
ಕೇಂದ್ರ ಸರ್ಕಾರವು 2011ರ ಜನಗಣತಿ ಆಧರಿಸಿ ಲೋಕಸಭಾ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಯೋಜಿಸುತ್ತಿದೆ. ಇದರಿಂದ ಉತ್ತರ ಭಾರತದ ಸ್ಥಾನಗಳು ಹೆಚ್ಚಾಗಿ, ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಸಿಯಲಿದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಆತಂಕ ವ್ಯಕ್ತವಾಗಿದೆ.
ಕೇಂದ್ರ ಬಿಜೆಪಿ ಸರ್ಕಾರವು ಪದೇ ಪದೆ ದಕ್ಷಿಣ ಭಾರತದ ರಾಜ್ಯಗಳನ್ನು ಗುರಿಯಾಗಿಸಿಕೊಂಡು ದ್ವೇಷ ಸಾಧನೆಯ ನಿರ್ಧಾರಗಳನ್ನು ಮಾಡುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಈಗ ತರಾತುರಿಯಲ್ಲಿ 2011ರ ಜನಗಣತಿಯ ಅಂಕಿ-ಅಂಶ ಆಧರಿಸಿ ಮಾಡಲು ಹೊರಟಿರುವ ಕ್ಷೇತ್ರ ಪುನರ್‌ವಿಂಗಡಣೆ.
ದಕ್ಷಿಣ ಭಾರತದ ಜನತೆಗೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳು ಮನವರಿಕೆ ಆಗಿವೆ. ಹೀಗಾಗಿ ದಕ್ಷಿಣ ಭಾರತದ ಜನ ತಿರುಗಿಬಿದ್ದಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ಅಸಾಧ್ಯ ಎಂಬಂತಹ ಸ್ಥಿತಿ ಎದುರಾಗಿದೆ.
ಹೀಗಾಗಿ, ತರಾತುರಿಯಲ್ಲಿ ಉತ್ತರ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಹೆಚ್ಚಳ ಮಾಡಿಕೊಂಡು ದಕ್ಷಿಣ ಭಾರತದ ಪ್ರಾತಿನಿಧ್ಯ ಕುಸಿಯುವಂತೆ ಮಾಡಲು ದೊಡ್ಡ ಷಡ್ಯಂತ್ರ ಮಾಡಲಾಗಿದೆ. ಪರಿಣಾಮ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಏಕಾಏಕಿ 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್‌ವಿಂಗಡಣೆಗೆ ಹೊರಟಿದೆ.
ಈ ಕ್ಷೇತ್ರ ವಿಂಗಡಣೆ ಕೇವಲ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಕಡಿಮೆ ಮಾಡಲ್ಲ. ಬದಲಿಗೆ ರಾಜ್ಯಕ್ಕೆ ಬರುತ್ತಿದ್ದ ತೆರಿಗೆ ಪಾಲು, ಅನುದಾನವನ್ನು ಮೊಟಕುಗೊಳಿಸಲಿದೆ. ರಾಜ್ಯದ ಅಭಿವೃದ್ದಿಗೆ ಬ್ರೇಕ್ ಹಾಕಲಿದೆ.
2011ರ ಜನಗಣತಿ ಅಂಕಿ-ಅಂಶ ಬಳಕೆ ಯಾಕೆ?
