
ಗೌತಮ್ ಅದಾನಿ ಈಗ ಏಷ್ಯಾದ ನಂಬರ್ 1 ಶ್ರೀಮಂತ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ಹೊಸ ಪಟ್ಟಿ ಪ್ರಕಾರ, ಅದಾನಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷರ ನಿವ್ವಳ ಆಸ್ತಿ 92.6 ಬಿಲಿಯನ್ ಡಾಲರ್ . ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದಾರೆ. ಅಂಬಾನಿ 20ನೇ ಸ್ಥಾನ..
ಏಷ್ಯಾದ ನಂಬರ್ 1 ಶ್ರೀಮಂತ ಪಟ್ಟ ಅದಾನಿ ಪಾಲು
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಹೊಸ ಪಟ್ಟಿಯ ಪ್ರಕಾರ, ಗೌತಮ್ ಅದಾನಿ ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಬಿಡುಗಡೆಯಾದ ಈ ರ್ಯಾಂಕಿಂಗ್ನಲ್ಲಿ, ಅದಾನಿ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ, 92.6 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ ಜಾಗತಿಕವಾಗಿ 19ನೇ ಸ್ಥಾನಕ್ಕೆ ಏರಿದ್ದಾರೆ.
ಇದೇ ವೇಳೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ 90.8 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 20ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಅದಾನಿ ಅವರ ಆಸ್ತಿಯಲ್ಲಿ ಭಾರೀ ಏರಿಕೆಯಾಗಿದ್ದು, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಹಿಂದಿಕ್ಕಲು ಇದು ಕಾರಣವಾಗಿದೆ.
ಜಾಗತಿಕ ಶ್ರೀಮಂತರ ಪಟ್ಟಿ ಹೇಗಿದೆ?
ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಎಲಾನ್ ಮಸ್ಕ್ 656 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇವರ ನಂತರ ಆಲ್ಫಾಬೆಟ್ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್ (286 ಬಿಲಿಯನ್ ಡಾಲರ್) ಮತ್ತು ಅಮೆಜಾನ್ನ ಜೆಫ್ ಬೆಜೋಸ್ (269 ಬಿಲಿಯನ್ ಡಾಲರ್) ಇದ್ದಾರೆ. ಮೆಟಾದ ಮಾರ್ಕ್ ಜುಕರ್ಬರ್ಗ್ ಮತ್ತು ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಕೂಡಾ ಟಾಪ್ ಲಿಸ್ಟ್ನಲ್ಲಿದ್ದಾರೆ. ಟೆಕ್ ಉದ್ಯಮಿಗಳೇ ಈ ಪಟ್ಟಿಯಲ್ಲಿ ಹೆಚ್ಚು ಪ್ರಾಬಲ್ಯ ಮೆರೆದಿದ್ದಾರೆ.
ಅದಾನಿ ಗ್ರೂಪ್ನ ಬೃಹತ್ ಉದ್ಯಮ ಸಾಮ್ರಾಜ್ಯ
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಭಾರತದ ಅತಿದೊಡ್ಡ ಮೂಲಸೌಕರ್ಯ ಸಮೂಹವಾಗಿದೆ. ಹಲವು ಕ್ಷೇತ್ರಗಳಲ್ಲಿ ಈ ಗ್ರೂಪ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಮೊದಲು ಕೇವಲ B2B (ಬಿಸಿನೆಸ್-ಟು-ಬಿಸಿನೆಸ್) ವಲಯದಲ್ಲಿ ಗಮನಹರಿಸಿದ್ದ ಕಂಪನಿ, ಈಗ B2C (ಬಿಸಿನೆಸ್-ಟು-ಕನ್ಸ್ಯೂಮರ್) ವ್ಯವಹಾರಗಳಿಗೂ ಕಾಲಿಡುತ್ತಿದೆ. ಸಾರಿಗೆ, ಇಂಧನ, ನೈಸರ್ಗಿಕ ಸಂಪನ್ಮೂಲ, ವಿಮಾನ ನಿಲ್ದಾಣ, ರಕ್ಷಣೆ, ಡೇಟಾ ಸೆಂಟರ್, ಸಿಮೆಂಟ್, ಮೀಡಿಯಾ, ರಸ್ತೆ, ರೈಲು, ಮೆಟ್ರೋ, ರಿಯಲ್ ಎಸ್ಟೇಟ್, ಆಹಾರ FMCG, ಡಿಜಿಟಲ್ ಪ್ಲಾಟ್ಫಾರ್ಮ್ಗಳಂತಹ ಅನೇಕ ಕ್ಷೇತ್ರಗಳಲ್ಲಿ ಅದಾನಿ ಗ್ರೂಪ್ ಹೂಡಿಕೆ ಮಾಡಿದೆ.
ಅದಾನಿ ಸಾಧನೆ ಮತ್ತು ಕೊಡುಗೆಗಳು
ಅದಾನಿ ಗ್ರೂಪ್ ಪ್ರಕಾರ, 200 ಬಿಲಿಯನ್ ಡಾಲರ್ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಬಿಸಿನೆಸ್ ಗ್ರೂಪ್ ಕಟ್ಟಿದ ಭಾರತದ ಮೊದಲ ತಲೆಮಾರಿನ ಉದ್ಯಮಿ ಗೌತಮ್ ಅದಾನಿ. ಇವರು ಗ್ರಾಮೀಣ ಭಾರತದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ 7 ಬಿಲಿಯನ್ ಡಾಲರ್ ದೇಣಿಗೆ ನೀಡುತ್ತಿದ್ದಾರೆ. ಜೊತೆಗೆ, ಭಾರತದ ಹಸಿರು ಇಂಧನ ಪರಿವರ್ತನೆಗೆ 70 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಸದ್ಯ 150 ಬಿಲಿಯನ್ ಡಾಲರ್ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಅದಾನಿ ಗ್ರೂಪ್, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 12 ಕಂಪನಿಗಳನ್ನು ಒಳಗೊಂಡಿದೆ. ‘Nation Building’ and ‘Growth with Goodness ಎಂಬ ತತ್ವಗಳ ಮೇಲೆ ಈ ಸಮೂಹ ಕಾರ್ಯನಿರ್ವಹಿಸುತ್ತಿದೆ. (ANI)