ಬೆಂಗಳೂರು, ಏ.15: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಎಚ್‌ಎಎಲ್ (ಎಚ್‌ಎಎಲ್) ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು, ಈ ವೇಳೆ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತಾದ 18 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಯಾವೆಲ್ಲ ಮನವಿಗಳನ್ನು ಮಾಡಲಾಗಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.
ಪ್ರಮುಖ 18 ಬೇಡಿಕೆಗಳು:
- ಕೋಲಾರ ಕೋಚ್ ಫ್ಯಾಕ್ಟರಿ: 1,123 ಭೂಮಿ ನೀಡಿದ್ದರೂ ಅನುಷ್ಠಾನಗೊಳ್ಳಲು ಈ ಯೋಜನೆ ಪುನರುಜ್ಜೀವನಕ್ಕೆ ಮನವಿ.
- ಹೈ-ಸ್ಪೀಡ್ ರೈಲು ವಿಸ್ತರಣೆ: ಬೆಂಗಳೂರು-ಮೈಸೂರು ವಿಭಾಗವನ್ನು ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಸೇರಿಸಲು ಕೋರಿಕೆ.
- ಸಬರ್ಬನ್ ರೈಲು ಮತ್ತು ಮುಂಬೈ ಕಾರಿಡಾರ್: ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಹಾಗೂ ಕಿತ್ತೂರು-ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಿಸಲು ವಿನಂತಿ.
- ಜಲ ಜೀವನ್ ಮಿಷನ್ (ಜೆಜೆಎಂ): ಕೇಂದ್ರದಿಂದ ಬರಬೇಕಾದ ₹17,554 ಕೋಟಿ ಬಾಕಿ ಹಣ ಬಿಡುಗಡೆಗೆ ಒತ್ತಾಯ.
- 15ನೇ ಹಣಕಾಸು ಆಯೋಗದ ಅನುದಾನ: ಗ್ರಾಮ ಪಂಚಾಯತ್‌ಗಳಿಗೆ ಬರಬೇಕಾದ ₹2,860 ಕೋಟಿ ಅನುದಾನ ಬಿಡುಗಡೆಗೆ ಮನವಿ.
- ರಾಷ್ಟ್ರೀಯ ಹೆದ್ದಾರಿ ಯೋಜನೆಗಳು: ಕಳೆದ 12 ವರ್ಷಗಳಿಂದ ಬಾಕಿ ಇರುವ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿಗೆ ಕೋರಿಕೆ.
- ಕೊರತೆ ಅನುದಾನ: 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹5,495 ಕೋಟಿ ಬಿಡುಗಡೆಗೆ ವಿನಂತಿ.
- ಬೆಂಗಳೂರಿಗೆ ವಿಶೇಷ ಕಾರ್ಯಕ್ರಮ: ನಗರದ ಮೂಲಸೌಕರ್ಯ ಅಭಿವೃದ್ಧಿಗೆ ₹26,000 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ.
- ಮೇಕೆದಾಟು ಯೋಜನೆ: ಕುಡಿಯುವ ನೀರಿನ ಉದ್ದೇಶದ ಈ ಯೋಜನೆಗೆ ಶೀಘ್ರವಾಗಿ ಕೇಂದ್ರದ ಅನುಮೋದನೆಗೆ ಒತ್ತಾಯ.
- ಭದ್ರಾ ಮೇಲ್ದಂಡೆ ಯೋಜನೆ: ಈ ಯೋಜನೆಗೆ ‘ರಾಷ್ಟ್ರೀಯ ಮಾನ್ಯತೆ’ ನೀಡಿ, ಘೋಷಿತ ₹5,300 ಕೋಟಿ ಸಹಾಯಧನ ಬಿಡುಗಡೆಗೆ ಮನವಿ.
- ಕೃಷ್ಣಾ ಮೇಲ್ದಂಡೆ ಯೋಜನೆ (UKP-III): ಕೃಷ್ಣಾ ನ್ಯಾಯಾಧಿಕರಣ-2ರ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಮತ್ತು ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಿ.
- ಮಹದಾಯಿ (ಕಳಸಾ ನಾಲಾ): ಕುಡಿಯುವ ನೀರಿನ ಯೋಜನೆಗೆ ವನ್ಯಜೀವಿ ವಿಭಾಗದಿಂದ ಶೀಘ್ರವಾಗಿ ಅನುಮತಿ ಕೊಡಲು ವಿನಂತಿ.
- ನದಿಗಳ ಜೋಡಣೆ: ಗೋದಾವರಿ-ಕಾವೇರಿ ಮತ್ತು ಬೇಡ್ತಿ-ವರದಾ ಯೋಜನೆಗಳಲ್ಲಿ ಕರ್ನಾಟಕಕ್ಕೆ 40-45 ಟಿಎಂಸಿ ನೀರು ಹಂಚಿಕೆಗೆ ಒತ್ತಾಯ.
- ಮೀಸಲಾತಿ ರಕ್ಷಣೆ: ರಾಜ್ಯದ 56% ಮೀಸಲಾತಿ ನೀತಿಯನ್ನು ಸಂವಿಧಾನದ 9 ನೇಯವರಿಗೆ ಸೇರಿಸಲು ಮನವಿ.
- ST ಪಟ್ಟಿಗೆ ಸೇರ್ಪಡೆ: ರಾಜ್ಯ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಕೋರಿಕೆ.
- ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಆರ್ಟಿಕಲ್ 371(ಜೆ) ಅಡಿಯಲ್ಲಿ ವಾರ್ಷಿಕ ₹5,000 ಕೋಟಿ ಅನುದಾನ ಮತ್ತು ಪ್ರತಿ ಜಿಲ್ಲೆಯಲ್ಲೂ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಸ್ಥಾಪನೆಗೆ ಮನವಿ.
- ಶರಾವತಿ ಪಂಪ್ಡ್ ಸ್ಟೋರೇಜ್: 2,000 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆ ಶೀಘ್ರ ಅನುಮತಿ ಕೋರಿಕೆ.
- ರಾಯಚೂರಿನಲ್ಲಿ ಏಮ್ಸ್ (AIIMS): ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸುಧಾರಣೆಗಾಗಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿಗೆ ಮನವಿ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