
ಚಿಕ್ಕಮಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರ ಪ್ರತಿಮೆ ಅನಾವರಣ ಕಾರ್ಯಕ್ರ, ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ, ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.14): ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಈಗ ಒಂದೊಂದಾಗಿ ಹೊರಬರುತ್ತಿದೆ. ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಉಪ ಚುನಾವಣೆ ವೇಳೆ ಕಾರ್ಯಕರ್ತರ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ, ಈಗ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸ್ವಪಕ್ಷೀಯ ನಾಯಕರ ವಿರುದ್ಧವೇ ಅಸಮಾಧಾನದ ಕಿಚ್ಚು ಹತ್ತಿಕೊಂಡಿದೆ.
ಏನಿದು ಘಟನೆ?
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಹಂತೂರು ಗ್ರಾಮದಲ್ಲಿ ನಿನ್ನೆ (ಸೋಮವಾರ) ಒಂದು ವಿಶೇಷ ಕಾರ್ಯಕ್ರಮ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಿರ್ಮಾಣಗೊಂಡ ಸೇತುವೆ ಹಾಗೂ ಅವರದ್ದೇ ಆದ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಆದರೆ, ಈ ಸಂತಸದ ಕಾರ್ಯಕ್ರಮದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರಲ್ಲಿ ಅತೃಪ್ತಿ ಸ್ಫೋಟಗೊಂಡಿದೆ. ಈ ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಮತ್ತು ತಳಮಟ್ಟದ ನಾಯಕರನ್ನು ಕಡೆಗಣಿಸಲಾಗಿದೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಚಿವರಿಗೆ ಮತ್ತು ಹೈಕಮಾಂಡ್‌ಗೆ ಪತ್ರದ ಬಿಸಿ:
ಈ ಅಸಮಾಧಾನದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷರಾದ ಸಚಿನ್ ಮೀಗಾ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ಪಕ್ಷದ ಸಂಘಟನೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‘ಒಂದು ಸಂಘಟನೆಯ ಅಥವಾ ಪಕ್ಷದ ಶಕ್ತಿ ಇರುವುದೇ ಅದರ ತಳಮಟ್ಟದ ನಾಯಕರಲ್ಲಿ. ಜಿಲ್ಲಾ ಪಂಚಾಯಿತಿ ಸದಸ್ಯರು, ಎಪಿಎಂಸಿ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ನಿಜವಾದ ಬಲ. ಆದರೆ, ಇಂತಹ ಸರ್ಕಾರಿ ವೇದಿಕೆಗಳಲ್ಲಿ ಅವರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಮನ್ನಣೆ ನೀಡದಿದ್ದರೆ ಅವರ ಮನೋಬಲ ಕುಗ್ಗುತ್ತದೆ. ಕೇವಲ ವೇದಿಕೆ ಅಲಂಕರಿಸುವುದು ಮುಖ್ಯವಲ್ಲ, ಪಕ್ಷದ ಕಟ್ಟಾಳುಗಳನ್ನು ಗುರುತಿಸುವುದು ಮುಖ್ಯ’ ಎಂದು ಸಚಿನ್ ಮೀಗಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂಘಟನೆ ಮತ್ತು ಸರ್ಕಾರದ ನಡುವಿನ ಕೊಂಡಿ:
ಸರ್ಕಾರ ಮತ್ತು ಸಂಘಟನೆಯ ನಡುವಿನ ಬಾಂಧವ್ಯ ಬಲಗೊಳ್ಳಬೇಕಾದರೆ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ಸಿಗಬೇಕು. ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿರುವ ಇಂತಹ ನಾಯಕರನ್ನು ಕಡೆಗಣಿಸುವುದು ಪಕ್ಷಕ್ಕೆ ಮಾರಕವಾಗಬಹುದು ಎಂಬ ಎಚ್ಚರಿಕೆಯನ್ನೂ ಅವರು ಪತ್ರದ ಮೂಲಕ ನೀಡಿದ್ದಾರೆ.
ಪ್ರತಿಮೆಗೆ ಭದ್ರತೆಯ ಆತಂಕ:
ಪತ್ರದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ, ಹಂತೂರು ಗ್ರಾಮದ ಸೇತುವೆಯ ಮೇಲೆ ಸ್ಥಾಪಿಸಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕ ಆಸ್ತಿ ಮತ್ತು ಮಹಾನ್ ನಾಯಕರ ಪ್ರತಿಮೆಗಳ ರಕ್ಷಣೆ ಸರ್ಕಾರದ ಹೊಣೆಯಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಕೋರಿದ್ದಾರೆ.
ಒಟ್ಟಾರೆಯಾಗಿ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಗೆಯಾಡುತ್ತಿರುವ ಈ ಅಸಮಾಧಾನ ಈಗ ರಾಜ್ಯ ಮಟ್ಟದ ನಾಯಕರ ಗಮನಕ್ಕೆ ಹೋಗಿದೆ. ಈ ಭಿನ್ನಮತವನ್ನು ಸರಿಪಡಿಸಲು ಹೈಕಮಾಂಡ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.