ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ಮಗುವಿನ ಜಾತಕದಲ್ಲಿ ಅವೆಷ್ಟು ಯೋಗಗಳಿವೆಯೋ!

ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ಮಗುವಿನ ಜಾತಕದಲ್ಲಿ ಅವೆಷ್ಟು ಯೋಗಗಳಿವೆಯೋ!


ವಿಕ್ಕಿ ಕೌಶಲ್ – ಕತ್ರಿನಾ ಮಗುವಿನ ಜಾತಕದಲ್ಲಿ ಅದ್ಭುತ ಯೋಗಗಳು: ಪಂಡಿತ್ ವಿಠ್ಠಲ್ ಭಟ್ ವಿಶ್ಲೇಷಣೆ

ಮುಂಬೈನ ಎಚ್.ಎನ್.ರಿಲಯನ್ಸ್ ಆಸ್ಪತ್ರೆಯಲ್ಲಿ ನವೆಂಬರ್ 7ನೇ ತಾರೀಕಿನ ಶುಕ್ರವಾರ ಬೆಳಗ್ಗೆ 8 ಗಂಟೆ 23 ನಿಮಿಷ 18 ಸೆಕೆಂಡ್‌ಗೆ ತಾರಾ ದಂಪತಿಯಾದ ವಿಕ್ಕಿ ಕೌಶಲ್ (ವಿಕ್ಕಿ ಕೌಶಲ್) ಹಾಗೂ ಕತ್ರಿನಾ ಕೈಫ್‌ಗೆ (ಕತ್ರಿನಾ ಕೈಫ್) ಗಂಡು ಮಗುವಿನ ಜನನವಾಗಿದೆ. ಆ ಜನ್ಮ ಸಮಯದ ಆಧಾರದಲ್ಲಿ ಈ ಜ್ಯೋತಿಷ್ಯ ವಿಶ್ಲೇಷಣೆ (ಜ್ಯೋತಿಷ್ಯ ವಿಶ್ಲೇಷಣೆ) ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಅಂತುವುದಾದರೆ, ಈ ಮಗುವಿನ ರೋಹಿಣಿ ನಕ್ಷತ್ರ ಒಂದನೇ ಪಾದ, ವೃಷಭ ರಾಶಿ (ವೃಷಭ ರಾಶಿ) ಹಾಗೂ ವೃಶ್ಚಿಕ ಲಗ್ನ (ವೃಶ್ಚಿಕ ರಾಶಿ).

ಇನ್ನು ಜನನ ಸಮಯಕ್ಕೆ ಗ್ರಹ ಹಾಗೂ ಲಗ್ನ ಸ್ಥಿತಿಯನ್ನು ನೋಡುವುದಾದರೆ ಹೀಗಿದೆ:

  • ಅನೂರಾಧ ನಕ್ಷತ್ರ ಮೂರನೇ ಪಾದದ ವೃಶ್ಚಿಕ ಲಗ್ನ.
  • ರೋಹಿಣಿ ಒಂದನೇ ಪಾದದಲ್ಲಿ ವೃಷಭ ರಾಶಿಯಲ್ಲಿ ಚಂದ್ರ
  • ವಿಶಾಖ ನಕ್ಷತ್ರ ಒಂದನೇ ಪಾದ ತುಲಾ ರಾಶಿಯಲ್ಲಿ ರವಿ
  • ಅನೂರಾಧ ನಕ್ಷತ್ರ ಮೂರನೇ ಪಾದ ವೃಶ್ಚಿಕದಲ್ಲಿ ಬುಧ
  • ಚಿತ್ತಾ ನಕ್ಷತ್ರ ನಾಲ್ಕನೇ ಪಾದ ತುಲಾ ರಾಶಿಯಲ್ಲಿ ಶುಕ್ರ
  • ಅನೂರಾಧ ನಕ್ಷತ್ರ ಎರಡನೇ ಪಾದ ವೃಶ್ಚಿಕ ರಾಶಿಯಲ್ಲಿ ಕುಜ
  • ಪುನರ್ವಸು ನಕ್ಷತ್ರ ನಾಲ್ಕನೇ ಪಾದ ಕರ್ಕಾಟಕ ರಾಶಿಯಲ್ಲಿ ಗುರು
  • ಪೂರ್ವಾಭಾದ್ರಾ ನಕ್ಷತ್ರ ನಾಲ್ಕನೇ ಪಾದ ಮೀನ ರಾಶಿಯಲ್ಲಿ ವಕ್ರ ಶನಿ
  • ಪೂರ್ವಾಭಾದ್ರಾ ನಕ್ಷತ್ರ ಒಂದನೇ ಪಾದ ಕುಂಭ ರಾಶಿಯಲ್ಲಿ ರಾಹು
  • ಪೂರ್ವಫಲ್ಗುಣಿ ನಕ್ಷತ್ರ ಒಂದನೇ ಪಾದ ಸಿಂಹ ರಾಶಿಯಲ್ಲಿ ಕೇತು
  • ಜ್ಯೇಷ್ಠಾ ನಕ್ಷತ್ರ ಎರಡನೇ ಪಾದ ವೃಶ್ಚಿಕ ರಾಶಿಯಲ್ಲಿ ಮಾಂದಿ