ಭಾರತದಲ್ಲಿ ಕೊನೆಯ ಬಾರಿಗೆ ಕ್ಷೇತ್ರ ಪುನರ್ ವಿಂಗಡಣೆ 2002ರಲ್ಲಿ ನಡೆದಿತ್ತು. ಬಳಿಕ 2026ರವರೆಗೆ ಕ್ಷೇತ್ರ ಪುನರ್‌ವಿಂಗಡಣೆ ಮಾಡದಿರಲು ತೀರ್ಮಾನಿಸಲಾಗಿತ್ತು. 2026 ನಂತರ ಮತ್ತೆ ಈ ಪ್ರಕ್ರಿಯೆ ಆರಂಭಿಸಲು ಅವಕಾಶವಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ನೆಪವೊಡ್ಡಿ ಮಾಡಲಿಲ್ಲ. ಈಗ ದೇಶಾದ್ಯಂತ 2026ರ ಜನಗಣತಿ ಶುರುವಾಗಿದೆ. ತಂತ್ರಜ್ಞಾನ ಮುಂದುವರೆದಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಜನಗಣತಿ ಮುಗಿಸಿ ಅಂಕಿ-ಅಂಶ ಕ್ರೋಡೀಕರಿಸಬಹುದು. ಆ ನೂತನ ಜನಗಣತಿ ಅಂಕಿ-ಅಂಶ ಆಧಾರದ ಮೇಲೆಯೇ ಕ್ಷೇತ್ರ ಪುನರ್‌ವಿಂಗಡಣೆ ಮಾಡಬಹುದಿತ್ತು. ಆದರೂ 15 ವರ್ಷಗಳಷ್ಟು ಹಳೆಯ ಅಂಕಿ-ಅಂಶದ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆಗೆ ಹೊರಟಿರುವುದೇ ದೊಡ್ಡ ಮಟ್ಟದ ಅನುಮಾನಕ್ಕೆ ಕಾರಣ.
ವಲಸೆಯ ಭಾರ ದಕ್ಷಿಣಕ್ಕೆ, ತೆರಿಗೆ ಲಾಭ ಉತ್ತರಕ್ಕೆ
2011ರ ಜನಗಣತಿಯಲ್ಲಿ ಉತ್ತರ ಭಾರತದ ಜನಸಂಖ್ಯೆ ಅತಿ ಹೆಚ್ಚು ಇತ್ತು. ಕೇವಲ ಉತ್ತರ ಪ್ರದೇಶವೊಂದರಲ್ಲೇ 19.96 ಕೋಟಿ ಜನಸಂಖ್ಯೆ ಇದ್ದರೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಸೇರಿ ದಕ್ಷಿಣ ಭಾರತದಲ್ಲಿ 25.12 ಕೋಟಿ ಜನಸಂಖ್ಯೆ ಮಾತ್ರ ಇತ್ತು. ಕಳೆದ 15 ವರ್ಷಗಳಿಂದ ಈಚೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಉದ್ಯೋಗ, ಜೀವನ ಕಟ್ಟಿಕೊಳ್ಳಲು ಇರುವ ಅವಕಾಶಗಳಿಂದಾಗಿ ಉತ್ತರದಿಂದ ದಕ್ಷಿಣಕ್ಕೆ ಕೋಟ್ಯಂತರ ಜನ ವಲಸೆ ಬಂದಿದ್ದಾರೆ. ಹೀಗಾಗಿ ವಲಸಿಗರಿಂದಾಗಿ ದಕ್ಷಿಣ ರಾಜ್ಯಗಳ ಜನಸಂಖ್ಯೆಯೂ ಹೆಚ್ಚಿದೆ. ಮುಖ್ಯವಾಗಿ ಈ ಭಾಗದಲ್ಲಿನ ನಗರೀಕರಣ ಹೆಚ್ಚಾಗಲು ವಲಸಿಗರ ಹೊರೆಯೂ ಕಾರಣ.
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಅವರೆಲ್ಲರೂ ಗ್ರಾಮೀಣ ಭಾಗ ಹಾಗೂ ಉತ್ತರ ಭಾರತದಿಂದ ವಲಸೆ ಬಂದವರಾಗಿದ್ದಾರೆ. ಬೆಂಗಳೂರು, ಮುಂಬೈ, ಚೆನ್ನೈ, ಹೈದರಬಾದ್‌ಗಳಲ್ಲಿ ಉತ್ತರ ಭಾರತದವರು ತುಂಬಿದ್ದಾರೆ. ಹೀಗಿರುವಾಗ 2026ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದರೆ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಜನಸಂಖ್ಯೆ ಇದೆ ಎಂಬುದು ವಾಸ್ತವವಾಗಿ ತಿಳಿದುಬರಲಿದೆ.
ಜನಸಂಖ್ಯೆ ಒಂದೇ ಆಧಾರ ಆಗಬಾರದು:
ಈ ಬಾರಿಯೂ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳನ್ನು ಹಂಚಿದರೆ, ಉತ್ತರ ಭಾರತದ ಜನಸಂಖ್ಯೆ ಹೆಚ್ಚು ಇರುವ ರಾಜ್ಯಗಳಿಗೆ ಹೆಚ್ಚು ಸ್ಥಾನಗಳು ಸಿಗಲಿವೆ. ಉತ್ತರ ಪ್ರದೇಶ ಒಂದರಲ್ಲೇ 120ಕ್ಕೂ ಹೆಚ್ಚು ಕ್ಷೇತ್ರಗಳು ಸೃಷ್ಟಿಯಾಗಲಿವೆ. ಹೀಗಾದರೆ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ಅಳವಡಿಸಿಕೊಂಡು, ಜನಸಂಖ್ಯೆ ನಿಯಂತ್ರಣ ಮಾಡಿ ಎಲ್ಲಾ ಕ್ರಮಗಳನ್ನು ಪಾಲಿಸಿದರೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಕೇವಲ ಜನಸಂಖ್ಯೆ ಮಾತ್ರವಲ್ಲದೆ ದೇಶಕ್ಕೆ ನೀಡಿರುವ ಕೊಡುಗೆ, ಆದಾಯ, ಸ್ವಾವಲಂಬನೆ, ಮಾನವ ಅಭಿವೃದ್ಧಿ ಸೂಚ್ಯಂಕ ಎಲ್ಲವನ್ನೂ ಪರಿಗಣಿಸಬೇಕು. ಈ ಬಗ್ಗೆ ರಾಜ್ಯಗಳ ಅಭಿಪ್ರಾಯವನ್ನು ಮೊದಲು ಆಲಿಸಬೇಕು.
ರಾಜ್ಯಕ್ಕೆ ತೀವ್ರ ಅನ್ಯಾಯ ಆಗಲಿದೆ:
ಪ್ರಸ್ತುತ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಪುನರ್ ವಿಂಗಡಣೆ ನಂತರ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗಬಹುದು. ಆದರೆ, ಉತ್ತರ ಭಾರತದ ಕ್ಷೇತ್ರಗಳ ಸಂಖ್ಯೆ ಗಂಭೀರ ಪ್ರಮಾಣದಲ್ಲಿ ಹೆಚ್ಚಾಗಲಿದೆ. ತನ್ಮೂಲಕ ಕರ್ನಾಟಕ ರಾಜಕೀಯ ಪ್ರಾತಿನಿಧ್ಯತೆ ಕುಸಿಯಲಿದೆ. ಇದು ರಾಜ್ಯದ ಧ್ವನಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ದುರ್ಬಲಗೊಳಿಸಲಿದೆ.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ:
ಶೇ.33ರಷ್ಟು ಮಹಿಳಾ ಮೀಸಲಾತಿ ಪ್ರಸ್ತಾವನೆಯನ್ನು 20 ವರ್ಷದ ಹಿಂದೆಯೇ ಸೋನಿಯಾಗಾಂಧಿ ಅವರೇ ತಂದಿದ್ದರು. ಅದನ್ನು ಅನುಷ್ಠಾನಗೊಳಿಸಬೇಕೆಂಬುದು ನಮ್ಮ ಗುರಿ. ಆದರೆ, ಮಹಿಳಾ ಮೀಸಲಾತಿ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಹೊರಟಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲಿದೆ.
75 ವರ್ಷದಿಂದ ಪ್ರಾದೇಶಿಕ ಅಸಮಾನತೆ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ಹಣ ಉತ್ತರ ಭಾರತಕ್ಕೆ ಹಂಚಲಾಗಿದೆ. ಈಗ ಈ ಪ್ರಮಾಣ ಹೆಚ್ಚು ಮಾಡಲು ಹೊರಟಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಮಾಡುವ ದ್ರೋಹ.
