ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು, ಡಿಸೆಂಬರ್ 13: ಡಿನ್ನರ್, ಬ್ರೇಕ್ ಫಾಸ್ಟ್ ಬಳಿಕ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ದೆಹಲಿಯತ್ತ ಮುಖಮಾಡಿದ್ದಾರೆ. ಡಿಕೆ ಶಿವಕುಮಾರ್ ದೆಹಲಿಗೆ ಹಾರಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಇನ್ನು ನಾಳೆ ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ನೆಪದಲ್ಲಿ ಇಬ್ಬರು ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
ನಾಳೆ ಕಾಂಗ್ರೆಸ್ ಪ್ರತಿಭಟನೆ: ಸಿಎಂ, ಡಿಸಿಎಂ ಭಾಗಿ
ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ ಅಂತಾ ಕಾಂಗ್ರೆಸ್ ಸಮರ ಸಾರಿದೆ. ಇದೀಗ ಎರಡನೇ ಹಂತದ ವೋಟ್ ಚೋರಿ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಂಡಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಅಭಿಯಾನ. ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಜ 6ರಂದು ಡಿಕೆಶಿ ಸಿಎಂ ಶಿವಕುಮಾರ್ ಆಗ್ತಾರೆ: ಸ್ಫೋಟಕ ಹೇಳಿಕೆ ನೀಡಿದ ಶಾಸಕ ಇಕ್ಬಾಲ್ ಹುಸೇನ್
ಇದೇ ವೇಳೆ ಮಂಡ್ಯ ನಾಯಕರ ಟೀಂ ದಿಲ್ಲಿ ಯಾತ್ರೆ ಕೈಗೊಂಡಿದೆ. ಚಲುವರಾಯಸ್ವಾಮಿ ನೇತೃತ್ವದಲ್ಲಿ ದೆಹಲಿಗೆ ತೆರಳುವ ಪ್ಲ್ಯಾನ್ ಇತ್ತು. ಆದರೆ ಅನಾರೋಗ್ಯದ ಕಾರಣ ಚಲುವರಾಯಸ್ವಾಮಿ ದೆಹಲಿಗೆ ಹೋಗುತ್ತಿಲ್ಲ. ಉಳಿದಂತೆ ಶಾಸಕರುಗಳಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ದೆಹಲಿಗೆ ತೆರಳಿದ್ದಾರೆ.
ಮಂಡ್ಯ ಶಾಸಕ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನನ್ನ ಜೊತೆ ಯಾರೂ ದೆಹಲಿಗೆ ಬರುತ್ತಿಲ್ಲ. ಅವರವರ ಕ್ಷೇತ್ರದವರ ಜೊತೆ ಹೋಗ್ತಿದ್ದಾರೆ ಎಂದು ಹೇಳಿದ್ದಾರೆ. ವೋಟ್ ಚೋರಿ ಬಗ್ಗೆ ಕಿಡಿಕಾರಿದ ಎಂಎಲ್ ಸಿ ಸಲೀಂ ಅಹ್ಮದ್, ಇದು ವೋಟ್ ಚೋರಿ ಅಲ್ಲ, ಬಿಜೆಪಿ ಹಾಗೂ ಎಲೆಕ್ಷನ್ ಕಮಿಷನ್ ನಿಂದ ಡಕಾಯಿತಿ ಅಂದಿದ್ದಾರೆ.
ನಾವು ಯಾವುದೇ ವೋಟ್ ಚೋರಿ ಮಾಡಿಲ್ಲ ಎಂದ ಗುತ್ತೇದಾರ್
ವೋಟ್ ಚೋರಿದ ಆರೋಪದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ನಾವು ಯಾವುದೇ ವೋಟ್ ಚೋರಿ ಮಾಡಿಲ್ಲ ಅಂದಿದ್ದಾರೆ. ಇನ್ನು ಈ ಬಗ್ಗೆ ಸುಭಾಶ್ ಗುತ್ತೇದಾರ್ ಪುತ್ರ ಹರ್ಷಾನಂದ್ ಗುತ್ತೆದಾರ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಬಳಸುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಕುರ್ಚಿ ಕದನ: ಶಾಸಕ ಇಕ್ಬಾಲ್ ಹುಸೇನ್ ಮಾತನ್ನು ಯಾರು ನಂಬಬೇಡಿ; ಡಿಕೆ ಶಿವಕುಮಾರ್
ಒಟ್ಟಿನಲ್ಲಿ ವೋಟ್ ಚೋರಿ ನೆಪದಲ್ಲಿ ಸಿಎಂ ಹಾಗೂ ಡಿಸಿಎಂ ದೆಹಲಿಯತ್ತ ಮುಖ ಮಾಡಿದ್ದಾರೆ. ಅಲ್ಲಿ ಇಬ್ಬರನ್ನೂ ಕೂರಿಸಿ ಹೈಕಮಾಂಡ್ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ.
ವರದಿ: ಬ್ಯೂರೋ ರಿಪೋರ್ಟ್, ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.