ಈ ಜಾತಕಕ್ಕೆ ಚಂದ್ರ ದಶೆಯು 7 ವರ್ಷ, 7 ತಿಂಗಳು ಹಾಗೂ 25 ದಿನಗಳು ಬಾಕಿ ಇದೆ. ಆ ನಂತರ ಕ್ರಮವಾಗಿ ಕುಜ, ರಾಹು, ಗುರು, ಶನಿ, ಬುಧ, ಕೇತು, ಶುಕ್ರ, ರವಿ ದಶೆಗಳು ನಡೆಯುತ್ತವೆ.

ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ಮಗುವಿನ ಜಾತಕದಲ್ಲಿ ಇರುವಂಥ ಯೋಗಗಳ ಪಟ್ಟಿ ಹೀಗಿದೆ:

  • ರುಚಕ ಯೋಗ
  • ನೀಚಭಂಗ ರಾಜ ಯೋಗ
  • ರಾಜ ಯೋಗ
  • ಪಾಶ ಯೋಗ
  • ವಿಮಲ ಯೋಗ
  • ಸ್ವವೀರ್ಯದ್ಧನ ಯೋಗ
  • ಬಂಧು ಪೂಜ್ಯ ಯೋಗ
  • ಮಾತೃಸ್ನೇಹ ಯೋಗ
  • ವಾಹನ ಯೋಗ
  • ಪಾರಿಜಾತ ಯೋಗ
  • ದ್ವಿಗ್ರಹ ಯೋಗ

ಉಚ್ಚ-ಪರಮೋಚ್ಚ- ಸ್ವಕ್ಷೇತ್ರದಲ್ಲಿನ ಗ್ರಹಗಳು

ಈ ಜಾತಕ ಬಹಳ ವಿಶೇಷಗಳಿಂದ ಕೂಡಿದೆ. ಚಂದ್ರ ತನ್ನ ಉಚ್ಚ ಸ್ಥಿತಿಯಲ್ಲಿ, ಗುರು ಗ್ರಹ ಪರಮೋಚ್ಚ ಸ್ಥಿತಿಯಲ್ಲಿ ಹಾಗೂ ವೈಶೇಷಿಕಾಂಶದಲ್ಲಿ (ರಾಶಿಕುಂಡಲಿ ಹಾಗೂ ನವಾಂಶ ಕುಂಡಲಿ ಎರಡರಲ್ಲೂ ಕರ್ಕಾಟಕ ರಾಶಿಯಲ್ಲಿ ಗುರು ಸ್ಥಿತವಾಗಿದೆ), ಶುಕ್ರ ತನ್ನದೇ ಸ್ವಕ್ಷೇತ್ರ ತುಲಾ ರಾಶಿಯಲ್ಲಿ, ಕುಜ ತನ್ನದೇ ಸ್ವಕ್ಷೇತ್ರ ವೃಶ್ಚಿಕದಲ್ಲಿಯೂ ಸ್ಥಿತವಾಗಿದೆ. ಇಷ್ಟು ವಿಶೇಷ ಇರುವಂಥ ಈ ಮಗುವಿನ ಜಾತಕದ ತುಂಬ ಪ್ರಾಥಮಿಕ ಅಂಶಗಳು ಮಾತ್ರ ಇಲ್ಲಿ ತಿಳಿಸಲಾಗುತ್ತಾ ಇದೆ. ಇನ್ನು ಮಗುವಿನ ಜನನ ಕಾಲದಲ್ಲಿ ಯಾವುದನ್ನು ಪರಾಂಬರಿಸಬೇಕು ಅದನ್ನು ಮಾತ್ರ ತಿಳಿಸಬೇಕು.

