
ಹಾಸನ, ಏಪ್ರಿಲ್ 02: ಅವರೆಲ್ಲಾ ಒಂದೇ ಕುಟುಂಬಗಳು. ಒಂದೇ ಸಮುದಾಯಕ್ಕೆ ಸೇರಿದವರು. ಆದರೆ ದಶದಕದ ಹಿಂದೆ ನಡೆದ ಅದೊಂದು ಚುನಾವಣೆಯನ್ನೇ ಎರಡು ಭಾಗ ಮಾಡಿ ಹಾಕಿದೆ. ಸಣ್ಣಪುಟ್ಟ ವಿಚಾರಕ್ಕೂ ಕಲಹ, ಮಾರಾಮಾರಿ (ಘರ್ಷಣೆ) ನಡೆಯುತ್ತಿದೆ. ಐದು ಕುಟುಂಬಗಳು ವಾಸಿಸುವ ಮನೆಗಳಿಗೆ ತೆರಳಲು ರಸ್ತೆ ನಿರ್ಮಾಣದ ವಿಚಾರದಲ್ಲಿ ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಜಿಲ್ಲೆಯ ಬೇಲೂರು ತಾಲೂಕಿನ ಹಂಚಿಹಳ್ಳಿಯಲ್ಲಿ ಘಟನೆ ನಡೆದಿದೆ. ಅಧಿಕಾರಿಗಳ ಸೂಚನೆಯಂತೆ ದಾರಿ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಯತ್ನ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು.
ನಡೆದಿದ್ದೇನು?
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಐದು ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಪೈಶಾಚಿಕ ಘಟನೆಯ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ
ಗ್ರಾಮದ ಗಂಗಾಬೋವಿ, ಶೀವಕುಮಾರ್, ಸೋಮ, ಕಿರಣ್, ಆನಂದ್, ಪುನೀತ್, ಪ್ರತಾಪ್, ಪ್ರಸನ್ನ, ನಾಗಬೋವಿ, ಮಂಜಾಬೋವಿ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ನೊಂದ ಕುಟುಂಬಗಳು ಇಂದು ಹಾಸನದ ಡಿಸಿ ಕಚೇರಿಗೆ ಆಗಮಿಸಿ ರಕ್ಷಣೆಗೆ ಮೊರೆಯಿಟ್ಟಿದ್ದಾರೆ. 8 ವರ್ಷಗಳಿಂದಲೂ ತಮ್ಮ ಮೇಲೆ ಒಂದಿಲ್ಲೊಂದು ನೆಪವೊಡ್ಡಿ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ.
ಮಹಿಳೆ ಬಟ್ಟೆ ಎಳೆದು ಹಲ್ಲೆ
ಡಿಸಿ, ತಹಶೀಲ್ದಾರ್ ಸೂಚನೆಯಂತೆ ರಸ್ತೆ ನಿರ್ಮಾಣ ಮಾಡಲು ಯತ್ನಿಸಿದಾಗ ಹಲವು ಬಾರಿ ಗಲಾಟೆ ಮಾಡಲಾಗಿದೆ. ಈಗ ಕೊನೆಯದಾಗಿ ಮಾರ್ಚ್ 22 ರಂದು ಮುಂಜಾನೆ 7ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿ ಮಹಿಳೆಯನ್ನ ಎಳೆತಂದು ಹಲ್ಲೆ ಮಾಡಿದ್ದಾರೆ. ಮೈ ಮೇಲಿನ ಬಟ್ಟೆ ಎಳೆದು ಹಲ್ಲೆ ಮಾಡಿ ನೀಚ ಕೃತ್ಯ ಎಸಗಿದ್ದಾಳೆ ಎಂದು ಮಹಿಳೆ ಕಣ್ಣಿರಿಟ್ಟಿದ್ದಾಳೆ. ಅವರೆ ವಿಡಿಯೋ ಮಾಡಿ ನಮ್ಮ ಮರ್ಯಾದೆ ತೆಗೆದಿದ್ದಾರೆ ಎಂದು ಅಳಲು ತೊಡಿಕೊಂಡಿದ್ದು, ನಮ್ಮನ್ನ ಅಮಾನುಷವಾಗಿ ಹಲ್ಲೆ ಮಾಡಿದವರ ಬಂಧನ ಆಗಲೇಬೇಕು ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿ ವಿರುದ್ಧ ಕುಮಾರ್ ಎಂಬುವವರು ಚುನಾವಣೆಗೆ ನಿಂತರು ಎಂಬ ಕಾರಣಕ್ಕೆ 8 ವರ್ಷದಿಂದ ದ್ವೇಷ ಸಾಧಿಸುತ್ತಿದ್ದಾರೆ ಎಂದು ನೊಂದ ಕುಟುಂಬಗಳು ಸೇರಿಕೊಂಡಿವೆ. ನಾವು ಐದು ಕುಟುಂಬಗಳಿದ್ದು, ಉಳಿದ 20 ಕುಟುಂಬಗಳು ನಮಗೆ ಕಿರುಕುಳ ನೀಡುತ್ತಿವೆ. ಮಾರ್ಚ್ 22 ರಂದು ಹಲ್ಲೆ ನಡೆಸಿದ್ದಾರೆ. ನಮಗೆ ಈಗ ಬೇರೆ ದಾರಿಯೇ ಇಲ್ಲ, ಅವರೇ ಹಲ್ಲೆ ಮಾಡಿ ಮತ್ತೆ ಜೀವಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳು ಬಂದು ದಾರಿ ಗುರುತಿಸಿ ಹೋದರೂ ದಾರಿಯನ್ನ ಬಂದ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
10 ಜನರ ವಿರುದ್ಧ ಪ್ರಕರಣ: ಆರು ಜನರ ಬಂಧನ
ಇನ್ನು ಘಟನೆ ಸಂಬಂಧ ಶಿವಕುಮಾರ್, ಗಂಗಾಬೋವಿ ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇತ್ತ ಪ್ರತಾಪ್ ಎಂಬವರು ನೀಡಿದ ದೂರು ನೇಮ್ಡ್ ಕುಮಾರ್, ಗೋವಿಂದಪ್ಪ ಹಾಗೂ ಇತರೆ ನಾಲ್ವರ ಕೂಟ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೆ 6 ಜನರ ಬಂಧನವಾಗಿದ್ದು ಪ್ರತಾಪ್, ಮಂಜಾಬೋವಿ, ಕಿರಣ್ ಹಾಗೂ ಸೋಮ ಎಂಬುವವರನ್ನು ಬಂಧಿಸಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾನೂನು ಪಾಲನೆ ಕೇವಲ ಆಯ್ಕೆಯ ವಿಷಯವೇ?: ಬಸವನಗುಡಿ ಪುತ್ತಿಗೆ ಮಠಕ್ಕೆ ಬಂದಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಯುವಕ
ರಸ್ತೆಯೊಂದರ ವಿಚಾರದಲ್ಲಿ ರಾಜಕೀಯ ತಂದು ಪದೇ ಪದೇ ಬಡಿದಾಡಿಕೊಂಡ ಎರಡು ಗುಂಪುಗಳು ಇದೀಗ ಪರಸ್ಪರ ದೂರು, ಪ್ರತಿದೂರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಘಟನೆಯ ಸಂಬಂಧ ಹಳೇಬೀಡು ಠಾಣೆಯ ಪಿಎಸ್ಐ ಮಂಜುನಾಥ್, ಒಂದು ಗುಂಪಿನ ಪರ ಬೆಂಬಲ ನೀಡುತ್ತಿದ್ದಾರೆಂದು ಬಂಧನಕ್ಕೆ ಒಳಗಾಗಿದ್ದಾರೆ ಶಿವಕುಮಾರ್ ಮತ್ತು ಇತರರ ಫಲಿತಾಂಶಗಳನ್ನು ಆರೋಪಿಸಿದ್ದಾರೆ. ಆದರೆ ತಹಶೀಲ್ದಾರ್ ಸೂಚನೆಯಂತೆ ಪಿಎಸ್ ಐ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಆದರೆ ರಾಜಕೀಯ ಅಧಿಕಾರದ ಪ್ರಭಾವ ಹೊಂದಿರುವ ಶಿವಕುಮಾರ್ ಮತ್ತು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ, ರಕ್ಷಣೆ ಕೊಡಿ ಎಂದು ಡಿಸಿ ಅವರನ್ನ ಭೇಟಿ ಮಾಡಿದ ನೊಂದ ಕುಟುಂಬದ ಸದಸ್ಯರು, ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅಳಲುತೋಡಿಕೊಂಡಿದ್ದಾರೆ.
ಬೀದಿಯಲ್ಲಿ ಮಾರಾಮಾರಿ
ಒಟ್ಟಿನಲ್ಲಿ 8 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ಇದೀಗ ಬೀದಿಯಲ್ಲಿ ಮಾರಾಮಾರಿಯ ಹಂತಕ್ಕೆ ಬಂದು ನಿಂತಿದೆ. ಅಷ್ಟೇ ಅಲ್ಲದೆ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ ಮಾಡುವ ನೀಚತನದ ಕೃತ್ಯದ ಬಗ್ಗೆಯೂ ಆರೋಪ ಕೇಳಿಬಂದಿದೆ. ಸದ್ಯ ಎರಡೂ ಕಡೆಯಿಂದ ದೂರು ದಾಖಲಿಸಿದ್ದು, ತನಿಖೆ ಬಳಿಕ ಸತ್ಯ ತಿಳಿಯಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.