ದೇವನಹಳ್ಳಿ, ಮಾರ್ಚ್ 6: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಕ್ಯಾಂಟರ್ ರಸ್ತೆಯಲ್ಲಿ ಉರುಳಿಬಿದ್ದು ನಂತರವೂ ತುಸು ದೂರ ಜಾರಿಕೊಂಡು ಹೋಗಿದೆ. ಈ ಘಟನೆಯ ವಿಡಿಯೋ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಯಾಂಟರ್ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಚಲಿಸುತ್ತಿರುವ ಸಿಸಿಟಿವಿ ದೃಶ್ಯಗಳು ಕಾಣಿಸುತ್ತವೆ. ಕೆಲವು ಕ್ಷಣಗಳಲ್ಲೇ ನಿಯಂತ್ರಣ ತಪ್ಪಿದ ಕ್ಯಾಂಟರ್ ರಸ್ತೆಯ ಮಧ್ಯೆ ಉರುಳಿಬಿದ್ದು ಭೀಕರ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿ ಚಾಲನೆ ಮಾಡುವುದೇ ಕಾರಣ ಎಂದು ಶಂಕಿಸಲಾಗಿದೆ.
ಅಪಘಾತದ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೂರು ಬೈಕ್ಗಳು, ಒಂದು ಕಾರು ಹಾಗೂ ಒಂದು ಟಿಪ್ಪರ್ ಅಪಾಯದಿಂದ ಪಾರಾಗಿವೆ. ನಾಲ್ಕೈದು ವಾಹನಗಳ ಮಧ್ಯೆ ನುಗ್ಗಿಬಂದ ಕ್ಯಾಂಟರ್ ಕೊನೆಗೆ ಖಾಲಿ ರಸ್ತೆಯಲ್ಲಿ ಉರುಳಿಬಿದ್ದಿದೆ.
ಅಪಘಾತದ ರಭಸಕ್ಕೆ ರಸ್ತೆ ತುಂಬಾ ದಟ್ಟವಾದ ಧೂಳು ಆವರಿಸಿಕೊಂಡಿದ್ದು, ಕೆಲ ಕ್ಷಣಗಳ ಕಾಲ ಹತ್ತಿರ ಗಾಬರಿ ಮೂಡಿಸಿತು. ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣವೇ ಕ್ಯಾಂಟರ್ ಚಾಲಕನ ರಕ್ಷಣೆಗೆ ಧಾವಿಸಿದರು. ಅಪಘಾತ ಭೀಕರವಾಗಿದ್ದರೂ ಅದೃಷ್ಟವಶಾತ್ ಕ್ಯಾಂಟರ್ ಚಾಲಕ ಮತ್ತು ಕ್ಲೀನರ್ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