ಪಂಚಮಾರಿಷ್ಟ ದೋಷ ಶಾಂತಿ ಆಗಬೇಕು

ಜನನ ಕಾಲಕ್ಕೆ ಮೊದಲು ನೋಡುವುದು ಲಗ್ನಕ್ಕೆ ಐದನೇ ಮನೆಯಲ್ಲಿ ಪಾಪ ಗ್ರಹಗಳು ಇವೆಯಾ? ಹೌದು, ಈ ಜಾತಕದಲ್ಲಿ ಐದನೇ ಮನೆಯಲ್ಲಿ ಶನಿ ಗ್ರಹ ಸೂಚಕ ಪಂಚಮಾರಿಷ್ಟ ದೋಷ ಇದೆ. ಅದಕ್ಕಾಗಿ ಪಂಚಮಾರಿಷ್ಟ ಜನನದ ಶನಿ ಶಾಂತಿಯನ್ನು ಮಾಡಿಕೊಳ್ಳಬೇಕು. ಮಗುವಿನ ಆರೋಗ್ಯ ಹಾಗೂ ಆಯುಷ್ಯ ತುಂಬ ಚೆನ್ನಾಗಿದೆ. ಆದ್ದರಿಂದ ಆ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಮಾತೃಕಾರಕನಾದ ಚಂದ್ರನು ಉಚ್ಚ ಸ್ಥಿತಿಯಲ್ಲಿ ತಾಯಿಗೆ ಅನುಕೂಲವಾಗಿದೆ. ಆದರೆ ತಾಯಿಯ ಆರೋಗ್ಯಕ್ಕೆ ಅಲ್ಪ- ಸ್ವಲ್ಪ ಸಮಸ್ಯೆಗಳು ಆಗಬಹುದು. ಅದಕ್ಕೆ ಕಾರಣ ಏನೆಂದರೆ, ಮಗುವಿನ ಜನನ ಕಾಲಕ್ಕೆ ಚಂದ್ರನಿರುವ ವೃಷಭ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಕೇತು ಗ್ರಹ ಇದೆ. ಆ ಕೇತು ಗ್ರಹ ಇರುವಂಥ ಸಿಂಹ ರಾಶಿಯ ಅಧಿಪತಿ ರವಿ ಗ್ರಹವು ತುಲಾ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿದೆ. ಆ ನಂತರ ವೃಶ್ಚಿಕ ಲಗ್ನಕ್ಕೆ ನಾಲ್ಕನೇ ಮನೆಯ ಕುಂಭದಲ್ಲಿ ರಾಹು ಇದೆ. ಇವೆಲ್ಲದರ ಕಾರಣಕ್ಕೆ ತಾಯಿಗೆ ಚರ್ಮ ವ್ಯಾಧಿಯೋ ಮಾನಸಿಕ ಕಿರಿಕಿರಿಯೋ ಇಂಥವು ತುಂಬ ಸಣ್ಣ ಮಟ್ಟದಲ್ಲಿಯಾದರೂ ಕಾಡಬಹುದು.

ತಂದೆಗೆ ಅನುಕೂಲಗಳು

ಲಗ್ನಕ್ಕೆ ಒಂಬತ್ತನೇ ಮನೆಯಲ್ಲಿ ಗುರು ಪರಮೋಚ್ಚ ಸ್ಥಿತಿಯಲ್ಲಿ ಇದ್ದು, ಅದೇ ರೀತಿ ಆ ಒಂಬತ್ತನೇ ಮನೆಯಲ್ಲಿದ್ದ ಕರ್ಕಾಟಕ ರಾಶಿಯ ಅಧಿಪತಿಯಾದ ಚಂದ್ರ ಸಹ ವೃಷಭದಲ್ಲಿ ಉಚ್ಚ ಸ್ಥಿತಿಯಲ್ಲಿದೆ. ಚಂದ್ರ ಇರುವ ವೃಷಭ ರಾಶಿಯಿಂದ ಒಂಬತ್ತನೇ ಮನೆಯಾಗುವಂಥ ಮಕರ ರಾಶಿಯ ಅಧಿಪತಿಯಾದ ಶನಿ ಚಂದ್ರ ಲಗ್ನಕ್ಕೆ ಏಕಾದಶದಲ್ಲಿ ಲಾಭ ಸ್ಥಾನದಲ್ಲಿದೆ. ಈ ಎಲ್ಲ ಯೋಗಗಳ ಕಾರಣಕ್ಕೆ ರವಿಯು ನೀಚ ಸ್ಥಿತಿಯಲ್ಲಿ ಇರುವುದರ ಜೊತೆಗೆ ಈ ಮಗುವಿನ ತಂದೆಗೆ ಅನುಕೂಲಗಳು ಆಗುತ್ತವೆ.

