ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌ | Lenskart Dress Code Controversy Bindi Tilak Hijab Guidelines Peyush Bansal San

ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌ | Lenskart Dress Code Controversy Bindi Tilak Hijab Guidelines Peyush Bansal San



ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌ | Lenskart Dress Code Controversy Bindi Tilak Hijab Guidelines Peyush Bansal San

ಲೆನ್ಸ್‌ಕಾರ್ಟ್ ತನ್ನ ಕಚೇರಿ ಡ್ರೆಸ್‌ಕೋಡ್‌ನಲ್ಲಿ ಬಿಂದಿ, ತಿಲಕದಂತಹ ಹಿಂದೂ ಸಂಪ್ರದಾಯದ ಕುರುಹುಗಳನ್ನು ನಿಷೇಧಿಸಿ, ಹಿಜಾಬ್‌ಗೆ ಅನುಮತಿ ನೀಡಿದೆ ಎಂಬ ಆರೋಪದಿಂದ ವಿವಾದಕ್ಕೆ ಸಿಲುಕಿದೆ. ಈ ಬಗ್ಗೆ ಸಿಇಒ ಪಿಯೂಷ್ ಬನ್ಸಾಲ್ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ (ಏ.16): ಪ್ರಮುಖ ಐವೇರ್ ಸ್ಟಾರ್ಟ್‌ಅಪ್ ಸಂಸ್ಥೆಯಾದ ಲೆನ್ಸ್‌ಕಾರ್ಟ್ ತನ್ನ ಕಚೇರಿ ಡ್ರೆಸ್‌ಕೋಡ್‌ ಮಾರ್ಗಸೂಚಿಯಲ್ಲಿ ‘ಹಿಂದೂ ಸಂಪ್ರದಾಯದ ಕುರುಹುಗಳಾದ ಬಿಂದಿ, ತಿಲಕ ಮತ್ತು ಕೈಗೆ ಕಟ್ಟುವ ದಾರಗಳನ್ನು ನಿಷೇಧಿಸಿ, ಹಿಜಾಬ್‌ಗೆ ಅನುಮತಿ ನೀಡಿದೆ’ ಎಂಬ ಆರೋಪದ ಮೇಲೆ ಭಾರಿ ಆಕ್ರೋಶ ಎದುರಿಸುತ್ತಿದೆ. ವಿವಾದ ತಾರಕಕ್ಕೇರುತ್ತಿದ್ದಂತೆ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಪಿಯೂಷ್ ಬನ್ಸಾಲ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ದಾಖಲೆಯು ಹಳೆಯದಾಗಿದ್ದು ಪ್ರಸ್ತುತ ಮಾರ್ಗಸೂಚಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದ್ದಾರೆ.

ವಿವಾದಕ್ಕೆ ಕಾರಣವಾದ ಅಂಶಗಳೇನು?

ಲೆನ್ಸ್‌ಕಾರ್ಟ್‌ನ ಆಂತರಿಕ ದಾಖಲೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಉದ್ಯೋಗಿಗಳಿಗೆ ಪ್ರಮುಖ ಸೂಚನೆ ನೀಡಲಾಗಿತ್ತು. ವಿವಾಹಿತ ಮಹಿಳೆಯರು ಧರಿಸುವ ಸಿಂಧೂರವು ಹಣೆಯ ಮೇಲೆ ಬೀಳದಂತೆ ಅತಿ ಕಡಿಮೆಯಿರಬೇಕು. ಬಿಂದಿ ಧರಿಸಲು ಅನುಮತಿಯಿಲ್ಲ. ಕೈಗೆ ಕಟ್ಟುವ ಧಾರ್ಮಿಕ ದಾರಗಳು ಅಥವಾ ರಿಸ್ಟ್‌ಬ್ಯಾಂಡ್‌ಗಳನ್ನು ತೆಗೆಯಬೇಕು. ಮುಸ್ಲಿಂ ಮಹಿಳೆಯರಿಗೆ ಕಪ್ಪು ಬಣ್ಣದ ಹಿಜಾಬ್ ಧರಿಸಲು ಅನುಮತಿಯಿದೆ (ಅದು ಕಂಪನಿಯ ಲೋಗೋವನ್ನು ಮುಚ್ಚಬಾರದು). ಆದರೆ ಸ್ಟೋರ್‌ನ ಒಳಗೆ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಹಣೆಯ ಮೇಲೆ ತಿಲಕ ಧರಿಸಲು ಅವಕಾಶವಿಲ್ಲ.

ಲೇಖಕಿ ಶಫಾಲಿ ವೈದ್ಯ ಸೇರಿದಂತೆ ಹಲವು ಗಣ್ಯರು, “ಹಿಜಾಬ್‌ಗೆ ಓಕೆ ಎನ್ನುವ ಲೆನ್ಸ್‌ಕಾರ್ಟ್ ಬಿಂದಿ ಮತ್ತು ಕೈಗೆ ಕಟ್ಟುವ ದಾರದ ವಿಚಾರದಲ್ಲಿ ಯಾಕೆ ಇಷ್ಟೊಂದು ಕಠಿಣವಾಗಿದೆ?” ಎಂದು ಪ್ರಶ್ನಿಸಿ ಪಿಯೂಷ್ ಬನ್ಸಾಲ್ ಅವರನ್ನು ಟ್ಯಾಗ್ ಮಾಡಿದ್ದರು.

ಪಿಯೂಷ್ ಬನ್ಸಾಲ್ ನೀಡಿದ ಸ್ಪಷ್ಟನೆ

ವಿವಾದದ ಬೆನ್ನಲ್ಲೇ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ ಪಿಯೂಷ್ ಬನ್ಸಾಲ್, “ಈ ದಾಖಲೆಯು ನಮ್ಮ ಪ್ರಸ್ತುತ ಮಾರ್ಗಸೂಚಿಯನ್ನು ಪ್ರತಿನಿಧಿಸುವುದಿಲ್ಲ. ನಮ್ಮ ಗ್ರೂಮಿಂಗ್ ಪಾಲಿಸಿಯು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಹಳೆಯ ಆವೃತ್ತಿಗಳು ನಾವು ಇಂದು ಏನಾಗಿದ್ದೇವೆ ಎಂಬುದನ್ನು ಬಿಂಬಿಸುವುದಿಲ್ಲ. ಇದರಿಂದ ಉಂಟಾದ ಗೊಂದಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ,” ಎಂದು ತಿಳಿಸಿದರು.

ಅಲ್ಲದೆ, “ಬಿಂದಿ ಮತ್ತು ತಿಲಕ ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಗಳ ಅಭಿವ್ಯಕ್ತಿಗೆ ಲೆನ್ಸ್‌ಕಾರ್ಟ್‌ನಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಭಾರತದಾದ್ಯಂತ ಇರುವ ನಮ್ಮ ಸಾವಿರಾರು ಉದ್ಯೋಗಿಗಳು ಪ್ರತಿದಿನ ತಮ್ಮ ಸಂಸ್ಕೃತಿ ಮತ್ತು ನಂಬಿಕೆಯನ್ನು ಹೆಮ್ಮೆಯಿಂದ ಧರಿಸುತ್ತಿದ್ದಾರೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಪ್ಪನ್ನು ಒಪ್ಪಿಕೊಂಡ ‘ಶಾರ್ಕ್ ಟ್ಯಾಂಕ್’ ಜಡ್ಜ್‌

ಸುಮಾರು 12 ಗಂಟೆಗಳ ನಂತರ ಮತ್ತೊಂದು ಸ್ಪಷ್ಟನೆ ನೀಡಿದ ಬನ್ಸಾಲ್, ಇದು ಕಂಪನಿಯ ಅಧಿಕೃತ ‘ಎಚ್‌ಆರ್ ಪಾಲಿಸಿ’ ಅಲ್ಲ, ಬದಲಾಗಿ ಹಳೆಯ ‘ಆಂತರಿಕ ತರಬೇತಿ ಟಿಪ್ಪಣಿ’ (Internal Training Note) ಎಂದು ಹೇಳಿದರು. “ಬಿಂದಿ/ತಿಲಕದ ಬಗ್ಗೆ ಅದರಲ್ಲಿ ಬರೆಯಲಾದ ಸಾಲು ತಪ್ಪಾಗಿತ್ತು. ಫೆಬ್ರವರಿ 17ರಂದೇ ಇದನ್ನು ಗಮನಿಸಿ ತಕ್ಷಣವೇ ತೆಗೆದುಹಾಕಲಾಗಿತ್ತು. ಆದರೆ ಸಂಸ್ಥಾಪಕನಾಗಿ ಈ ಲೋಪವನ್ನು ಮೊದಲೇ ಸರಿಪಡಿಸಬೇಕಿತ್ತು,” ಎಂದು ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ವಿವಾದದ ನಡುವೆಯೂ ಲೆನ್ಸ್‌ಕಾರ್ಟ್ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು 70 ಪಟ್ಟು ಹೆಚ್ಚಾಗಿದೆ. ಆದಾಯವು ಶೇ. 38.8ರಷ್ಟು ಏರಿಕೆಯಾಗಿ ₹23.08 ಬಿಲಿಯನ್ ತಲುಪಿದೆ. ಪ್ರಸ್ತುತ ಲೆನ್ಸ್‌ಕಾರ್ಟ್‌ನ ಮೌಲ್ಯವು ಸುಮಾರು $5.6 ಬಿಲಿಯನ್ (ಸುಮಾರು ₹46,000 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ.



Source link

Leave a Reply

Your email address will not be published. Required fields are marked *