ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಘು ಅವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಈ ಮೊದಲು ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಗೆಲುವು ಕಂಡಿದ್ದರು. ಆ ಬಳಿಕ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ರಘು ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರ ನಟನೆಯ ಸಿನಿಮಾ ಅಬ್ಬರದಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಸಿನಿಮಾ? ಅದುವೇ ‘ವೃಷಭ’.
ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರಕ್ಕೆ ಕನ್ನಡದ ನಂದ ಕಿಶೋರ್ ನಿರ್ದೇಶನವಿದೆ. ಈ ಸಿನಿಮಾಗೆ ರಾಗಿಣಿ ನಾಯಕಿ. ಖ್ಯಾತ ನಿರ್ದೇಶಕ ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ರಘು ಕೂಡ ನಟಿಸಿದ್ದಾರೆ. ಸಿನಿಮಾದ ಆರಂಭದಲ್ಲಿ ಕೆಲವು ಹೊತ್ತು ಅವರು ಕಾಣುತ್ತಾರೆ. ಅವರದ್ದು ವಿಲನ್ ಪಾತ್ರ.
‘ವೃಷಭ’ ಸಿನಿಮಾ ಎರಡು ಕಾಲಘಟ್ಟದಲ್ಲಿ ಸಾಗುತ್ತಿದೆ. ಒಂದು ರಾಜರ ಕಾಲ, ಮತ್ತೊಂದು 2025. ರಾಜರ ಕಾಲಘಟ್ಟದಲ್ಲಿ ರಘು ಕಾಣಿಸಿಕೊಳ್ಳುತ್ತಾರೆ. ರಾಜ ವಿಯೇಂದ್ರ ವೃಷಭ (ಮೋಹನ್ಲಾಲ್) ಆಸ್ಥಾನದಲ್ಲಿ ಸ್ಫಟಿಕ ಲಿಂಗ ಇರುತ್ತದೆ. ಇದನ್ನು ಕಡಿಯಲು ಒಂದು ಗ್ಯಾಂಗ್ ಬರುತ್ತದೆ. ಈ ಗ್ಯಾಂಗ್ನ ಲೀಡರ್ ಆಗಿ ರಘು ನಟಿಸಿದ್ದಾರೆ.
ರಘು ಅವರು ಈ ಸಿನಿಮಾಗಾಗಿ ಸಂಪೂರ್ಣವಾಗಿ ಗಡ್ಡ ಬೋಳಿಸಿದ್ದಾರೆ, ಮುಖ ಹಾಗೂ ಕಣ್ಣನ್ನು ಭಯಾನಕವಾಗಿ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್ 25 ರಂದು ರಿಲೀಸ್ ಆಗಿದೆ. ಈ ಚಿತ್ರದ ಮೂಲ ಭಾಷೆ ಮಲೆಯಾಳಂ ಆಗಿದ್ದು, ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿದೆ.
ಇದನ್ನೂ ಓದಿ: ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್ ನಿಂದಲೇ ಪ್ಲ್ಯಾನ್? ಸೂರಜ್ ಆರೋಪ
ರಘು ಅವರು ಈ ಮೊದಲು ‘ಕಾಂತಾರ: ಅಧ್ಯಾಯ 1’ ಚಿತ್ರದಲ್ಲೂ ವಿಲನ್ ಪಾತ್ರ ಮಾಡಿದರು. ಈ ವೇಳೆ ರಘು ಅವರನ್ನು ಗುರುತಿಸಲು ಸಾಧ್ಯವೇ ಆಗಿರಲಿಲ್ಲ. ಆ ರೀತಿಯಲ್ಲಿ ಮೇಕಪ್ ಇತ್ತು. ಈಗ ‘ವೃಷಭ’ ಚಿತ್ರಕ್ಕೂ ಅವರು ಅದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ, ಅವರನ್ನು ಗುರುತಿಸುವುದೇ ಕಷ್ಟ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.