ದೀರ್ಘಾಯುಷ್ಯ- ಆರೋಗ್ಯವಿದೆ

ಈ ಮಗುವಿನ ಜಾತಕದಲ್ಲಿ ದೋಷಗಳು ಇರುವುದರ ತುಂಬ ಒಳ್ಳೆ ಜಾತಕ ಇದು. ಮೊದಲನೆಯದು ಮಗುವಿಗೆ ದೀರ್ಘಾಯುಷ್ಯವಿದೆ. ಚಂದ್ರ ಇರುವಂಥ ವೃಷಭ ರಾಶಿಗೆ ಅಷ್ಟಮ ಸ್ಥಾನವಾದ ಧನುಸ್ಸು ರಾಶಿಯ ಅಧಿಪತಿ ಗುರು ಗ್ರಹವು ಪರಮೋಚ್ಚ ಸ್ಥಿತಿಯಲ್ಲಿದೆ. ಚಂದ್ರನಿಂದ ಅಷ್ಟಮ ಸ್ಥಾನಕ್ಕೆ ಶುದ್ಧಿ ಇದೆ. ಇನ್ನು ವೃಶ್ಚಿಕ ಲಗ್ನಕ್ಕೆ ಅಷ್ಟಮ ಸ್ಥಾನದ ಅಧಿಪತಿಯಾದ ಬುಧ ಗ್ರಹವು ವೃಶ್ಚಿಕ ಲಗ್ನದಲ್ಲಿ ಮಿತ್ರ ಗ್ರಹವಾದ ಕುಜನ ಯುತಿಯಲ್ಲಿದೆ. ಈ ಗ್ರಹ ಸ್ಥಿತಿಯಿಂದ ಮಗುವಿಗೆ ದೀರ್ಘಾಯುಷ್ಯವನ್ನು ದಯಪಾಲಿಸುತ್ತದೆ.

ವಿದ್ಯೆ- ಜ್ಞಾನ ಅಗಾಧ

ಜ್ಞಾನ ಕಾರಕ ಎಂದು ಕರೆಯಲಾಗುವ ಗುರು ಗ್ರಹವು ಪರಮೋಚ್ಚ ಸ್ಥಿತಿಯಲ್ಲಿ ಒಳ್ಳೆ ಜ್ಞಾನ, ಸಂಸ್ಕಾರ, ತಿಳಿವಳಿಕೆ ಇರುತ್ತದೆ. ಗುರು-ಬುಧ ಎರಡೂ ಗ್ರಹ ಉತ್ತಮ ಸ್ಥಿತಿಯಲ್ಲಿ ವಿದ್ಯೆ ತುಂಬ ಚೆನ್ನಾಗಿ ಇರುತ್ತದೆ. ಈ ಜಾತಕದಲ್ಲಿ ಶುಕ್ರ ತನ್ನ ಸ್ವಕ್ಷೇತ್ರವಾದ ತುಲಾ ರಾಶಿಯಲ್ಲಿಯೇ ಇದ್ದು, ಉತ್ತಮ ಸ್ಥಿತಿಯಲ್ಲಿ ಇದ್ದಾನೆ. ಇನ್ನು ಈ ಜಾತಕದ ವಿಚಾರಕ್ಕೆ ಬಂದರೆ ಜನ್ಮ ರಾಶಿಯಾದ ವೃಷಭ ರಾಶಿಗೂ ಶುಕ್ರನೇ ಅಧಿಪತಿಯಾಗಿ, ತನ್ನದೇ ಕ್ಷೇತ್ರ ಎನಿಸಿದ ತುಲಾ ರಾಶಿಯಲ್ಲಿ ಇರುತ್ತಾನೆ. ಜನನ ಕಾಲಕ್ಕೆ ಚಂದ್ರ ದಶೆ ನಡೆಯುತ್ತಿರುವುದು, ವೃಷಭ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಹತ್ತಿರ ಹತ್ತಿರ ಎಂಟು ವರ್ಷಗಳಷ್ಟು ಮಾನಸಿಕ- ದೈಹಿಕ ಆರೋಗ್ಯಕ್ಕೆ, ತಾಯಿ ಪ್ರೀತಿಗೆ ಬಹಳ ಅನುಕೂಲ ಇರುತ್ತದೆ.

