ಪ್ರೀತಿಯಲ್ಲಿ ಹಾಗೂ ಯುದ್ಧದಲ್ಲಿ ಎಲ್ಲವೂ ಸರಿ, ಎವೆರಿಥಿಂಗ್ ಈಸ್ ಫೇರ್ ಇನ್ ಲವ್ & ವಾರ್ ಅಂತಾ ಅದ್ಯಾವ ಪುಣ್ಯಾತ್ಮ ಈ ಸಾಲುಗಳನ್ನು ಗೀಚಿದನೋ ಗೊತ್ತಿಲ್ಲ. ಇದನ್ನು ಬರೆದವ ಇದನ್ನು ಎಷ್ಟೋ ಗಂಭೀರವಾಗಿ ತೆಗೆದುಕೊಂಡಿದ್ದನ್ನೋ ? ಇಲ್ಲವೋ ? ಆದರೆ ನಮ್ಮ ಯುವ ಪೀಳಿಗೆ, ದ ಜೆನ್ಸಿಸ್ ಮಾತ್ರ ಗೊತ್ತಿಲ್ಲ ಇದನ್ನೇ ವೇದ ವಾಕ್ಯದಂತೆ ಪಾಲಿಸುತ್ತಿದ್ದಾರೆ. ಅದರಲ್ಲೂ ಪ್ರೀತಿ ವಿಚಾರ ಬಂದರೆ ಅವರಿಗೆ ಇದೆ ಭಗವದ್ಗೀತೆ, ಇದೇ ಕುರಾನ್, ಬೈಬಲ್ ಎಲ್ಲವೂ ಆಗಿದೆ. ಪ್ರೀತಿಯ ಮೋದಿಯಾದವರಿಗೆ ತಾವು ಮಾಡಿದ್ದೇ ಸರಿ. ತಮ್ಮ ಪ್ರೀತಿಯ ಬಗ್ಗೆ ಕೊಂಚ ಚಕಾರ ಎತ್ತುವ ಅದ್ಯಾರೇ ಆಗಲಿ ಅವರ ತಪ್ಪು. ಅದು ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಅತ್ತೆ, ಮಾವ, ಸ್ನೇಹಿತರು ಇತ್ಯಾದಿ ಎಲ್ಲರೂ ತಪ್ಪೇ. ಅಷ್ಟೇ ಅಲ್ಲ ಅವರೆಲ್ಲಾ ಇವರ ಪ್ರೀತಿ ಕಂಡು ಹೊಟ್ಟೆ ಕಿಚ್ಚು ಪಟ್ಟವರು ಅನ್ನೋದು ಅವರ ಭಾವನೆ. ಅವರ ಆ ಹುಚ್ಚು ಪ್ರೀತಿಯ ಹೊಳೆಯ ಮುಂದೆ ಅಂಡು ಮುದ್ದು ಮಾಡಿ ತುತ್ತು ತಿನ್ನಿಸಿದ ಹೆತ್ತವ್ವ, ತಲೆ ಮೇಲೆ ಹೊತ್ತು ಮರೆಸಿ ಯಾವುದಕ್ಕೂ ಬೇಸರವಿಲ್ಲದೇ ರಕ್ತವನ್ನು ಬಸಿದು ಬೆವರಾಗಿ ದುಡಿದ ಅಪ್ಪ ಲೆಕ್ಕಕ್ಕೇ ಇರುವುದಿಲ್ಲ. ಇನ್ನು ಜೊತೆಗೆ ಬೆಳೆದವರೆಲ್ಲಾ ನಗಣ್ಯ. ಇಂತಹ ಸ್ಥಿತಿಯ ಇಂದಿನ ಯುವಕ ಯುವತಿಯರಿಗಾಗಿ ಒಂದಷ್ಟು ಕಟು ಸತ್ಯವನ್ನು ಮನದಟ್ಟು ಮಾಡಲು ಈ ಬರಹವನ್ನು ಬರೆದಿದ್ದೇನೆ.
ಹೆತ್ತವರನ್ನು ಗೌರವಿಸಿ – ಎತ್ತಾಡಿಸಿದವರನ್ನು ಆದರಿಸಿ
ಬಿಸಿ ರಕ್ತದ ಯುವಕ ಯುವತಿಯರಲ್ಲಿ ಕಳಕಳಿಯ ಮನವಿ ಯಾರನ್ನಾದರೂ ಪ್ರೀತಿಸಿ, ಯಾರನ್ನಾದರೂ ಮದುವೆಯಾಗಿ ಸಂಸಾರ ನಡೆಸಿ. ಆದರೆ ನಿಮ್ಮ ಹೆತ್ತವರು, ನೆಮ್ಮದಿಯ ಸಮಾಧಿಯ ಮೇಲೆ ಮಾತ್ರ ನಿಮ್ಮ ಪ್ರೀತಿಯ ಮಹಲ್ ಕಟ್ಟಬೇಡಿ. ಆ ಮಹಲ್ ಐಶಾರಾಮಿಯಾಗಿರಬಹುದು ಆದರೆ ಬಂಧಗಳಿಲ್ಲದೆ ಬರಡಿರಬಹುದು. ಹೆತ್ತವರು ಸುಡುವ ನಿಟ್ಟುಸಿರು ನಿಮ್ಮನ್ನು ಎಂದಿಗೂ ದಹಿಸದೆ ಬಿಡುವುದಿಲ್ಲ. ಇದು ಶಾಪ ಅಲ್ಲ ಕಟು ಸತ್ಯ. ಎಲ್ಲರೂ ಅರಿಯಬೇಕಾದವರು ಅಂದ್ರೆ ಎಲ್ಲಾ ತಂದೆ ತಾಯಿಯಂದಿರಿಗೆ (ಕೆಲ ಅಪರೂಪದ ಪ್ರಕರಣಗಳ ವಿಷಯ) ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮಕ್ಕಳ ಹಿತ ಮುಖ್ಯ ಬೇರೆ ಏನು. ಮಕ್ಕಳ ಹಿತಕ್ಕಾಗಿ ತಮ್ಮ ಎಲ್ಲಾ ಸುಖವನ್ನು ಒತ್ತೆಯಿಡುವ ಬಡಪಾಯಿಗಳು ಕೊನೆಗೆ ಹುಚ್ಚು ಮಕ್ಕಳ ನಿರ್ಧಾರದ ಮುಂದೆ ಮಂಡಿಯೂರಲೇ ಅನಿವಾರ್ಯ ಪರಿಸ್ಥಿತಿ ಬರುತ್ತದೆ ಅನ್ನೋದು ಗೊತ್ತಿದ್ದರೂ ಅವರಿಗೆ ಅಷ್ಟು ದಿನದ ಶ್ರಮ, ಪ್ರೀತಿ, ಕಾಳಜಿ ಗಾಳಿಗೆ ತೂರಿ ಹೋಗಲಿದೆ ಅನ್ನೋದು ಎಷ್ಟು ದಿನ ಕಾಪಾಡಿಕೊಂಡು ಬಂದಿದ್ದೀರೋ ಅವರು ತಮ್ಮ ಸರ್ವಸ್ವವೂ ನಶಿಸಿ ಹೋಗಲಿದ್ದಾರೆ ಅನ್ನೋದು ತಿಳಿದಿದ್ದರೂ ಅವರೆಲ್ಲರನ್ನೂ ಲೆಕ್ಕಿಸದೆ ನಿಮ್ಮ ನಿರ್ಧಾರದ ಮೇಲೆ ಪ್ರೀತಿ, ಯತ್ನಕ್ಕಾಗಿ ವಿಫಲವಾಗಿದೆ. ಅರಿಯಲೇ ಬೇಕು.
