
ಮುಂಬೈನ ಗೋರೆಗಾಂವ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಡ್ರಗ್ ಪೂರೈಕೆದಾರ ಮತ್ತು ಕಾರ್ಯಕ್ರಮದ ಆಯೋಜಕರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಡ್ರಗ್ ಓವರ್‌ಡೊಸ್ ಆಗಿ ಸಾವು
ಮುಂಬೈ: ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಡ್ರಗ್ ಓವರ್‌ಡೋಸ್ ಆಗಿ ಸಾವಿಗೀಡಾದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಏಪ್ರಿಲ್ 11ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನ ಗೋರೆಗಾಂವ್‌ನ ನೆಸ್ಕೊ ಕೇಂದ್ರದಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ 4000 ಜನ ಭಾಗವಹಿಸಿದ್ದರು. ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಪ್ರತಿಯೊಬ್ಬರಿಗೂ 2 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು.
2 ಸಾವಿರ ನೀಡಿ ಟಿಕೆಟ್ ಪಡೆದಿದ್ದ ವಿದ್ಯಾರ್ಥಿಗಳು:
ಇದರಲ್ಲಿ ಭಾಗವಹಿಸಿದ ಕೆಲವರು ಡ್ರಗ್ ಸೇವಿಸಿದ್ದರು. ಬ್ಯಾನ್ ಮಾಡಲಾಗಿರುವ ಎಂಡಿಎಂಎ ಡ್ರಗ್ ಅನ್ನು ಸೇವಿಸಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಮೂವರು ವಿದ್ಯಾರ್ಥಿಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇದಾಗಿ ಸ್ವಲ್ಪ ಹೊತ್ತಿನಲ್ಲಿ 24 ವರ್ಷದ ಒಬ್ಬಳು ಯುವತಿ ಹಾಗೂ 28 ವರ್ಷದ ಓರ್ವ ಯುವಕ ಸಾವನ್ನಪ್ಪಿದ್ದಾರೆ. 25 ವರ್ಷದ ಇನ್ನೊಬ್ಬ ಯುವತಿ ಸ್ಥಿತಿ ತುಂಬಾ ಗಂಭೀರವಾಗಿದೆ.
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಮೂವರಲ್ಲಿ ಓರ್ವ ವಿದ್ಯಾರ್ಥಿ ಈ ಸಂಗೀತ ಕಾರ್ಯಕ್ರಮಕ್ಕೆ ಹೋಗುವ ಮಾರ್ಗಮಧ್ಯೆಯೇ ಟಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗಲೇ ಈ ಮಾದಕ ದ್ರವ್ಯದ ಮಾತ್ರೆ ಸೇವಿಸಿದ್ದಾನೆ. ನಂತರ ಕಾರ್ಯಕ್ರಮ ಸ್ಥಳಕ್ಕೆ ತಲುಪಿದ ನಂತರ ಮತ್ತೊಂದು ಮಾತ್ರೆ ಸೇವಿಸಿದ್ದು, ಪರಿಣಾಮ ಆತನಿಗೆ ಓವರ್‌ಡೋಸ್ ಆಗಿದೆ. ಡ್ರಗ್ ಓವರ್‌ಡೋಸ್ ಆಗಿಯೇ ಈ ಸಾವು ಸಂಭವಿಸಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಈ ಮೂವರಿಗೆ ಡ್ರಗ್ ಮಾತ್ರೆಯನ್ನು ಪೂರೈಕೆ ಮಾಡಿದ ವ್ಯಕ್ತಿಯೂ ಕೂಡ ವಿದ್ಯಾರ್ಥಿಯೇ ಆಗಿದ್ದು, ಆತನನ್ನು ಬಂಧಿಸಲಾಗಿದೆ. ಆತನಿಂದ 6ರಿಂದ 7 ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಡ್ರಗ್ ಅನ್ನು ಮುಂಬೈನ ಹೊರಭಾಗದಿಂದ ತರಲಾಗಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ನನ್ನ ಸಾವಿನ ನಂತರ ನನಗೆ ಅಂತ್ಯಕ್ರಿಯೆ ನಡೆಸಲು ಯಾರೊಬ್ಬರೂ ಇಲ್ಲ: ಸಾವಿಗೂ ಮೊದಲೇ ತಿಥಿ ಊಟ ಹಾಕಿಸಿದ ಒಂಟಿ ಜೀವ
ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಕ ವಿಹಾನ್ ಅಲಿಯಾಸ್ ಆಕಾಶ್ ಸಮಾಲ್, ನೆಸ್ಕೊ ಇವೆಂಟ್ ಆರ್ಗನೈಸರ್ ಸನ್ನಿ ವಿನೋದ್ ಜೈನ್ ಹಾಗೂ ಅಂತರಿಕ ಸೆಕ್ಯೂರಿಟಿ ತಂಡದ ಸದಸ್ಯ ಬಾಲಕೃಷ್ಣನ್ ಬಲರಾಮನ್ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಡಾನ್ಸ್ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳ ಜೊತೆಗೆ ಸಹಕರಿಸುತ್ತಿರುವುದಾಗಿ ನೆಸ್ಕೋ ಹೇಳಿದೆ.
ಪರಿಸ್ಥಿತಿಯ ಗಂಭೀರತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನಡೆಯುತ್ತಿರುವ ತನಿಖೆಯಲ್ಲಿ ನಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದೇವೆ. ಸತ್ಯಗಳನ್ನು ಆದಷ್ಟು ಖಚಿತಪಡಿಸಿಕೊಳ್ಳಲು ಎಲ್ಲಾ ಸಂಬಂಧಿತ ಮಾಹಿತಿ ಮತ್ತು ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ವಿನ್ನರ್ ನಟಿಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ ನಟ: ವೀಡಿಯೋ ವೈರಲ್ ಆಗ್ತಿದ್ದಂತೆ ತೀವ್ರ ಆಕ್ರೋಶ