ಜನನವಾಗಿದೆಯೋ ಅದೇ ದೇಶದಲ್ಲಿ ಬೆಳೆಯಬೇಕು

ಈ ಮಗುವಿನ ಜನ್ಮ ಲಗ್ನ ವೃಶ್ಚಿಕದ ಅಧಿಪತಿಯಾದ ಕುಜ ಗ್ರಹವು ಅದೇ ರಾಶಿಯಲ್ಲಿಯೇ ಸಿಟ್ಟು, ಹಠವನ್ನು ತಡೆಯಲು ಸಾಧ್ಯವಿಲ್ಲ, ವೃಷಭ ರಾಶಿಯಾಗಿ, ಚಂದ್ರನು ಅಲ್ಲಿಯೇ ಉಚ್ಛ ಸ್ಥಿತಿಯಲ್ಲಿ ಬಹಳ ಸೌಂದರ್ಯವನ್ನು ಆ ಗ್ರಹ ಸ್ಥಿತಿಯು ದಯಪಾಲಿಸುತ್ತದೆ ಎಂದು ಜ್ಯೋತಿಷ್ಯ ಗ್ರಂಥಗಳು ಒತ್ತಿ ಹೇಳುತ್ತವೆ, ಈ ಮಗು ಹುಟ್ಟಿರುವ ಸ್ಥಳದಲ್ಲಿಯೇ ಬೆಳೆಯಬೇಕು. ಭಾರತದಲ್ಲಿ ಹುಟ್ಟಿರುವ ಈ ಮಗು ಇಲ್ಲಿಯೇ ಬೆಳವಣಿಗೆ ಆಗಬೇಕು. ರಾಹು ದೇಶ ಬರುವ ತನಕ ಈ ದೇಶದಿಂದ ಹೊರಗೆ ಹೋಗಬಾರದು. ಹುಟ್ಟಿದೆಯೋ ಅದೇ ಎಲ್ಲಿ ರಾಜ್ಯ, ಸ್ಥಳ, ದೇಶದಲ್ಲೇ ಬೆಳೆಯಬೇಕು. ಹಾಗೊಂದು ವೇಳೆ ಹೊರ ದೇಶ ಬೆಳೆಸಬೇಕು ಎಂದುಕೊಂಡಲ್ಲಿ ಆ ಮಗುವಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಪೋಷಕರಿಗೆ ಮತ್ತೊಂದು ಮಗು ಆಗುವ ಯೋಗವಿದೆ