ಪ್ರೀತಿಯ ಗೊಂದಲಕ್ಕೆ ಸಿಲುಕಿ ಪ್ರಾಣ ಬಿಟ್ಟ ನಂಜನಗೂಡಿನ 17ರ ಬಾಲೆ
ನಾನು ನನ್ನ 22 ವರ್ಷದ ಮಾಧ್ಯಮದ ಪಯಣ ಹಾಗೂ ಟಿವಿ9ನ ಇಷ್ಟು ವರ್ಷದ ಕೆಲಸದಲ್ಲಿ ಅದೆಷ್ಟೋ ಪ್ರೀತಿ, ಪ್ರೇಮದ ಸ್ಟೋರಿಗಳನ್ನು ಮಾಡಿದ್ದೇನೆ. ಪ್ರೀತಿಯಿಂದ ಮೋಸ ಹೋದ ಕಥೆಗಳನ್ನ ಬಿಚ್ಚಿಟ್ಟಿದ್ದೇನೆ. ಪೋಷಕರನ್ನು ವಿರೋಧಿಸಿ ಮದುವೆಯಾಗಿ ಬದುಕಿದ ಹಾಗೂ ಬೇರೆಯಾದ ಜೋಡಿಗಳನ್ನು ಕಂಡಿದ್ದೇನೆ. ಆದರೆ ನಂಜನಗೂಡಿನ 17ರ ಸುಂದರ ಬಾಲೆ ಪ್ರೀತಿಯೆಂಬ ಮಾಯಾಜಾಲದಲ್ಲಿ ಸಿಲುಕಿ ಅನುಭವಿಸಿದ ನೋವು, ಹಿಂಸೆ, ತೊಳಲಾಟ, ವೇದನೆ ಕಣ್ಣೀರು ಕೊನೆಗೆ ಆಕೆಯ ಸಾವು, ಇದು ನನ್ನನ್ನು ಬಹುವಾಗಿ ಕಾಡಿತು. ಅದಕ್ಕೂ ಮಿಗಿಲಾಗಿ ಕ್ಯಾಮೆರಾ ಮುಂದೆ ನಿಂತು ತಮ್ಮ ಮಗಳ ಕಥೆ ಹೇಳಿದ ಆ ಬಾಲೆಯ ತಂದೆಯ ಸ್ಥಿತಿ ನನ್ನನ್ನು ಬಹುವಾಗಿ ಕಾಡಿತು. ನಾನು ಒಬ್ಬ ಹೆಣ್ಣು ಮಗಳ ತಂದೆ ಅಂತಾ ಆ ರೀತಿ ಆಯ್ತೋ ಅಥವಾ ಎಲ್ಲರಿಗೂ ಅದೇ ರೀತಿ ಆಗುತ್ತೋ ಗೊತ್ತಿಲ್ಲ. ಆದರೆ ಆ ತಂದೆಯ ನೋವು, ಸಹಾಯಕತೆ, ಅವರ ಕಣ್ಣೀರು ತುಂಬಿದ ಆ ಕಣ್ಣುಗಳು ನನ್ನ ಕಣ್ಮುಂದೆ ಬರುತ್ತದೆ.
ಘಟನೆಯ ವಿವರ
ಅದು ಮಧ್ಯಮ ವರ್ಗದ ಕುಟುಂಬ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಯಾವುದಕ್ಕೆ ಕೊರತೆಯಿದ್ದರು ಅಲ್ಲಿ ಪ್ರೀತಿ, ಮಮತೆ, ಕಾಳಜಿಗೆ ಕೊರತೆಯಿರಲಿಲ್ಲ. ಸುಂದರ, ಸರಳ ಕುಟುಂಬ. ದೊಡ್ಡ ಮಕ್ಕಳಿಗೆ 20 ವರ್ಷ . ಚಿಕ್ಕವಳಿಗೆ 17 ವರ್ಷ. ಎಲ್ಲವೂ ಚೆನ್ನಾಗಿಯೇ ಇತ್ತು. ಅದೇನೋ ಅಂತಾರಲ್ಲ ಎಲ್ಲವೂ ಚೆನ್ನಾಗಿದ್ದು, ಎಲ್ಲವೂ ನಾವು ಅಂದುಕೊಂಡಂತೆ ಆದರೆ ಅದು ಜೀವನವೇ ಅಲ್ಲ. ಈ ಸುಂದರ ಕುಟಂಬದಲ್ಲೂ ಆಗಿದ್ದು ಅದೇ. ಆ ಕುಟಂಬದ ಮೇಲೆ ಅದ್ಯಾವ ಪಾಪಿಗಳ ಕಣ್ಣು ಬಿತ್ತೋ ? ಅದ್ಯಾವ ಮಾತಾಗತಿಯ ದೃಷ್ಟಿಗೆ ಆ ಮುದ್ದಾದ ಮಕ್ಕಳು ಹೆಣ್ಣು ಸಿಲುಕಿದ್ರೋ ಗೊತ್ತಿಲ್ಲ. ನೆಮ್ಮದಿಯ ಕೊಳದಲ್ಲಿ ಪ್ರೀತಿಯೆಂಬ ಬರ ಸಿಡಿಲು ಬಡಿದು ಆತಂಕದ ತರಂಗಗಳು ಎದ್ದಿದ್ದವು. ಕೊಳವನ್ನು ತಿಳಿಗೊಳಿಸಲು ಪಾಪ ಆ ಅಪ್ಪ ಅಮ್ಮ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿ ಹೋದವು. ಕೊಳದಲ್ಲಿ ಎದ್ದ ಪ್ರೀತಿಯ ತರಂಗ ಸುಳಿಯಾಗಿ ಮನೆಯ ನಂದಾದೀಪವನ್ನೇ ಆರಿಸಿಬಿಟ್ಟಿತು. ಇಬ್ಬರು ಹೆಣ್ಣು ಮಕ್ಕಳಲ್ಲಿ 17 ವರ್ಷದ ಕಿರಿಯ ಮಗಳು ಪ್ರೀತಿಯೆಂಬ ಮಾಯಾ ಜಾಲಕ್ಕೆ ಸಿಲುಕಿ ಬಿಟ್ಟಳು. ಓದುವ ವಯಸ್ಸಿಯಲ್ಲಿ ಕಾಲು ಜಾರಿ ಪ್ರೀತಿಯ ಸಾಗರಕ್ಕೆ ಬಿದ್ದು ಬಿಟ್ಟಿದ್ದಳು. ಏನು ಅರಿಯದ ಕಂದಮ್ಮಳ ಪರಿಸ್ಥಿತಿ ಕಂಡ ಅಪ್ಪ ಅಮ್ಮ ಸಹಜವಾಗಿ ಆಕೆಗೆ ಅರ್ಥ ಮಾಡಿಸಲು ಮುಂದಾದರೂ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬೆದರಿಸಿ, ಹೆದರಿಸಿದರು. ಅತ್ತು ಕರೆದು ಅಲವತ್ತುಕೊಂಡರು, ಹೂ… ಹೂಂ ಅಪ್ಪ, ಅಮ್ಮನ ಮಾತು ಮಗಳ ಮನಸಿಗೆ ತಲುಪಲೇ ಇಲ್ಲ. ತನ್ನ ಪ್ರೀತಿಯಲ್ಲಿ ಕಿವುಡಾಗಿದ್ದ ಆಕೆಗೆ ಅಪ್ಪನ ಕಾಳಜಿಯ ಕೂಗು ಕೇಳಲಿಲ್ಲ. ಪ್ರೀತಿಯಲ್ಲಿ ಕುರುಡಾಗಿದ್ದ ಆಕೆಗೆ ತನ್ನ ಬಗ್ಗೆಯೇ ಚಿಂತಿಸಿ ಮುಖದಲ್ಲಿ ಮೂಡಿದ್ದ ಅಮ್ಮನ ಆತಂಕದ ಗೆರೆಗಳು ಕಾಣಿಸಲೇ ಇಲ್ಲ. ಪ್ರೀತಿಯೇ ಸರ್ವಸ್ವ ಅಂದುಕೊಂಡವಳು ತನ್ನ ಪ್ರಾಣವನ್ನೇ ಸಮರ್ಪಿಸಿಬಿಟ್ಟಳು. ತನ್ನ ಮನೆಯಲ್ಲಿ ನೇಣಿಗೆ ಕೊರಳಡ್ಡಿ ಇಹಲೋಕ ತ್ಯಜಿಸಿದಳು.
