ವಾಹನ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ನಂತರ ಆರ್‌ಸಿ ಬ್ಯಾಂಕ್‌ನ ಹೆಸರನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ, ವಾಹನ ಮಾಲೀಕರು ಇನ್ನು ಮುಂದೆ ಹೈಪೊಥಿಕೇಷನ್ ರದ್ದುಗೊಳಿಸಲು ಬ್ಯಾಂಕ್ ಮತ್ತು ಆರ್‌ಟಿಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.

ನವದೆಹಲಿ: ವಾಹನ ಖರೀದಿಸಲು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ಕೂಡಲೇ, ವಾಹನದ ನೋಂದಣಿ ಪ್ರಮಾಣಪತ್ರ (ಆರ್‌ಸಿ)ಯಲ್ಲಿ ನಮೂದಾಗಿರುವ ಸಾಲ ನೀಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಹೆಸರು ಸ್ವಯಂಚಾಲಿತವಾಗಿ ರದ್ದು ಆಗುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಿಂದ ಸಾಲ ತೀರಿಸಿದ ಬಳಿಕ ಬ್ಯಾಂಕ್‌ನ ಹೆಸರು ಆರ್‌ಸಿಯಿಂದ ತೆಗೆದುಹಾಕಿಸಲು ಪದೇಪದೆ ಬ್ಯಾಂಕ್ ಹಾಗೂ ಆರ್‌ಟಿಒ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿದ್ದ ವಾಹನ ಮಾಲೀಕರ ಸಮಸ್ಯೆಗೆ ದೊಡ್ಡ ಮಟ್ಟದಲ್ಲಿ ಪರಿಹಾರ ದೊರೆಯಲಿದೆ. ಈ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಚಯಿಸಿದ್ದು, ಇದು ಮಾರ್ಚ್ 1ರಿಂದಲೇ ಜಾರಿಗೆ ಬಂದಿದೆ. ಪ್ರಾರಂಭಿಕ ಹಂತದಲ್ಲಿ ಕೆಲವು ಆಯ್ದ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಕೂಡ ಈ ವ್ಯವಸ್ಥೆಗೆ ಸೇರ್ಪಡೆಯಾಗಲಿವೆ.

ವಾಹನ ಖರೀದಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವ ಸಂದರ್ಭದಲ್ಲಿ ಆ ವಾಹನವನ್ನು ಬ್ಯಾಂಕ್‌ಗೆ ಅಡಮಾನವಾಗಿ ಇಡಲಾಗುತ್ತದೆ. ಈ ಕಾನೂನು ಪ್ರಕ್ರಿಯೆಯನ್ನೇ ಹೈಪೊಥಿಕೇಷನ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ವಾಹನದ ಆರ್‌ಸಿ ದಾಖಲೆಯಲ್ಲಿ ಸಾಲ ನೀಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಹೆಸರು ಕೂಡ ಸೇರಿಸಲಾಗುತ್ತದೆ. ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ ನಂತರ, ಆರ್‌ಸಿಯಿಂದ ಬ್ಯಾಂಕ್‌ನ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯಬೇಕು. ಇದಕ್ಕಾಗಿ ವಾಹನ ಮಾಲೀಕರು ಬ್ಯಾಂಕ್‌ನಿಂದ ಆಕ್ಷೇಪಣೆಯಿಲ್ಲದ ಪ್ರಮಾಣಪತ್ರ (ಎನ್‌ಒಸಿ) ಪಡೆದು, ಅದನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಿ ಹೈಪೊಥಿಕೇಷನ್ ರದ್ದು ಮಾಡಿಸಬೇಕಾಗುತ್ತಿತ್ತು. ಈ ಪ್ರಕ್ರಿಯೆ ಬಹಳ ಸಮಯ ತೆಗೆದುಕೊಳ್ಳುವುದರ ಜೊತೆಗೆ ಅನಗತ್ಯ ಓಡಾಟಕ್ಕೂ ಕಾರಣವಾಗುತ್ತಿತ್ತು.

ಈ ತೊಂದರೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಸಾಲ ತೀರಿದ ಮಾಹಿತಿಯನ್ನು ಬ್ಯಾಂಕ್ ಆನ್‌ಲೈನ್ ಮೂಲಕ ನವೀಕರಿಸಿದ ತಕ್ಷಣವೇ ಆರ್‌ಸಿಯಿಂದ ಹೈಪೊಥಿಕೇಷನ್ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ. ಈ ವ್ಯವಸ್ಥೆ ಯುಎಲ್‌ಐ (Unified Lending Interface) ಮೂಲಕ ಕಾರ್ಯನಿರ್ವಹಿಸಲಿದ್ದು, ಇದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿವೃದ್ಧಿಪಡಿಸಿದ ಡಿಜಿಟಲ್ ಸಾಲ ವ್ಯವಸ್ಥೆಯಾಗಿದೆ. ಇದರ ಮೂಲಕ ಬ್ಯಾಂಕ್‌ಗಳು, ಯುಎಲ್‌ಐ ವ್ಯವಸ್ಥೆ ಮತ್ತು ಸರ್ಕಾರದ ವಾಹನ ಡೇಟಾಬೇಸ್ ನಡುವೆ ಸುರಕ್ಷಿತ ಹಾಗೂ ತ್ವರಿತ ಮಾಹಿತಿಯ ವಿನಿಮಯ ಸಾಧ್ಯವಾಗುತ್ತದೆ.

ಸಾಲ ತೀರಿದ ನಂತರ ಬ್ಯಾಂಕ್ ಸಂಬಂಧಿತ ಮಾಹಿತಿಯನ್ನು ಅಪ್‌ಡೇಟ್ ಮಾಡಿದ ಕೂಡಲೇ, ವಾಹನದ ನೋಂದಣಿ ದಾಖಲೆಗಳಲ್ಲಿ ಹೈಪೊಥಿಕೇಷನ್ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಹನ ಮಾಲೀಕರಿಗೆ VAHAN Portal ಮೂಲಕ ಎಸ್‌ಎಂಎಸ್ ಸಂದೇಶ ಕಳುಹಿಸಲಾಗುತ್ತದೆ. ಅಧಿಕಾರಿಗಳ ಪ್ರಕಾರ, ಸಂಪೂರ್ಣ ಪ್ರಕ್ರಿಯೆ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಡಿಜಿಟಲ್ ಮೂಲಕ ನಡೆಯಲಿದೆ. ಇದರಿಂದ ಪ್ರಕ್ರಿಯೆಯ ವೇಗ ಹೆಚ್ಚುವುದರ ಜೊತೆಗೆ ಪಾರದರ್ಶಕತೆಯೂ ಸುಧಾರಣೆಯಾಗಲಿದೆ. ಸರ್ಕಾರದ ‘ಜೀವನ ಸುಲಭತೆ’ (Ease of Living) ಯೋಜನೆಯ ಭಾಗವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಈ ವ್ಯವಸ್ಥೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಚೋಳಮಂಡಲಂ ಫೈನಾನ್ಸ್, ಶ್ರೀರಾಮ್ ಫೈನಾನ್ಸ್, ಸುಂದರಂ ಫೈನಾನ್ಸ್ ಮುಂತಾದ ಐದು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಜಾರಿಗೆ ತಂದಿವೆ. ಮುಂದಿನ ಹಂತಗಳಲ್ಲಿ ದೇಶದ ಇನ್ನಷ್ಟು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಈ ವ್ಯವಸ್ಥೆಯಲ್ಲಿ ಸೇರಿಕೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಉಪಕ್ರಮವನ್ನು ಸಾರಿಗೆ ಸೇವಾ ತಜ್ಞ ಅನಿಲ್ ಛಿಕಾರ ಸ್ವಾಗತಿಸಿದ್ದು, “ವಾಹನ ಖರೀದಿಸುವಾಗ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅಡಮಾನ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುತ್ತವೆ. ಆದರೆ ಸಾಲ ಮರುಪಾವತಿ ಆದ ನಂತರ ಹೈಪೊಥಿಕೇಷನ್ ತೆಗೆದುಹಾಕುವಲ್ಲಿ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಹೊಸ ವ್ಯವಸ್ಥೆ ಇದಕ್ಕೆ ಪರಿಣಾಮಕಾರಿ ಪರಿಹಾರ ಒದಗಿಸುತ್ತದೆ” ಎಂದು ತಿಳಿಸಿದ್ದಾರೆ. ಹೊಸ ವ್ಯವಸ್ಥೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಸಾಲ ತೀರಿಸಿದ ಬಳಿಕ ಆರ್‌ಸಿಯಲ್ಲಿ ಬ್ಯಾಂಕ್ ಹೆಸರು ತೆಗೆದುಹಾಕಿಸಲು ಬ್ಯಾಂಕ್ ಮತ್ತು ಆರ್‌ಟಿಒ ಕಚೇರಿಗಳ ಸುತ್ತಾಡುವ ಅಗತ್ಯ ಬಹಳ ಮಟ್ಟಿಗೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Source link
ಕೇಂದ್ರ ಸರ್ಕಾರದಿಂದ ವಾಹನ ಮಾಲೀಕರಿಗೆ ಗುಡ್‌ನ್ಯೂಸ್, ವಾಹನ ಸಾಲ ತೀರಿದ ಕೂಡಲೇ ಹೈಪೊಥಿಕೇಷನ್ ಸ್ವಯಂ ರದ್ದು