ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ 12 ವರ್ಷದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಈ ಹಿಂದೆ ಎರಡು ಬಾರಿ ಮರಿಗಳನ್ನು ಕಳೆದುಕೊಂಡಿದ್ದ ಹಂಸಿನಿಯ ಸಾವು ಮೃಗಾಲಯಕ್ಕೆ ನಷ್ಟವಾಗಿದೆ.

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣವಾದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ (Tyavarekoppa Safari) ಕಳೆದ ಕೆಲವು ದಿನಗಳ ಹಿಂದೆ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ನೀರಾನೆ ಕೂಡ ಇಂದು ಸಾವನ್ನಪ್ಪಿದೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 12 ವರ್ಷದ ಹೆಣ್ಣು ನೀರಾನೆ (Hippopotamus) ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿದ ಪರಿಣಾಮ ಉಂಟಾದ ಗಂಭೀರ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಹಂಸಿನಿಯ ಜೀವನದ ಕಥೆ ಒಂದು ನೋವಿನ ಇತಿಹಾಸದಂತಿದೆ. 12 ವರ್ಷದ ಈ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಈ ಬಾರಿ ಹಂಸಿನಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು.

ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಸಿನಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೆ, ದುರದೃಷ್ಟವಶಾತ್ ಈ ಬಾರಿಯೂ ಮರಿ ಭೂಮಿಗೆ ಬರುವ ಮೊದಲೇ ಗರ್ಭದಲ್ಲೇ ಸಾವನ್ನಪ್ಪಿದೆ.

ಗರ್ಭದಲ್ಲೇ ಮರಿ ಮೃತಪಟ್ಟಿದ್ದರಿಂದ ಹಂಸಿನಿಯ ಗರ್ಭಾಶಯದಲ್ಲಿ ತೀವ್ರವಾದ ಸೋಂಕು (Uterine Infection) ಕಾಣಿಸಿಕೊಂಡಿತ್ತು. ಇದು ಕ್ರಮೇಣ ರಕ್ತಕ್ಕೆ ಹರಡಿ ‘ಸೆಪ್ಟಿಸೇಮಿಯಾ’ ಎಂಬ ಸ್ಥಿತಿಗೆ ತಲುಪಿತ್ತು. ಇದರಿಂದಾಗಿ ಹಂಸಿನಿಯ ದೇಹದ ಬಹು ಅಂಗಾಂಗಗಳು ವೈಫಲ್ಯಗೊಂಡು (Multiple Organ Failure) ಅದು ಸಾವನ್ನಪ್ಪಿದೆ. ಏಪ್ರಿಲ್ 10 ರಂದು ಹಂಸಿನಿಯ ಗರ್ಭಾಶಯದ ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಗರ್ಭದಲ್ಲಿ ಭ್ರೂಣ ಮೃತಪಟ್ಟಿದ್ದು, ಅದರಿಂದ ಸೋಂಕು ಇಡೀ ದೇಹಕ್ಕೆ ಹರಡಿದೆ ಎಂಬುದು ದೃಢಪಟ್ಟಿತ್ತು.

ಇದೇ ನೀರಾನೆ ಹಂಸಿನಿ ಕಳೆದ ಮಾರ್ಚ್ ತಿಂಗಳಿನಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮಾರ್ಚ್ 19 ರಂದು ಮಧ್ಯರಾತ್ರಿ ಹಂಸಿನಿಗೆ ಚಿಕಿತ್ಸೆ ನೀಡಲು ಹೋದಾಗ, ಅದು ದಿಢೀರನೆ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಡಾ. ಸಮೀಕ್ಷಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ಘಟನೆಯ ನಂತರ ಮೃಗಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಡಾ. ಸಮೀಕ್ಷಾ ಅವರ ಸಾವಿನ ನಂತರ ಹಂಸಿನಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ ಹಂಸಿನಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು. ಅದರ ಸಾವಿನಿಂದಾಗಿ ಮೃಗಾಲಯದ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಈಗಾಗಲೇ ಡಾ. ಸಮೀಕ್ಷಾ ಅವರ ಸಾವಿನ ನೋವಿನಲ್ಲಿದ್ದ ಮೃಗಾಲಯಕ್ಕೆ, ಈಗ ಹಂಸಿನಿಯ ಸಾವು ಮತ್ತೊಂದು ದೊಡ್ಡ ನಷ್ಟ ತಂದಿದೆ. ಮೃತ ನೀರಾನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ವನ್ಯಜೀವಿ ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Source link
ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನ ಬಲಿ ಪಡೆದಿದ್ದ ನೀರಾನೆ 'ಹಂಸಿನಿ'ಯೂ ಸಾವು! ಕಾರಣವೇನು ಗೊತ್ತಾ?