
ಆರ್‌ಎಸ್‌ಎಸ್-ಬಿಜೆಪಿಯನ್ನು ವಿಷಪೂರಿತ ಹಾವಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಚಿವ ಜೆ.ಪಿ. ನಡ್ಡಾ ಸಹಾಯ ಮಾಡಿದ್ದಾರೆ. ಮೆಟ್ಟಿಲು ಇಳಿಯಲು ಕಷ್ಟಪಡುತ್ತಿದ್ದ ಖರ್ಗೆಯವರ ಕೈ ಹಿಡಿದು ನಡ್ಡಾ ನಡೆಸಿಕೊಂಡು ಬಂದಿದ್ದು, ಈ ವಿಡಿಯೋ ರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಈಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡುತ್ತಾ ನಮಾಜ್ ಮಾಡುವಾಗ ವಿಷಪೂರಿತ ಹಾವು ಕಂಡರೆ ಅದನ್ನು ಕೊಲ್ಲಬೇಕು ಎಂದು ಕುರಾನ್‌ನಲ್ಲಿ ಬರೆಯಲಾಗಿದೆ. ಆರ್‌ಎಸ್‌ಎಸ್- ಬಿಜೆಪಿಗಳು ಆ ವಿಷಪೂರಿತ ಹಾವಿನಂತೆ; ನೀವು ಅದನ್ನು ಕೊಲ್ಲದಿದ್ದರೆ, ನೀವು ಬದುಕುಳಿಯುವುದಿಲ್ಲ ಎಂದು ಹೇಳಿದ್ದು ಭಾರಿ ವಿವಾದಕ್ಕೆ ಈಡಾಗಿದ್ದು ಗೊತ್ತೇ ಇದೆ. ಪ್ರಚೋದನಕಾರಿಯಾಗಿ ಮಾತನಾಡಿರುವುದಾಗಿ ಇವರ ವಿರುದ್ಧ ಬಿಜೆಪಿ ಬೆಂಬಲಿಗರು ತಿರುಗಿ ಬಿದ್ದಿದ್ದಾರೆ.
ರಾಜ್ಯಸಭೆಯಲ್ಲಿ ಕುತೂಹಲ
ಇದರ ನಡುವೆಯೇ, ಇಂದು ರಾಜ್ಯಸಭೆಯಲ್ಲಿ ಕುತೂಹಲದ ಘಟನೆಗೆ ಸಾಕ್ಷಿಯಾಯಿತು. ರಾಜ್ಯಸಭೆಯ ಸಭಾಪತಿಯಾಗಿ ಹರಿವಂಶ್ ನಾರಾಯಣ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ಇದು ಅವರ ಮೂರನೆಯ ಟರ್ಮ್. ಈ ಅವಧಿಯಲ್ಲಿ, ಹರಿವಂಶ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ನಾಯಕರೆಲ್ಲರೂ ತಮ್ಮ ತಮ್ಮ ಸ್ಥಾನಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕುತೂಹಲದ ದೃಶ್ಯವೊಂದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಅದೇನೆಂದರೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರು ಕೂಡ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಬರುತ್ತಿದ್ದರು. ಆ ಸಮಯದಲ್ಲಿ ಅಲ್ಲಿ ಮೆಟ್ಟಿಲುಗಳು ಇದ್ದವು. ಅವರ ಹಿಂದೆ ಮಲ್ಲಿಕಾರ್ಜುನ ಖರ್ಗೆ ಇದ್ದರು. ಇದಾಗಲೇ ಖರ್ಗೆ ಅವರಿಗೆ 83 ವರ್ಷ ವಯಸ್ಸು. ಮೆಟ್ಟಿಲುಗಳನ್ನು ಇಳಿಯುವುದು ಅವರಿಗೆ ಅಷ್ಟು ಸುಲಭದ ಮಾತಾಗಿರಲಿಲ್ಲ.
ಕೈಹಿಡಿದ ಖರ್ಗೆ
ಕೂಡಲೇ, ನಡ್ಡಾ ಅವರು ಖರ್ಗೆ ಅವರ ಕೈಯನ್ನು ಹಿಡಿದು ಅವರನ್ನು ನಡೆಸಿಕೊಂಡು ಬಂದರು. ಖರ್ಗೆ ಅವರಿಗೆ ಈ ಮೆಟ್ಟಿಲುಗಳು ಇಳಿಯುವುದು ಕಷ್ಟವಾಗುತ್ತದೆ ಎಂದು ಅವರು ಆ ಕ್ಷಣದಲ್ಲಿ ಅರಿತುಕೊಂಡರು. ಖರ್ಗೆ ಅವರಿಗೂ ಯಾರದ್ದಾದರೂ ಸಹಾಯ ಬೇಕಿತ್ತು. ಆದ್ದರಿಂದ ಆ ಕ್ಷಣದಲ್ಲಿ ಅವರಿಗೆ ನೆರವಾಗಲು ಬಂದದ್ದು, ಬಿಜೆಪಿ ಹಾಗೂ RSSನ ಸಚಿವ ನಡ್ಡಾ. ನಡ್ಡಾ ಅವರ ಕೈಯನ್ನು ಇಳಿದು ಖರ್ಗೆ (Mallikharjuna Kharge) ನಿಧಾನವಾಗಿ ಮೆಟ್ಟಿಲು ಇಳಿದರು. ನಂತರ ಎಲ್ಲರೂ ತಮ್ಮ ತಮ್ಮ ಸ್ಥಾನದಲ್ಲಿ ಆಸೀನರಾದರು.
ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ವಿಭಿನ್ನ ರೀತಿಯ ಚರ್ಚೆಗಳು ಶುರುವಾಗಿದೆ. ಅಷ್ಟಕ್ಕೂ ವೈಯಕ್ತಿಯ ಸಂಬಂಧವೇ ಬೇರೆ, ರಾಜಕಾರಣವೇ ಬೇರೆ. ಬಹುತೇಕ ಎಲ್ಲಾ ಬೇರೆ ಬೇರೆ ಪಕ್ಷಗಳ ಮುಖಂಡರು ಒಟ್ಟಾಗಿ ಮಾತನಾಡುವುದು, ಹಾಸ್ಯ ಮಾಡುವುದನ್ನು ನೋಡಬಹುದು. ಚುನಾವಣೆ, ಪಕ್ಷದ ವಿಷಯ ಬಂದಾಗ ಸಿದ್ಧಾಂತಗಳು ಬೇರೆಬೇರೆ ಇರುವ ಕಾರಣ, ವಾಗ್ದಾಳಿ ಮಾಡುವುದು ಸಹಜ. ಇದನ್ನು ಯಾರೂ ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದೂ ಕೆಲವರು ಹೇಳುತ್ತಿದ್ದಾರೆ. ಅವೆಲ್ಲವೂ ಸರಿ, ಆದರೆ ಯಾರನ್ನೋ ಓಲೈಕೆ ಮಾಡಲು ಇನ್ನಾರನ್ನೋ ವಿಷಸರ್ಪ, ಸಾಯಿಸಿ ಎನ್ನುವ ಹೇಳಿಕೆ ನೀಡುವುದು ಯಾವ ಸಿದ್ಧಾಂತ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ.