ಬೆಂಗಳೂರು, ಏ.15: ದಾವಣಗೆರೆ ಉಪಚುನಾವಣೆ ಟಿಕೆಟ್ ಹಂಚಿಕೆ ವಿವಾದದ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ವೇಗವಾಗಿವೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ಅವರನ್ನು ವಜಾ ಮಾಡಿದ ನಂತರ, ಸಚಿವ ಜಮೀರ್ ಅವರೊಂದಿಗೆ ಸಿಎಂ ಸಿದ್ಧರಾಮಯ್ಯ ಅವರು ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗರಂ ಆಗಿದ್ದರು. ಹೈಕಮಾಂಡ್ ಕೇಳುವ ಎಲ್ಲ ಪ್ರಶ್ನೆಗೂ ನೀನೇ ಉತ್ತರ ನೀಡಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಂದು ನಸೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನಸೀರ್ ಅಹ್ಮದ್ ಅವರ ಸರ್ಕಾರಿ ನಿವಾಸಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದರು. ನಸೀರ್ ಅಹ್ಮದ್ ಅವರ ವಜಾ ಬಳಿಕ ನಡೆದ ಮೊದಲ ಭೇಟಿ ಇದಾಗಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಅವರಿಗೆ “ಹೈಕಮಾಂಡ್ ದೂರುಗಳ ಬಗ್ಗೆ ನೀನೇ ಉತ್ತರ ನೀಡಿದ್ದೇನೆ” ಎಂದು ತಾಕೀತು ಮಾಡಿದರು. ಇದರ ಬೆನ್ನಲ್ಲೇ ಜಮೀರ್ ಅಹ್ಮದ್ ಅವರು ಅಸಮಾಧಾನಗೊಂಡಿರುವ ನಾಯಕರನ್ನು ಭೇಟಿ ಮಾಡುತ್ತಿರುವುದು ಮಹತ್ವ ಪಡೆದಿದೆ.
ಇದನ್ನೂ ಓದಿ: ಜಮೀರ್ ಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್!: ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ, ನೀನೇ ಸಮಾಜಾಯಿಷಿ
ದಾವಣಗೆರೆಯಲ್ಲಿ ಎದ್ದಿರುವ ಬಂಡಾಯದ ಕಿಚ್ಚು ಹೈಕಮಾಂಡ್ ಮಟ್ಟಕ್ಕೆ ತಲುಪಿದ್ದು, ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರ ಅಸಮಾಧಾನವನ್ನು ಶಮನಗೊಳಿಸಲು ಜಮೀರ್ ಅಹ್ಮದ್ ಸಂಧಾನಕ್ಕೆ ಇಳಿದಿದ್ದಾರೆಯೇ ಅಥವಾ ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ದಾವಣಗೆರೆಯಲ್ಲಿ ಆಗಿರುವ ಗೊಂದಲದಿಂದ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಮುಸ್ಲಿಂ ನಾಯಕರ ತಲೆದಂಡ ಮಾಡುತ್ತಿದೆ ಎಂದು ಹೇಳಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:47 am, ಬುಧವಾರ, 15 ಏಪ್ರಿಲ್ 26