
ರಾಯಚೂರು, ಮಾ.18: ಜಿಲ್ಲೆಯ ಅರಕೇರಾ ತಾಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಈ ದೃಶ್ಯ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈತ ಷರೀಫ್ ಸಾಬ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಇಡೀ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುತ್ತಿತ್ತು. ಈ ವೇಳೆ ಜಮೀನಿನಲ್ಲಿದ್ದ ಎತ್ತರದ ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ ತೀವ್ರತೆಗೆ ಮರಕ್ಕೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಘಟನೆಯ ವೇಳೆ ಮರದ ಹತ್ತಿರ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ತೆಂಗಿನ ಮರವು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿರುವ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ, ಇದು ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