
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 13,262.70 ಕೋಟಿ ರು. ವೆಚ್ಚದಲ್ಲಿ 72.60 ಕಿ.ಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿ. (ಬಿ-ಸ್ಮೈಲ್) ಸಂಸ್ಥೆಯು ಈ ಯೋಜನೆ ಅನುಷ್ಠಾನಗೊಳಿಸಲಿದೆ.
ಬೆಂಗಳೂರು (ಏ.17) ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿನ 13262.70 ಕೋಟಿ ರು. ವೆಚ್ಚದಲ್ಲಿ 72.60 ಕಿಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿ. (ಬಿ-ಸ್ಮೈಲ್) ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ 11 ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮೋದಿಸಲಾಗಿದೆ. 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ 120 ಕಿಮೀ ಉದ್ದದ ಸಿಗ್ನಲ್ ಫ್ರೀ ಎಲೆವೇಟೆಡ್ ಕಾರಿಡಾರ್ಗಳ ನಿರ್ಮಾಣದ ಘೋಷಣೆ ಮಾಡಲಾಗಿತ್ತು. ಅದರಲ್ಲಿ 72.60 ಕಿಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಒಟ್ಟಾರೆ ಯೋಜನೆಗೆ 13262.70 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಆ ಪೈಕಿ 2 ಮೇಲ್ಸೇತುವೆಗಳು ಬಿಒಟಿ ಮಾದರಿಯಲ್ಲಿ ನಿರ್ಮಾಣಗೊಂಡರೆ, ಉಳಿದ 9 ಮೇಲ್ಸೇತುವೆಗಳು ಇಟಿಸಿ ಮಾದರಿಯಲ್ಲಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ಒಟ್ಟಾರೆ 11 ಮೇಲ್ಸೇತುವೆಗಳ ನಿರ್ಮಾಣಕ್ಕೆ13262.70 ಕೋಟಿ ರು.ಗಳಾಗಲಿದ್ದು, ಅದರಲ್ಲಿ ರಾಜ್ಯ ಸರ್ಕಾರ 7150 ಕೋಟಿ ರು. ನೀಡಲಿದೆ. ಉಳಿದಂತೆ 2072.57 ಕೋಟಿ ರು. ಭೂಸ್ವಾಧೀನಕ್ಕೆ ವ್ಯಯಿಸಲಾಗುತ್ತದೆ. ಬಾಕಿ ಅನುದಾನವನ್ನು ಖಾಸಗಿ ಸಂಸ್ಥೆ ಮೂಲಕ ಪಡೆಯುವ ಯೋಚನೆ ಮಾಡಲಾಗಿದೆ.
ಎಲ್ಲೆಲ್ಲಿ ಮೇಲ್ಸೇತುವೆಗಳ ನಿರ್ಮಾಣ
ಯಶವಂತಪುರದಿಂದ ಹಳೇ ಮದ್ರಾಸ್ ರಸ್ತೆ, ಮಾರೇನಹಳ್ಳಿ ಮುಖ್ಯರಸ್ತೆಯಿಂದ ಕನಕಪುರ ಮುಖ್ಯರಸ್ತೆ, ಶೋಲೇ ವೃತ್ತದಿಂದ ಸೇಂಟ್ ಜಾನ್ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆವರೆಗೆ, ದೊಡ್ಡಬಳ್ಳಾಪುರ ರಸ್ತೆಯಿಂದ ಕೋಗಿಲು ವೃತ್ತ, ಕೋಣನಕುಂಟೆ ಕ್ರಾಸ್ ಬಳಿ, ಸಿರ್ಸಿ ವೃತ್ತದಿಂದ ನಾಯಂಡಹಳ್ಳಿ, ಕನಕಪುರ ರಸ್ತೆ ರಘುವನಹಳ್ಳಿ ಕ್ರಾಸ್, ಮಿನರ್ವ ವೃತ್ತದಿಂದ ಹಡ್ಸನ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ನೃಪತುಂಗ ರಸ್ತೆ, ತುಮಕೂರು ರಸ್ತೆಯ ಎಂಇಐ ಜಂಕ್ಷನ್, ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಹೊರವರ್ತುಲ ರಸ್ತೆ, ನಾಗವಾರ ಜಂಕ್ಷನ್ನಿಂದ ಬಾಗಲೂರು ಮುಖ್ಯರಸ್ತೆ, ಮದರ್ ಥೆರೇಸಾ ಕ್ರಾಸ್ನಿಂದ ಬಾಗಲೂರು
ರೋಟರಿ ಮೇಲ್ಸೇತುವೆಗೂ ಅಸ್ತು
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೈಯಪ್ಪನಹಳ್ಳಿಯ ಐಒಸಿ ಜಂಕ್ಷನ್ನಲ್ಲಿ ರೋಟರಿ ಮೇಲ್ಸೇತುವೆ ನಿರ್ಮಾಣ ಯೋಜನೆಯ 436.44 ಕೋಟಿ ರು. ಪರಿಷ್ಕೃತ ಅಂದಾಜಿಗೂ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಹಾಗೆಯೇ, ಜಲಮಂಡಳಿಯ 5 ತ್ಯಾಜ್ಯ ನೀರು ಸಂರಕ್ಷಣಾ ಘಟಕದಿಂದ ಉತ್ಪತ್ತಿಯಾಗುವ ಬಯೋಗ್ಯಾಸ್ನ್ನು ಬಳಸಿ ಬಯೋಗ್ಯಾಸ್ ಪ್ಯೂರಿಫಿಕೇಷನ್ ಆ್ಯಂಡ್ ಕಾಂಪ್ರಹೇನ್ಸಿವ್ ಸಿಸ್ಟಂ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 85 ಕೋಟಿ ರು. ಮುಂದಿನ 20 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.