17ರ ಬಾಲೆ ಪ್ರೀತಿಯ ಗೊಂದಲ’, ಅಪ್ಪ ಅಮ್ಮನ ಗೋಳಾಟ – ಪ್ರೀತಿಸಿದವನ ತೊಳಲಾಟ
ಎಸ್ ಆಕೆಯೇನೋ ಪ್ರೀತಿ ಸಿಗದ ಕಾರಣಕ್ಕೆ ಸತ್ತು ಹೋದಳು. ಆದರೆ ಬದುಕಿರುವ ತಂದೆ ತಾಯಿಯನ್ನು ಜೀವಂತ ಶವವಾಗಿಸಿ ಹೊರಟಳು. ಹೌದು ಪ್ರೀತಿಯ ಪುತ್ರಿಯನ್ನು ಕಳೆದುಕೊಂಡ ಅಪ್ಪ ಅಮ್ಮ ಅಕ್ಷರಶಃ ಜೀವಂತ ಹೆಣವಾಗಿದ್ದಾರೆ. ಆಕೆಯ ಬಗ್ಗೆ ಮಾತನಾಡಿದರೂ ಆಕೆ ಉಮ್ಮಳಿಸಿ ಬರುತ್ತಿದೆ. ಅದರಲ್ಲೂ ಆಕೆಯ ಅಪ್ಪನ ಸ್ಥಿತಿ ಆ ದೇವರಿಗೆ ಪ್ರೀತಿ. ನನ್ನ ಮಗಳು….. ಅಂದವರ ಗಂಟಲು ಉಬ್ಬಿತು, ಕಣ್ಣುಗಳಲ್ಲಿ ಗಳ ಗಳ ನೀರು ಸುರಿಯಿತು. ನನಗೂ ಮುಂದೆ ಏನು ಕೇಳಬೇಕು ಅನಿಸಲಿಲ್ಲ. ಆದರೆ ಒಂದಂತೂ ಅರ್ಥವಾಗಿತ್ತು. ಆತ್ಮಹತ್ಯೆಗೆ ಶರಣಾದ ಮಗಳು, ಅಪ್ಪ ಅಮ್ಮನ ಪರಿಸ್ಥಿತಿ ನರಕ ಸದೃಶ್ಯವಾಗಿತ್ತು. ಇನ್ನು ನನ್ನನ್ನು ಬಹುವಾಗಿ ಕಾಡಿದ್ದು ಆಕೆ ಆತ್ಮಹತ್ಯೆಗೂ ಮು’ನ್ನ ತಾನು ಪ್ರೀತಿಸಿದ ಯುವಕನ ಜೊತೆ ಮೊಬೈಲ್ ನಲ್ಲಿ ಆಡಿದ ಕೊನೆಯ ಮಾತುಗಳು. ಆಡಿಯೋವನ್ನು ಆ ಹುಡುಗನೇ ಬಿಡುಗಡೆ ಮಾಡಿದ್ದು ಅವರಿಬ್ಬರ ಒಂದಷ್ಟು ಖಾಸಗಿ ಫೋಟೋಗಳು ಮತ್ತು ವಿಡಿಯೋ ಮೂಲಕ ತನ್ನ ತಪ್ಪಿಲ್ಲ ಅನ್ನೋ ಸ್ಪಷ್ಟನೆ. ಬಾಲೆಯ ಆ ಮಾತುಗಳಲ್ಲಿ ಆತಂಕವಿತ್ತು, ನೋವಿತ್ತು, ಮುಂದೆಯೂ ಎಂಬ ಭಯವಿತ್ತು. ಅದು ಸಹಜ. ಆದರೆ ಆಕೆಯ ಮಾತುಗಳಲ್ಲಿ ಸ್ಪಷ್ಟವಾದ ಗೊಂದಲವಿತ್ತು. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಆಕೆಗೆ ಇರಲಿಲ್ಲ ಅನ್ನೋದು ಆಕೆಯ ಮಾತುಗಳು ಸಾರಿ ಸಾರಿ ಹೇಳುತ್ತಿದ್ದವು. 17 ವರ್ಷದ ಬಾಲೆಗೆ ಅದು ಸಹಜ ಕೂಡ. ಓದುವ ವಯಸ್ಸಲ್ಲಿ ಪ್ರೀತಿ ಪ್ರೇಮ ಅನ್ನೋ ಭ್ರಮೆಗೆ ಸಿಲುಕಿದ ಬಾಲೆ ಪ್ರಾಣವನ್ನೇ ಕಳೆದುಕೊಂಡಿದ್ದಳು.
