
ಬೇಸಿಗೆ ರಜೆಯ ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು (07323/07324) ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ಮೂಲಕ ಒಂದು ಟ್ರಿಪ್ ಮಾತ್ರ ಸಂಚರಿಸಲಿದೆ. ಏಪ್ರಿಲ್ 15 ರಂದು ಹುಬ್ಬಳ್ಳಿಯಿಂದ ಮತ್ತು ಏಪ್ರಿಲ್ 19 ರಂದು ಅಲಿಪುರ್ ದ್ವಾರ್‌ನಿಂದ ಈ ರೈಲು ಹೊರಡಲಿದೆ.
ಹುಬ್ಬಳ್ಳಿ: ಬೇಸಿಗೆಯ ರಜಾ ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಿಲ್ದಾಣಗಳ ನಡುವೆ ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಕಾರ್ಯಾಚರಣೆ ಮಾಡಲಾಗುವುದು.
ವಿಶೇಷ ಎಕ್ಸ್ ಪ್ರೆಸ್ ರೈಲು ಪಟ್ಟಿ
ರೈಲು ಸಂಖ್ಯೆ 07323 ಹುಬ್ಬಳ್ಳಿ- ಅಲಿಪುರ್ ದ್ವಾರ್ ವಿಶೇಷ ಎಕ್ಸ್ ಪ್ರೆಸ್ ರೈಲು ಏ. 15ರಂದು ರಾತ್ರಿ 11.15ಕ್ಕೆ ಹುಬ್ಬಳ್ಳಿಯಿಂದ ಹೊರಟು ಶನಿವಾರ ಮಧ್ಯಾಹ್ನ 1:50ಕ್ಕೆ ಅಲಿಪುರ್ ದ್ವಾರ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 07324 ಅಲಿಪುರ್ ದ್ವಾರ್- ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಏ. 19ರ ಸಂಜೆ 4:25ಕ್ಕೆ ಅಲಿಪುರ್ ದ್ವಾರ್‌ನಿಂದ ಹೊರಟು, ಬುಧವಾರ ಬೆಳಗ್ಗೆ 9.45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.
ಯಾವೆಲ್ಲ ಮಾರ್ಗದಲ್ಲಿ ಸಂಚಾರ?
ಈ ರೈಲು ಎರಡೂ ಮಾರ್ಗಗಳಲ್ಲಿ ತನ್ನ ಪ್ರಯಾಣದ ಅವಧಿಯಲ್ಲಿ ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಯಲಹಂಕ, ಧರ್ಮಾವರಂ, ಡೋನ್, ನಂದ್ಯಾಲ, ಗುಂಟೂರು, ವಿಜಯವಾಡ, ರಾಜಮಂಡ್ರಿ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಾಕ್, ಖರಗ್ಪುರ, ಅಂದುಲ್, ದನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರಸೋಯಿ, ಕಿಶನ್ ಗಂಜ್, ನ್ಯೂ ಜಲ್ಪೈಗುರಿ, ಸಿಲಿಗುರಿ, ಬಿನ್ನಗುರಿ ಮತ್ತು ಹಸಿಮಾರಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ರೈಲು, ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಲಗೇಜ್ ಮತ್ತು ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.