳು ನಡೆಯುತ್ತಾ ಸುಳ್ಯ ಅಭಿವೃದ್ಧಿಯೆಡೆಗೆ ಮುಖ ಮಾಡಿದ್ದು ಹರ್ಷ ತಂದಿತು.
ಉತ್ತರ ಕರ್ನಾಟಕ ಭಾಗದ ಪ್ರತಿನಿಧಿಗಳು ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವಾಗ ಈ ಪ್ರದೇಶದ ಜನರಲ್ಲೂ ರಾಜಕೀಯ ಪ್ರಜ್ಞೆ ಪ್ರವರ್ಧಮಾನಗೊಂಡಿತು. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಈ ಭಾಗದ ಜನರನ್ನು ಗಮನಿಸುತ್ತಿಲ್ಲವೆಂಬುದನ್ನು ಮನಗಂಡು ಮಲೆನಾಡು, ಅದರಲ್ಲೂ ಮೀಸಲು ಕ್ಷೇತ್ರಕ್ಕೆ ಪ್ರತ್ಯೇಕ ತಾಲೂಕು ಕೊಡಬೇಕೆಂಬ ಬೇಡಿಕೆ ಶುರುವಾಯಿತು.