ಬಾಂಗ್ಲಾದೇಶ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ಭರ್ಜರಿ ಜಯ ಸಾಧಿಸಿದೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಮೊದಲ ಇನಿಂಗ್ಸ್ನಲ್ಲಿ ಬಾಂಗ್ಲಾ 241 ರನ್ಗಳಿಸಿ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಶ್ರೀಲಂಕಾ ಪರ ಆರಂಭಿಕ ದಾಂಡಿಗ ಪಾತುಮ್ ನಿಸ್ಸಂಕಾ 158 ರನ್ಗಳ ಭರ್ಜರಿ ಇನಿಂಗ್ಸ್ ಆಡಿದರು.
ಆ ಬಳಿಕ ಬಂದ ದಿನೇಶ್ ಚಂಡಿಮಲ್ 93 ರನ್ಗಳಿಸಿದರೆ, ಕುಸಾಲ್ ಮೆಂಡಿಸ್ 84 ರನ್ ಬಾರಿಸಿದರು. ಈ ಮೂಲಕ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 458 ರನ್ ಕಲೆಹಾಕಿತು.
300 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು ಪ್ರಭಾತ್ ಜಯಸೂರ್ಯರ ಸ್ಪಿನ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದ ಬಾಂಗ್ಲಾ ಬ್ಯಾಟರ್ಗಳು ಅಂತಿಮವಾಗಿ 133 ರನ್ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡವು ಇನಿಂಗ್ಸ್ ಹಾಗೂ 78 ರನ್ಗಳ ಭರ್ಜರಿ ಜಯ ಸಾಧಿಸಿದೆ. ಶ್ರೀಲಂಕಾ ಪರ ಪ್ರಭಾತ್ ಜಯಸೂರ್ಯ 18 ಓವರ್ಗಳಲ್ಲಿ 58 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಶ್ರೀಲಂಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ 4ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಲಹಿರು ಉದಾರ , ದಿನೇಶ್ ಚಂಡಿಮಲ್ , ಕಮಿಂದು ಮೆಂಡಿಸ್ , ಧನಂಜಯ ಡಿ ಸಿಲ್ವಾ (ನಾಯಕ) , ಕುಸಾಲ್ ಮೆಂಡಿಸ್ ( ವಿಕೆಟ್ ಕೀಪರ್ ) , ಸೋನಾಲ್ ದಿನುಶಾ , ತಾರಿಂದು ರತ್ನಾಯಕೆ , ವಿಶ್ವ ಫೆರ್ನಾಂಡೋ , ಪ್ರಭಾತ್ ಜಯಸೂರ್ಯ , ಅಸಿತ ಫರ್ನಾಂಡೋ.
ಇದನ್ನೂ ಓದಿ: 6,6,6,6,6,6,6,6: ಪೂರನ್ ಪವರ್ಫುಲ್ ಶತಕ
ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮನ್ ಇಸ್ಲಾಂ , ಅನಾಮುಲ್ ಹಕ್ , ಮೊಮಿನುಲ್ ಹಕ್ , ನಜ್ಮುಲ್ ಹೊಸೈನ್ ಶಾಂತೊ (ನಾಯಕ) , ಮುಶ್ಫಿಕರ್ ರಹೀಮ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಮೆಹಿದಿ ಹಸನ್ ಮಿರಾಜ್ , ನಯೀಮ್ ಹಸನ್ , ತೈಜುಲ್ ಇಸ್ಲಾಂ , ಎಬಾಡೋತ್ ಹೊಸೈನ್ , ನಹಿದ್ ರಾಣಾ.