ಈ ಜಾತಕದ ಲಗ್ನದ ಮೂರನೇ ಮನೆಯ ಮೇಲೆ ಪರಮೋಚ್ಚ ಗುರುವಿನ ದೃಷ್ಟಿ, ಚಂದ್ರ ಇರುವ ರಾಶಿಯಿಂದ ಮೂರನೇ ಮನೆಯಲ್ಲಿ ಪರಮೋಚ್ಚ ಗುರು- ಈ ಗ್ರಹ ಸ್ಥಿತಿಯಿಂದಾಗಿ ಮಗುವಿಗೆ ಸೋದರ ಯೋಗವಿದೆ. ಅಂದರೆ ಈ ಮಗುವಿನ ಬೆನ್ನಿಗೆ ಮತ್ತೊಂದು ಮಗು ಹುಟ್ಟುವ ಯೋಗ ಕಂಡುಬರುತ್ತದೆ. ಅದು ಕೂಡ ಹೆಣ್ಣುಮಗುವಿಗಿಂತ ಮತ್ತೊಂದು ಗಂಡು ಮಗು ಆಗುವ ಯೋಗವೇ ಹೆಚ್ಚು ಕಂಡು ಬರುತ್ತದೆ. ಏಕೆಂದರೆ ಲಗ್ನ ಮೂರನೇ ಮನೆಯ ಅಧಿಪತಿ ಶನಿ ಇರುವುದನ್ನು ಬಿಟ್ಟರೆ ಉಳಿದೆಲ್ಲ ಸ್ಥಿತಿಯು ಮತ್ತೊಂದು ಗಂಡು ಮಗುವಿನ ಜನನವನ್ನೇ ಸೂಚಿಸುತ್ತಾ ಇದೆ. ಆದರೆ ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಅದಕ್ಕೆ ಕಾರಣ ಸಹ ಲಗ್ನಕ್ಕೆ ತೃತೀಯದಲ್ಲಿ ಇರುವ ಶನಿ ಗ್ರಹ. ಆದ್ದರಿಂದ ಮಗು ಈ ಕುಟುಂಬದಲ್ಲಿ ಕಾಲಿಡುವ ಮತ್ತೊಂದು ಯೋಗವಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಪೂಜೆಯ ಫಲ: ಪೋಷಕರಾದ ವಿಕ್ಕಿ ಕೌಶಲ್-ಕತ್ರಿನಾ ಕೈಫ್

ಒಟ್ಟಾರೆಯಾಗಿ ಈ ಮಗುವಿನ ಜಾತಕ ಜ್ಯೋತಿಷ್ಯ ಕಲಿಯುವವರಿಗೆ ಹಾಗೂ ಆಸಕ್ತರಿಗೆ ಒಂದೊಳ್ಳೆ ಪಠ್ಯದಂತೆ ಇದೆ. ಈ ಮೇಲೆ ಕಾಣಿಸಿದಂತೆ ಮಾಡಿದ ವಿಶ್ಲೇಷಣೆಯನ್ನು ಅಕಾಡೆಮಿಕ್ ಆದ ಹಾಗೆ ನೋಡಬೇಕು ಅನ್ನುವುದು ಜ್ಯೋತಿಷಿಯಾಗಿ ನನ್ನ ಕಳಕಳಿಯ ಮನವಿ. ಆ ತಾರಾ ದಂಪತಿ ಹಾಗೂ ಮಗುವಿಗೆ ಭಗವಂತನು ಸಕಲ ಆಯುರ್-ಆರೋಗ್ಯ-ಐಶ್ವರ್ಯ- ಸುಖ- ನೆಮ್ಮದಿ ಎಲ್ಲವನ್ನೂ ಪಾಲಿಸಲಿ ಎಂದು ಪ್ರಾರ್ಥಿಸುತ್ತಾ ಲೇಖನವನ್ನು ಪೂರ್ಣಗೊಳಿಸುತ್ತೇನೆ.

(ಈ ಲೇಖನವನ್ನು ಜ್ಯೋತಿಷಿಗಳು ಜ್ಯೋತಿಷ್ಯದ ಆಧಾರದಲ್ಲಿ ಬರೆದಿದ್ದಾರೆ. ಇಲ್ಲಿ ಕಂಡುಬಂದಿರುವ ಅಭಿಪ್ರಾಯವು ಸಂಪೂರ್ಣವಾಗಿ ಲೇಖಕರಲ್ಲಿದೆ. ಇದನ್ನು ಟಿವಿ9 ಕನ್ನಡ ವೆಬ್‌ಸೈಟ್ ಆಗಲೀ ಅಥವಾ ಸೋದರ ಸಂಸ್ಥೆಯಾಗಲೀ ಅನುಮೋದಿಸುವುದಿಲ್ಲ ಮತ್ತು ಈ ಲೇಖನಕ್ಕೆ ಜವಾಬ್ದಾರಿಯಲ್ಲ. ಇದು ನಂಬಿಕೆಯ ಆಧಾರದಲ್ಲಿ ಪ್ರಸ್ತುತವಿರುವ ಪದ್ಧತಿಯಂತೆ ಬರೆದಿರುವ ಲೇಖನವಾಗಿದೆ.- ಸಂಪಾದಕ)

ಲೇಖನ- ಪಂಡಿತ್ ವಿಠ್ಠಲ್ ಭಟ್
ನಿರೂಪಣೆ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *