Healthy rice ganji : ಬೇಸಿಗೆಯಲ್ಲಿ ಬೆಳಿಗ್ಗಿನ ಉಪಹಾರ ಹೊಟ್ಟೆಗೆ ತಂಪು ನೀಡ್ಬೇಕು, ಬಾಯಿಗೆ ರುಚಿ ನೀಡ್ಬೇಕು ಅಂದ್ರೆ ಗಂಜಿ ಟ್ರೈ ಮಾಡಿ. ಸರಿಯಾದ ವಿಧಾನದಲ್ಲಿ ಗಂಜಿ ತಯಾರಿಸಿದ್ರೆ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನೋದು ಗ್ಯಾರಂಟಿ.

ಬೇಸಿಗೆಯಲ್ಲಿ ಊಟ ಅಂದ್ರೆ ಮೂಗು ಮುರಿಯೋರೇ ಹೆಚ್ಚು. ಅತೀ ಮಸಾಲೆ, ಖಾರದ ಆಹಾರ ಸೇವನೆ ಮಾಡೋದು ಬೇಸಿಗೆಯಲ್ಲಿ ಕಷ್ಟ. ಹೊಟ್ಟೆ ತಂಪಾಗಿರಬೇಕು, ಆರೋಗ್ಯವಾಗಿರಬೇಕು ಅನ್ನೋರಿಗೆ ಅಕ್ಕಿ ಗಂಜಿ ಒಳ್ಳೆ ಆಯ್ಕೆ. ಆರೋಗ್ಯಕ್ಕೆ ಸೂಪರ್ ಫುಡ್ ಎಂದೇ ಇದನ್ನು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಈ ಅಕ್ಕಿ ಗಂಜಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಅಕ್ಕಿ ಗಂಜಿಗೆ ನೀವು ಪ್ರತ್ಯೇಕವಾಗಿ ಅನ್ನ ತಯಾರಿಸಬೇಕಾಗಿಲ್ಲ. ರಾತ್ರಿ ಉಳಿದ ಅನ್ನದಲ್ಲೇ ನೀವು ಗಂಜಿ ಮಾಡ್ಬಹುದು.

ಅಕ್ಕಿ ಗಂಜಿ ಪ್ರೋಬಯಾಟಿಕ್ಗಳಲ್ಲಿ ಸಮೃದ್ಧವಾಗಿದೆ. ಅನ್ನದ ಜೊತೆ ಮೊಸರು, ಈರುಳ್ಳಿ ಮತ್ತು ಕಡಲೆಕಾಯಿ ಒಗ್ಗರಣೆ , ಅಕ್ಕಿ ಗಂಜಿ ರುಚಿಯನ್ನು ಹೆಚ್ಚಿಸುತ್ತದೆ. ಆರೋಗ್ಯವನ್ನು ವೃದ್ಧಿಸುತ್ತದೆ. ಕೊತ್ತಂಬರಿ ಸೊಪ್ಪು, ಎಣ್ಣೆ, ಸಾಸಿವೆ, ಜೀರಿಗೆ ಗಂಜಿಗೆ ಅಗತ್ಯವಿದೆ.

ಅಕ್ಕಿ ಗಂಜಿ ತಯಾರಿಸಲು ನೀವು ರಾತ್ರಿಯಿಂದಲೇ ತಯಾರಿ ನಡೆಸಬೇಕು. ನೀವು ಮರುದಿನ ಅಕ್ಕಿ ಗಂಜಿ ತಯಾರಿಸ್ತೀರಿ ಎಂದಾದ್ರೆ ರಾತ್ರಿ ಸ್ವಲ್ಪ ಜಾಸ್ತಿ ಅನ್ನ ತಯಾರಿಸಿ. ಒಂದು ಮಣ್ಣಿನ ಪಾತ್ರೆ ಅಥವಾ ಗಾಜಿನ ಪಾತ್ರೆಗೆ ಅನ್ನವನ್ನು ಹಾಕಿ, ಅನ್ನ ಮುಚ್ಚುವಷ್ಟು ನೀರನ್ನು ಹಾಕಿ ನೆನೆಹಾಕಿ. ರಾತ್ರಿಯಿಡೀ ನೀರಿನಲ್ಲಿ ಅನ್ನವನ್ನು ನೆನೆಯಲು ಬಿಡಬೇಕು. ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾದ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಬೆಳಿಗ್ಗೆ ಅನ್ನದಲ್ಲಿರುವ ಹೆಚ್ಚುವರಿ ನೀರನ್ನು ನೀವು ಬಸಿಯಬಹುದು. ನೀರು ಅನ್ನದಲ್ಲಿದ್ದರೂ ಸಮಸ್ಯೆಯಿಲ್ಲ. ಈ ಅನ್ನಕ್ಕೆ ನೀವು ಗಟ್ಟಿಯಾದ ಮೊಸರನ್ನು ಹಾಕಬೇಕು. ಮೊಸರು ಮತ್ತು ನೆನೆದ ಅನ್ನದ ಮಿಶ್ರಣ ಉತ್ತಮ ನೈಸರ್ಗಿಕ ಪ್ರೋಬಯಾಟಿಕ್ ಆಹಾರವಾಗಿದೆ. ಅನ್ನ ಹಾಗೂ ಮೊಸರು ಸರಿಯಾಗಿ ಮಿಕ್ಸ್ ಆಗುವವರೆಗೆ ಕೈ ಅಥವಾ ಚಮಚದಿಂದ ಸ್ವಲ್ಪ ಅನ್ನವನ್ನು ಹಿಸುಕಬೇಕು. ಈ ಮಿಶ್ರಣವು ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅನ್ನ ಹಾಗೂ ಮೊಸರು ಬೆರೆಸಿದ ಈ ಗಂಜಿಗೆ ಒಗ್ಗರಣೆ ಹಾಕ್ಬೇಕು. ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ಈರುಳ್ಳಿ ರುಚಿ ಹೆಚ್ಚಿಸುವ ಜೊತೆಗೆ ಶಾಖದಿಂದ ನಿಮ್ಮ ದೇಹವನ್ನು ರಕ್ಷಿಸುತ್ತದೆ. ಹಸಿರು ಮೆಣಸಿನಕಾಯಿ ಗಂಜಿಯ ರುಚಿ ಡಬಲ್ ಮಾಡುತ್ತೆ. ನೀವು ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು. ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಸಣ್ಣ ಪ್ಯಾನ್ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಜೀರಿಗೆ ಮತ್ತು ಸಾಸಿವೆಯನ್ನು ಎಣ್ಣೆಗೆ ಹಾಕಿ. ಸಾಸಿವೆ ಸಿಡಿಯಲು ಪ್ರಾರಂಭಿಸಿದಾಗ, ಒಂದು ಹಿಡಿ ಹಸಿ ಕಡಲೆಕಾಯಿಯನ್ನು ಸೇರಿಸಿ ಗರಿಗರಿಯಾಗುವವರೆಗೆ ಹುರಿಯಿರಿ. ಇದನ್ನು ಗಂಜಿಗೆ ಹಾಕಿ ಮಿಕ್ಸ್ ಮಾಡಿ.

ನೀವು ಬೆಳಗಿನ ಉಪಹಾರಕ್ಕೆ ಗಂಜಿ ತಿಂದ್ರೆ ಬೆಸ್ಟ್. ಮಣ್ಣಿನ ಪಾತ್ರೆಯಲ್ಲಿ ಇದನ್ನು ಸರ್ವ್ ಮಾಡಬೇಕು. ಗಂಜಿಯನ್ನು ತಣ್ಣಗಿರುವಾಗ ಸೇವನೆ ಮಾಡಿ. ಉಪ್ಪಿನಕಾಯಿ ಜೊತೆ ಗಂಜಿ ಸೇವನೆ ಮಾಡ್ಬಹುದು. ಇದು ನಿಮ್ಮ ಹೊಟ್ಟೆ ತುಂಬಿಸೋದಲ್ದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Source link
ಅಯ್ಯೋ ಗಂಜಿ ಅನ್ನಬೇಡಿ, ಅಚ್ಚುಕಟ್ಟಾಗಿ ಕಿಚಡಿ ಮಾಡ್ಕೊಂಡು ಸವಿಯಿರಿ