ರಾಜ್ಯಕ್ಕೆ ಹಲವು ರೀತಿಯಲ್ಲಿ ಅನ್ಯಾಯ
ಕ್ಷೇತ್ರ ಪುನರ್ ವಿಂಗಡಣೆಯಿಂದ ರಾಜ್ಯದ ಲೋಕಸಭೆ ಪ್ರಾತಿನಿಧ್ಯತೆ ಕುಸಿಯಲಿದೆ. ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಿಗೆ ಹೆಚ್ಚು ನಿಧಿ, ಹೆಚ್ಚು ಆದ್ಯತೆ ಸಿಗಲಿದ್ದು ಕರ್ನಾಟಕ ಕಡೆಗಣಿಸಲ್ಪಡಬಹುದು. ಆ ಮೂಲಕ ಜನಸಂಖ್ಯೆ ನಿಯಂತ್ರಣ, ಆರ್ಥಿಕ ಪ್ರಗತಿ, ಶೈಕ್ಷಣಿಕ ಪ್ರಗತಿ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ ರಾಜ್ಯಕ್ಕೆ ಶಿಕ್ಷೆ ಆಗಲಿದೆ. ಹಣಕಾಸು ಹಂಚಿಕೆಯಲ್ಲಿ ಅಸಮಾನತೆ, ಕೇಂದ್ರ ಸರ್ಕಾರದಿಂದ ಬರುವ ಅನುದಾನ, ಯೋಜನೆಗಳು ಜನಸಂಖ್ಯೆ ಆಧಾರಿತವಾಗಿ ಹಂಚಿಕೆಯಾಗುವ ಮೂಲಕ ರಾಜ್ಯಕ್ಕೆ ಅನ್ಯಾಯವಾಗಲಿದೆ. ರಾಜಕೀಯ ಶಕ್ತಿ ಕುಗ್ಗಿ ಕೇಂದ್ರ ಸರ್ಕಾರದ ಬಳಿ ಕನ್ನಡಿಗರ ಕೂಗಿಗೆ ತೂಕ ಇಲ್ಲದಂತಾಗಲಿದೆ. ರಾಷ್ಟ್ರೀಯ ಮಟ್ಟದ ನೀತಿಗಳ ಮೇಲೆ ಪ್ರಭಾವ ಇಲ್ಲದಂತಾಗಲಿದೆ. ಪ್ರಾದೇಶಿಕ ಅನ್ಯಾಯದಿಂದಾಗಿ ದಕ್ಷಿಣ ವರ್ಸಸ್ ಎಂಬ ಚರ್ಚೆಗೆ ಬಂದು ರಾಷ್ಟ್ರೀಯ ಏಕತೆಗೆ ಸವಾಲು ಉಂಟಾಗಬಹುದು. ಇದು ಪರೋಕ್ಷವಾಗಿ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗಬಹುದು.
ಅನ್ಯಾಯದ ವಿರುದ್ಧ ಜನತೆ ಧ್ವನಿ ಎತ್ತಬೇಕು:
ದಕ್ಷಿಣ ರಾಜ್ಯಗಳಿಗೆ ವಿಶೇಷವಾಗಿ ಕರ್ನಾಟಕಕ್ಕೆ ಅನ್ಯಾಯ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ನೀತಿ ಆಯೋಗ ಸೇರಿ ಪ್ರತಿಯೊಂದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಈಗಾಗಲೇ ನೋಡಿದ್ದೇವೆ. ಅಂಥ ಸರ್ವಾಧಿಕಾರಿ ಸರ್ಕಾರವನ್ನು ರಾಜ್ಯ ಸರ್ಕಾರವೊಂದೇ ಎದುರಿಸಲು ಸಾಧ್ಯವಿಲ್ಲ. ರಾಜ್ಯಾದ್ಯಂತ ಜನ ಗಟ್ಟಿಯಾಗಿ ಧ್ವನಿ ಎತ್ತಬೇಕು. ನಮ್ಮ ಅನುದಾನ ಕಡಿಮೆ ಮಾಡಿ, ನಮ್ಮ ಯೋಜನೆಗಳನ್ನು ಮೊಟಕುಗೊಳಿಸಿ ಉತ್ತರ ಭಾರತಕ್ಕೆ ಹಂಚಲು ಹೊರಟಿದ್ದಾರೆ. ಕೇಂದ್ರದ ಯಾವುದೇ ಕಾರ್ಯಕ್ರಮವಾಗಲಿ ಮೊದಲು ಗುಜರಾತ್, ನಂತರ ಉತ್ತರಪ್ರದೇಶ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಜನ ಒಟ್ಟಾಗಿ ಧ್ವನಿ ಎತ್ತಬೇಕಿದೆ.
ಶೇ.50 ರಷ್ಟು ಕ್ಷೇತ್ರವಲ್ಲ ಶೇ.50 ರಷ್ಟು ಅನುದಾನ ನೀಡಲಿ:
ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರ 4.5 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸುತ್ತಿದೆ. ಆದರೆ ನಮಗೆ ನೀಡುತ್ತಿರುವುದು ಕೇವಲ 50,000 ಕೋಟಿ ರು. ಮಾತ್ರ. ಇದೀಗ ಕ್ಷೇತ್ರ ಪುನರ್‌ವಿಂಗಡಣೆ ಹೆಸರಲ್ಲಿ ಮತ್ತಷ್ಟು ಆದಾಯ ಕೊರತೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ನಮ್ಮ ಕ್ಷೇತ್ರಗಳ ಸಂಖ್ಯೆ ಶೇ.50 ಹೆಚ್ಚಳ ಮಾಡುವ ಭರವಸೆ ನೀಡುವ ಕೇಂದ್ರ ಸರ್ಕಾರ ನಮ್ಮ ತೆರಿಗೆ ಆದಾಯದ ಶೇ.50 ರಷ್ಟು ನಮ್ಮ ರಾಜ್ಯಕ್ಕೆ ನೀಡುತ್ತೇವೆ ಎಂದು ಹೇಳಲಿ. ಆಗ ನಮಗೆ ಆಗುವ ಅನ್ಯಾಯ ತಪ್ಪಿಸಬಹುದು. ಇಲ್ಲದಿದ್ದರೆ ಖಂಡಿತ ಕರ್ನಾಟಕಕ್ಕೆ ದೊಡ್ಡ ಮಟ್ಟದ ಅನ್ಯಾಯ ಆಗಲಿದೆ. ಇದಕ್ಕೆ ಈಗ ಬಾಯ್ಮುಚ್ಚಿಕೊಂಡಿರುವ ಎಲ್ಲಾ ಬಿಜೆಪಿ ಸಂಸದರು ಕಾರಣ ಆಗಲಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ರಾಜ್ಯದ ಹಿತ ಬಲಿಕೊಡುವಂತೆ ನಡೆದುಕೊಳ್ಳುವುದು ನಾಚಿಕೆಗೇಡು.
ಸಮಸ್ಯೆಗಳನ್ನು ಕತ್ತಲಲ್ಲಿಡಲು ಯತ್ನ:
ದೇಶದಲ್ಲಿ ಸಾವಿರಾರು ಸಮಸ್ಯೆಗಳಿವೆ. ಬೆಲೆ ಏರಿಕೆ ಹೆಚ್ಚಳ ಆಗುತ್ತಿದೆ. ಯುದ್ಧದ ಪರಿಣಾಮವಾಗಿ ಸದ್ಯದಲ್ಲೇ ವಿವಿಧ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಲಿದೆ. ಈ ವಿಚಾರದಲ್ಲಿ ಏನು ಸಮಸ್ಯೆ ಬರಲಿವೆ? ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸುತ್ತಿಲ್ಲ. ಈ ವಿಚಾರದಲ್ಲಿ ಜನರನ್ನು ಕತ್ತಲಲ್ಲಿಟ್ಟಿದ್ದಾರೆ. ಇಂತಹ ವಿಚಾರಗಳನ್ನು ಮರೆಮಾಚಲು ಏಕಾಏಕಿ ಕ್ಷೇತ್ರ ಪುನರ್ ವಿಂಗಡಣೆ ತಂದಿದ್ದಾರೆ. ಹೀಗಾಗಿ ಮೋದಿ ಅವರು ಹೇಳಿದ್ದೆಲ್ಲ ಸತ್ಯ ಎಂಬ ಕಾಲಕ್ಕೆ ಬಂದರೆ ಕಷ್ಟವಾಗುತ್ತದೆ. ಭಾವನಾತ್ಮಕ ವಿಷಯ, ಧರ್ಮದ ವಿಷಯ ಬಿಟ್ಟು ರಾಜ್ಯಕ್ಕೆ ಆಗುವ ಅನ್ಯಾಯದ ವಿರುದ್ಧ ಜನ ಧ್ವನಿ ಎತ್ತಬೇಕು.