
ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದರು.
ಮೈಸೂರು (ಏ.18): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಮತ್ತು ನಿಮ್ಮ ಮಗ ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆಗ್ರಹಿಸಿದರು. ಐದು ವರ್ಷವೂ ನಮ್ಮ ತಂದೆಯೇ ಸಿಎಂ ಎಂದು ಯತೀಂದ್ರ ಹೇಳಿದ್ದಾರೆ. ಅದು ಅವರ ಪಕ್ಷದ ವಿಚಾರ. ನೀವು ಎಷ್ಟು ವರ್ಷವಾದರೂ ಅಧಿಕಾರದಲ್ಲಿರಿ. ನಿಮ್ಮ ಅಧಿಕಾರದ ಅವಧಿಯಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಚುನಾವಣೆ ಮಾಡಿ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಮಾಜವಾದಿ ಎಂದು ಹೇಳಿಕೊಳ್ಳುವ ನೀವು, ನಿಮ್ಮ ಮಗನೇ ಅಧಿಕಾರದಲ್ಲಿದ್ದರೆ ಹೇಗೆ? ಪಕ್ಷಕ್ಕಾಗಿ ದುಡಿದಿರುವ ಇತರರಿಗೂ ಅಧಿಕಾರ ಕೊಡಿ. ಯಾವುದೇ ಪಕ್ಷದ ಕಾರ್ಯಕರ್ತನಾಗಿರಲಿ ಅವರು ಜಿಪಂ, ತಾಪಂ, ನಗರ ಪಾಲಿಕೆ ಸದಸ್ಯನಾಗಲು ಚುನಾವಣೆ ನಡೆಸಬೇಕು. ನಮಗೆ ಅಧಿಕಾರಿ ಸಿಗುವುದಿಲ್ಲ ಎಂಬ ಭಯದಿಂದ ಚುನಾವಣೆ ಮಾಡದೇ ಇದ್ದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಎಂಬ ಬದ್ಧತೆ ಇದ್ದರೆ ಕೂಡಲೇ ಚುನಾವಣೆ ಮಾಡಿ ಎಂದು ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಈಗ ಚುನಾವಣೆ ನಡೆಸಿದರೆ ಎನ್ ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆ ಎಂಬ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಗೆ ಮೈತ್ರಿ ಮುಂದುವರೆಯುವುದರ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಜೊತೆ ಚರ್ಚೆ ಆಗಿದೆ. ಮೈಸೂರು ಜಿಲ್ಲೆಯಲ್ಲಿ ಎರಡು ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.
ಜೆಡಿಎಸ್ ಪಕ್ಷವೇ ಕುಟುಂಬ
ನಮ್ಮದು ಕುಟುಂಬ ರಾಜಕಾರಣವಲ್ಲ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್ ಅವರು, ಆಶ್ರಯ ಸಮಿತಿ ಸದಸ್ಯ ಯಾರು? ಎಂಎಲ್ಸಿ ಯಾರು? ಬಿಡಿಎ ಸದಸ್ಯನಾಗಲು ಮೈಸೂರಿನ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಸಿ, ಬೆಂಗಳೂರಿನಲ್ಲಿ ಸೇರಿಸಿದ್ದು ಯಾಕೆ? ನಿಮ್ಮ ಯಾರೂ ನಿಷ್ಠಾವಂತ ಕಾರ್ಯಕರ್ತ ಇರಲಿಲ್ಲವೇ? ಇದರಲ್ಲಿ ಯಾರದು ಕುಟುಂಬ ರಾಜಕಾರಣ ಎಂದು ಪ್ರಶ್ನಿಸಿದರು. ನಮ್ಮದು ಸಣ್ಣ ಪಕ್ಷ. ನಿಮ್ಮಂತೆ ರಾಷ್ಟ್ರೀಯ ಪಕ್ಷವಲ್ಲ. ನಮಗೆ ಪಕ್ಷವೇ ಕುಟುಂಬ. ಕುಮಾರಸ್ವಾಮಿ ಅವರು ಎಲ್ಲವನ್ನೂ ಬಿಟ್ಟು ಎಲ್ಲಿದ್ದವರನ್ನೋ ಕರೆದುಕೊಂಡು ಬಂದು ಅಧಿಕಾರ ಕೊಡುತ್ತಾರೆ. ಅವರು ಕೈಕೊಟ್ಟು ಹೋಗುತ್ತಾರೆ. ಅದಕ್ಕೆ ಅವರಿಂದ ಬೈಸಿಕೊಳ್ಳುವ ಬದಲು ಕುಟುಂಬದವರಿಗೆ ಕೊಡುತ್ತೇವೆ ಎಂದು ಅವರು ಹೇಳಿದರು.