ರಾಯಚೂರು, ಡಿಸೆಂಬರ್ 16: ವೈಟಿಪಿಎಸ್ ಉತ್ಪಾದನಾ ವಿದ್ಯುತ್ ಘಟಕಕ್ಕೆ ಸೇರಿದೆ ಕಲ್ಲಿದ್ದಲು ಅಕ್ರಮ ಸಾಗಾಟ ಸಂಬಂಧ ಖಾಸಗಿ ನಿರ್ವಹಣಾ ಕಂಪನಿ ವಿರುದ್ಧ ದೂರು ದಾಖಲಾಗಿದೆ. ವಿದ್ಯುತ್ ಉತ್ಪಾದನಾ ಘಟಕದ ಮುಖ್ಯ ಅಭಿಯಂತರ ಚಂದ್ರಶೇಖರ್ ಶೆಟ್ಟಿ ಅವರ ದೂರಿನ ಅನ್ವಯ ಕಲ್ಲಿದ್ದಲು ಡ್ಯಾಂಪಿಂಗ್ ಮತ್ತು ಪ್ರದರ್ಶನವನ್ನು ನಿರ್ವಹಿಸುತ್ತಿರುವ ಎಂ.ಆರ್.ಎಸ್. ಪವರ್ ಮೆಕ್ ಕಂಪನಿಯ ಉಪಾಧ್ಯಕ್ಷ ಅಜಯ್ ಕುಮಾರ್ ಹಾಗೂ ಉಸ್ತುವಾರಿ ಸುರೇಂದ್ರನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ.
200 ಟನ್ ಕಲ್ಲಿದ್ದಲು ಅಕ್ರಮ ಸಾಗಾಟ
2025ರ ಮೇ ತಿಂಗಳಿನಿಂದ ಡಿಸೆಂಬರ್ 11ರವರೆಗೆ ಅಕ್ರಮವಾಗಿ 10 ಲಕ್ಷ ಮೌಲ್ಯದ ಸುಮಾರು 200 ಟನ್ ಕಲ್ಲಿದ್ದಲು ಸಾಗಾಟ ನಡೆಸಲಾಗಿದೆ. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಿರ್ವಹಣಾ ಕಂಪನಿ ನಷ್ಟ ಉಂಟುಮಾಡಿದೆ ಎಂದು ರಾಯಚೂರು ಗ್ರಾಮೀಣ ಠಾಣೆಗೆ ನೀಡಲಾದ ದೂರಿನಲ್ಲಿ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ರಾಯಚೂರು ವಿದ್ಯುತ್ ಉತ್ಪಾದನಾ ಘಟಕದ ಕಲ್ಲಿದ್ದಲು ಖಾಸಗಿ ಕಾರ್ಖಾನೆಗಳಿಗೆ ಸಪ್ಲೈ; ಕೋಟ್ಯಂತರ ರೂ ಲೂಟಿ?
ಕಂಪನಿ ಕಳ್ಳಾಟ
ವೈಟಿಪಿಎಸ್ ಉತ್ಪಾದನಾ ವಿದ್ಯುತ್ ಘಟಕಕ್ಕೆ ಪ್ರತಿನಿತ್ಯ 3-4 ಗೂಡ್ಸ್ ರೈಲುಗಳ ಮೂಲಕ 180-240 ಬೋಗಿ ಕಲ್ಲಿದ್ದಲು ಸರಬರಾಜಾಗುತ್ತದೆ. ರೈಲಿನಲ್ಲಿ ಬರುವ ಸುಮಾರು 12-16 ಸಾವಿರ ಟನ್ ಎತ್ತರಕ್ಕೆ ಪೂರ್ಣ ಕಲ್ಲಿದ್ದಲು ಡಂಪ್ ಮಾಡದೆ ಕಳ್ಳಾಟ ಆಡುತ್ತಿದ್ದ ಕಂಪನಿ, ಕೆಲವು ಪ್ರಮಾಣದ ಕಲ್ಲಿದ್ದಲನ್ನು ರೈಲಿನಲ್ಲಿಯೇ ಬಾಕಿ ಉಳಿಸಿಕೊಂಡಿದೆ. ಬಳಿಕ ಯರಮರಸ್ ರೈಲು ನಿಲ್ದಾಣದ ಬಳಿ ಉಳಿದ ಕಲ್ಲಿದ್ದಲು ಅನ್ ಲೋಡ್ ಮಾಡಲಾಗಿತ್ತು, ಅಲ್ಲಿಂದ ಆತನನ್ನು ಖಾಸಗಿ ಕಾರ್ಖಾನೆಗಳು ಮತ್ತು ಇಟ್ಟಿಗೆ ಕಾರ್ಖಾನೆಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟದ ಕುರಿತು 2023ರಲ್ಲಿ ಟಿವಿ9 ವಿಸ್ತೃತವಾದ ವರದಿ ಬಿತ್ತರಿಸಿತ್ತು. ಆ ಬಳಿಕ ಕೆಪಿಸಿಎಲ್ ಅಧಿಕಾರಿಗಳು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಮತ್ತೆ ವೈಟಿಪಿ ಘಟಕಕ್ಕೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟದ ಆರೋಪ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.