ಕೊನೆ ಮಾತು
ಇಲ್ಲಿ ತಪ್ಪು ಯಾರದು ಅನ್ನುವುದು ಮುಖ್ಯವಲ್ಲ. ನಮ್ಮ ಯುವ ಪೀಳಿಗೆ ಎಷ್ಟು ಸಾಗುತ್ತಿದೆ ಅನ್ನೋದು ಮುಖ್ಯ. ಪ್ರೀತಿಸುವುದು ತಪ್ಪಲ್ಲ ಆದರೆ ವಯಸ್ಸಲ್ಲದ ವಯಸ್ಸನ್ನು ಪ್ರೀತಿಸುವುದು, ಅಮೂಲ್ಯ ಜೀವನ ಬಲಿ ಕೊಟ್ಟು ಪ್ರೀತಿಸುವುದು, ಮಕ್ಕಳೇ ಪ್ರಾಣ ಕೊಟ್ಟು ಎಲ್ಲವನ್ನೂ ತ್ಯಾಗ ಮಾಡಿ ಸಾಕಿದ ಅಪ್ಪ ಅಮ್ಮನ ಮನಸು ನೋಯಿಸುವುದು ಖಂಡಿತಾ ತಪ್ಪೇ. ಯಾಕಂದ್ರೆ ಅಷ್ಟೇ ಅಲ್ಲಾ ಹೊಡೆದಾಡಿ, ಬಡಿದಾಡಿ, ಹೋರಾಡಿ, ಸಾಧಿಸಿ, ಹಠ ಹಿಡಿದು ಮದುವೆಯಾದವರು ಮುಂದೆ ಹೇಗಾದರೂ ಅನ್ನೋ ಉದಾಹರಣೆ ಎಲ್ಲರ ಕಣ್ಣ ಮುಂದಿದೆ. ಅಷ್ಟಕ್ಕೆ ಇಷ್ಟೆಲ್ಲಾ ಬೇಕಾ ? ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಜೀವನದಲ್ಲಿ ಒಂದಂತೂ ಸತ್ಯ ಎಲ್ಲಕ್ಕಿಂತ ಮುಖ್ಯ ಜೀವನ. ಆ ಕ್ಷಣಕ್ಕಾಗಿ ಅಮೂಲ್ಯ ಜೀವವನ್ನು ಬಲಿ ಕೊಡಬಾರದು. ಇನ್ನು ಈ ಘಟನೆಯಲ್ಲಿ ಮತ್ತೊಂದು ಪ್ರಮುಖವಾಗಿ ನಾನು ಹೇಳಲೇಬೇಕಾದ ಘಟನೆ ಬೇಕಾಗಿರುವುದು. ಬಾಲೆ ತನ್ನ ಬದುಕು ಕೊನೆಗಾಣಿಸಿದ ಸಮಸ್ಯೆ ಬಗೆಹರಿಯಲಿಲ್ಲ. ಬದಲಾಗಿ ಬದುಕಿದವರ ನೆಮ್ಮದಿ ಹಾಳು ಮಾಡಿತು. ತಾನು ಜೊತೆ ಬಾಳಿ ಬದುಕಬೇಕೆಂದು ಬಯಸಿದ್ದಳೋ ಯಾರಿಗಾಗಿ ಪ್ರಾಣವನ್ನೇ ಆಹುತಿ ಮಾಡಿಕೊಂಡಳೋ ಆತ ಆಕೆಯ ಸಾವಿಗೆ ಕಾರಣನಾದ ಹೊಣೆ ಹೊತ್ತಿದ್ದಾನೆ. ಮನೆಯ ನಂದಾದೀಪವಾಗಿ ಬೆಳಗಿದ ಅಪ್ಪ ಅಮ್ಮನಿಗೆ ತಾವೇ ತಮ್ಮ ಮನೆಯ ನಂದಾದೀಪ ಆರಲು ಕಾರಣವಾದೆವಾ ? ಅನ್ನೋ ಚಿಂತೆ ಬಿಡದೆ ಕಾಡುತ್ತಿದೆ. ಹೀಗಾಗಿ ಯುವ ಹೃದಯಗಳೇ, ಪ್ರೀತಿಸುವ ಮುನ್ನ ಯೋಚಿಸಿ. ಪ್ರೀತಿಸಿದ ನಂತರ ಪ್ರೀತಿಗಾಗಿ ಪ್ರಯತ್ನಿಸಿ. ಆಗಲಿಲ್ಲವಾ ನಿಮಗಾಗಿ ಜೀವಿಸಿ. ಯಾಕಂದ್ರೆ ಬದುಕು ದೊಡ್ಡದು. ಪ್ರಿಯ ಪೋಷಕರೇ ಮಕ್ಕಳ ಪ್ರೀತಿ ಗೌರವಿಸಿ, ಸರಿಯಿಲ್ಲವಾ ? ಅವರಿಗೆ ತಿಳಿಸಿ, ಮನದಟ್ಟು ಮಾಡಲು ಪ್ರಯತ್ನಿಸಿ. ಆಗಲಿಲ್ಲವಾ ? ಪ್ರೀತಿಸಿದವನ ಜೊತೆ ಕಳುಹಿಸಿ. ಈ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಿ.