Headlines

ಪ್ರಧಾನಿ ಮೋದಿಗೆ ಸಿಎಂ ನೀಡಿದ 18 ಬೇಡಿಕೆಗಳ ಪಟ್ಟಿಯಲ್ಲೇನಿದೆ? ಸೈಲೆಂಟಾಗಿ ಸಿದ್ದು ಕಿವಿಯಲ್ಲಿ ನಮೋ ಹೇಳಿದ್ದೇನು? | Cm Siddaramaiah Submits 18 Point Demand List To Pm Modi What S Inside The Memorandum Rav

ಪ್ರಧಾನಿ ಮೋದಿಗೆ ಸಿಎಂ ನೀಡಿದ 18 ಬೇಡಿಕೆಗಳ ಪಟ್ಟಿಯಲ್ಲೇನಿದೆ? ಸೈಲೆಂಟಾಗಿ ಸಿದ್ದು ಕಿವಿಯಲ್ಲಿ ನಮೋ ಹೇಳಿದ್ದೇನು? | Cm Siddaramaiah Submits 18 Point Demand List To Pm Modi What S Inside The Memorandum Rav



ಪ್ರಧಾನಿ ಮೋದಿಗೆ ಸಿಎಂ ನೀಡಿದ 18 ಬೇಡಿಕೆಗಳ ಪಟ್ಟಿಯಲ್ಲೇನಿದೆ? ಸೈಲೆಂಟಾಗಿ ಸಿದ್ದು ಕಿವಿಯಲ್ಲಿ ನಮೋ ಹೇಳಿದ್ದೇನು? | Cm Siddaramaiah Submits 18 Point Demand List To Pm Modi What S Inside The Memorandum Rav

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ 18 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಈ ಮನವಿಯಲ್ಲಿ ರೈಲ್ವೆ, ನೀರಾವರಿ ಯೋಜನೆಗಳು, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ, ಬಾಕಿ ಇರುವ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ

ಬೆಂಗಳೂರು (ಏ.16): ರಾಜ್ಯಕ್ಕೆ ಬುಧವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ವಿವಿಧ ರೈಲ್ವೆ, ನೀರಾವರಿ, ರಸ್ತೆ ಯೋಜನೆಗಳ ಮಂಜೂರಾತಿ ಹಾಗೂ ಅನುದಾನ ಬಿಡುಗಡೆ, ಜಲಜೀವನ್‌ ಮಿಷನ್‌ನ ಬಾಕಿ ಮೊತ್ತ ಬಿಡುಗಡೆ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ, ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ವಿಶೇಷ ಅನುದಾನ ನೀಡಿಕೆ ಸೇರಿದಂತೆ ಒಟ್ಟು 18 ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಆದಿಚುಂಚನಗಿರಿ ಮಠದ ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆಗಾಗಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಮುಖ್ಯಮಂತ್ರಿ ಅವರು ಸ್ವಾಗತಿಸಿದರು. ಇದೇ ವೇಳೆ ರಾಜ್ಯದ ಅಭಿವೃದ್ಧಿಗೆ ಪೂರಕವಾದ 18 ಬೇಡಿಕೆಗಳ ಅನುಷ್ಠಾನಕ್ಕೆ ಮನವಿ ಪತ್ರ ಸಲ್ಲಿಸಿದರು.

ಕೋಲಾರ್‌ ಫ್ಯಾಕ್ಟರಿ, ಹೈಸ್ಪೀಡ್‌ ರೈಲು:

ಪತ್ರದಲ್ಲಿ ಪ್ರಮುಖವಾಗಿ, ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿದ್ದ ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಗೆ ರಾಜ್ಯ ಸರ್ಕಾರವು 1,123 ಎಕರೆ ಜಮೀನು ನೀಡಿದ್ದರೂ ಅದು ಇನ್ನೂ ಅನುಷ್ಠಾನಗೊಂಡಿಲ್ಲ. ಶೀಘ್ರ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕು. ಅದೇ ರೀತಿ ಪ್ರಸ್ತಾವಿತ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಬೆಂಗಳೂರು-ಮೈಸೂರು ಭಾಗವನ್ನು ಸೇರಿಸಬೇಕು. ಪ್ರಾದೇಶಿಕ ಸಮತೋಲಿತ ಅಭಿವೃದ್ಧಿ ಮತ್ತು ಉತ್ತಮ ಸಂಪರ್ಕಕ್ಕೆ ಇದು ಅತ್ಯಗತ್ಯವಾಗಿದೆ ಎಂದು ಕೋರಿದ್ದಾರೆ.

ಅಲ್ಲದೆ, ಬೆಂಗಳೂರು ಉಪ ನಗರ ರೈಲು ಯೋಜನೆಗೆ ಕೇಂದ್ರದ ಪಾಲನ್ನು ಶೀಘ್ರ ಬಿಡುಗಡೆ ಮಾಡಬೇಕು. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಪ್ರಾರಂಭಿಸಬೇಕು. ​ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಗೆ ಕೇಂದ್ರದ ಪಾಲಿನ ಬಾಕಿ ಇರುವ 17,554 ಕೋಟಿ ರು. ಹಣವನ್ನು ಬಿಡುಗಡೆ ಮಾಡಬೇಕು ಮತ್ತು ನೀತಿ ನಿಯಮಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕೋರಿದ್ದಾರೆ.

​ಬೆಂಗಳೂರಿಗೆ 6,000 ಕೋಟಿ ರು. ಕೊಡಿ

ರಾಷ್ಟ್ರೀಯ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆಯನ್ನು ಪರಿಗಣಿಸಿ, ಅದರ ಮೂಲಸೌಕರ್ಯ ಬಲಪಡಿಸಲು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ವಿಶೇಷ ಅನುದಾನವಾಗಿ 6000 ಕೋಟಿ ರು.ಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ಮನವಿಯಲ್ಲಿ ಕೋರಿದ್ದಾರೆ.

ಗ್ರಾ.ಪಂ.ಗಳಿಗೆ ಅನುದಾನ:

ಎಲ್ಲಾ ಷರತ್ತುಗಳನ್ನು ಪೂರೈಸಿದ್ದರೂ ಕರ್ನಾಟಕವು 2025-26ನೇ ಹಣಕಾಸು ವರ್ಷಕ್ಕೆ ಬರಬೇಕಾದ 2,860 ಕೋಟಿ ರು. ಅನುದಾನವನ್ನು ಇನ್ನೂ ಪಡೆದಿಲ್ಲ. ಗ್ರಾಮೀಣ ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸಲು ಈ ಹಣ ಮುಖ್ಯವಾಗಿದ್ದು ಶೀಘ್ರ ಬಿಡುಗಡೆ ಮಾಡಬೇಕು. ಕಳೆದ 12 ವರ್ಷಗಳಲ್ಲಿ ರಾಜ್ಯವು ರಾಷ್ಟ್ರೀಯ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಿದ್ದರೂ ಯಾವುದೇ ದೊಡ್ಡ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪಡೆದಿಲ್ಲ. ಆದ್ದರಿಂದ ಬಾಕಿ ಇರುವ ಯೋಜನೆಗಳ ಮಂಜೂರಾತಿಗೆ ಕೇಂದ್ರವು ತುರ್ತಾಗಿ ಮಧ್ಯಪ್ರವೇಶಿಸಬೇಕು. ಹಣಕಾಸಿನ ಅಸಮತೋಲನ ಸರಿಪಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ಬಾಕಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ಅವರಿಗೆ ಮುಖ್ಯಮಂತ್ರಿ ಅವರು ಮನವಿ ಮಾಡಿದ್ದಾರೆ.

​ಕಲ್ಯಾಣಕ್ಕೆ ವಿಶೇಷ ಹಣಕಾಸು ನೆರವು :

ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ವಾರ್ಷಿಕ 5,000 ಕೋಟಿ ವಿಶೇಷ ಅನುದಾನ ನೀಡಬೇಕು ಮತ್ತು ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸಾರ್ವಜನಿಕ ವಲಯದ ಉದ್ದಿಮೆಯನ್ನು ಸ್ಥಾಪಿಸಬೇಕು.​ ರಾಷ್ಟ್ರೀಯವಾಗಿ ಮಹತ್ವದ್ದಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ (2000 ಮೆಗಾವ್ಯಾಟ್)ಗೆ ಅರಣ್ಯ, ಪರಿಸರ ಮತ್ತು ವನ್ಯಜೀವಿ ಮಂಜೂರಾತಿಗಳನ್ನು ಶೀಘ್ರವಾಗಿ ನೀಡಬೇಕು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಶೀಘ್ರ ಅನುಮೋದನೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಅಲ್ಲದೆ, ಕರ್ನಾಟಕದ ಯೋಜನೆಗಳಿಗೆ ಅನುಮೋದನೆಗಳು ಮತ್ತು ಹಣಕಾಸು ಬಿಡುಗಡೆಯಲ್ಲಿನ ಮರುಕಳಿಸುವ ವಿಳಂಬಗಳು ವ್ಯವಸ್ಥಿತ ಅಸಮಾನತೆಯ ಭಾವನೆಯನ್ನು ಮೂಡಿಸಿವೆ. ಈ ಸಮಸ್ಯೆಗಳನ್ನು ಪರಿಹರಿಸುವುದರಿಂದ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಪುನರುಚ್ಚರಿಸಿದಂತಾಗುತ್ತದೆ ಮತ್ತು ಭಾರತದ ಅಭಿವೃದ್ಧಿಯ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಬಲಪಡಿಸುತ್ತದೆ. ​ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಮ್ಮ ಹಸ್ತಕ್ಷೇಪವನ್ನು ಕರ್ನಾಟಕದ ಜನರು ಭರವಸೆ ಮತ್ತು ವಿಶ್ವಾಸದಿಂದ ಎದುರು ನೋಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮನವಿ

ಬೆಂಗಳೂರಿನ ಕುಡಿಯುವ ನೀರಿಗಾಗಿ 67 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಮೇಕೆದಾಟು ಯೋಜನೆಗೆ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗವು ಶೀಘ್ರವಾಗಿ ಅನುಮೋದನೆ ನೀಡುವಂತೆ ನಿರ್ದೇಶಿಸಬೇಕು. ಪಿಎಂಕೆಎಸ್ವೈ-ಎಐಬಿಪಿ ಯೋಜನೆಯಡಿ ಘೋಷಿಸಲಾದ 5,300 ಕೋಟಿ ರು. ಕೇಂದ್ರದ ನೆರವನ್ನು ಬಿಡುಗಡೆ ಮಾಡಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಬೇಕು. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ರ ಅಂತಿಮ ತೀರ್ಪನ್ನು ಗೆಜೆಟ್‌ನಲ್ಲಿ ಅಧಿಸೂಚಿಸಬೇಕು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ (ಹಂತ-III) ಅನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕು ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ 1.72 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುವಂತೆ ಕಳಸಾ ನಾಲಾ ಯೋಜನೆಗೆ ವನ್ಯಜೀವಿ ಮಂಜೂರಾತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲು ಪ್ರಧಾನಿ ಅವರನ್ನು ಸಿಎಂ ಕೋರಿದ್ದಾರೆ.

ನದಿಗಳ ಜೋಡಣೆ (ಐಎಲ್‌ಆರ್‌) ಯೋಜನೆಗಳಲ್ಲಿ ಗೋದಾವರಿ-ಕಾವೇರಿ ಮತ್ತು ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಳಲ್ಲಿ ಕನಿಷ್ಠ 40-45 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡುವುದನ್ನು ಕೇಂದ್ರವು ಖಚಿತಪಡಿಸಬೇಕು. ​ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ.56ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಂವಿಧಾನದ 9ನೇ ವೇಳಾಪಟ್ಟಿಗೆ ಸೇರಿಸಬೇಕು. ರಾಜ್ಯ ಸರ್ಕಾರವು ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

  • ಕೋಲಾರ ಕೋಚ್‌ ಫ್ಯಾಕ್ಟರಿ, ಹೈಸ್ಪೀಡ್‌ ರೈಲು ಕಾರಿಡಾರ್‌ಗೆ ಒತ್ತಾಯ
  • ಗ್ರಾಪಂ, ಕಲ್ಯಾಣ ಕರ್ನಾಟಕ, ಬೆಂಗಳೂರಿಗೆ ಅನುದಾನ ನೀಡಲು ಮೊರೆ
  • ಶರಾವತಿ ಪಂಪ್ಡ್‌ ಸ್ಟೋರೇಜ್‌, ರಾಯಚೂರು ಏಮ್ಸ್‌ಗೆ ಅಸ್ತು ನೀಡಲು ಆಗ್ರಹ
  • ಮೇಕೆದಾಟು, ಭದ್ರಾ, ಕೃಷ್ಣಾ, ಕಳಸಾ, ನದಿ ಜೋಡಣೆ ಬಗ್ಗೆಯೂ ಪ್ರಸ್ತಾಪ\B

ಮೋದಿ- ಸಿದ್ದು ಪಿಸು ಮಾತು ರಹಸ್ಯ!

ಆದಿಚುಂಚನಗಿರಿ ಮಠದ ಕಾರ್ಯಕ್ರಮದ ನಿಮಿತ್ತ ಬುಧವಾರ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಜಿದ್ದಾಜಿದ್ದಿ ಮರೆತು ಕೆಲ ನಿಮಿಷ ನಗುನಗುತ್ತ ಕುಶಲೋಪರಿ ವಿಚಾರಿಸಿದರು. ಈ ವೇಳೆ ಸಿಎಂ ಕಿವಿಯಲ್ಲಿ ಮೋದಿ ಏನೋ ಹೇಳಿದ್ದು ಗಮನ ಸೆಳೆಯಿತು.

ರಾಜ್ಯದ ಪಾಲಿನ ಅನುದಾನ ನೀಡಿ

ಎಲ್ಲಾ ಷರತ್ತು ಪೂರೈಸಿದ್ದರೂ ರಾಜ್ಯವು 2025-26ರಲ್ಲಿ ಬರಬೇಕಾದ 2,860 ಕೋಟಿ ರು. ಅನುದಾನ ಪಡೆದಿಲ್ಲ. ವಿತ್ತೀಯ ಅಸಮತೋಲನ ಸರಿಪಡಿಸಲು ಕೇಂದ್ರವು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಬಾಕಿ ಅನುದಾನ ನೀಡಬೇಕು. ಸಿದ್ದರಾಮಯ್ಯ, ಮುಖ್ಯಮಂತ್ರಿ



Source link

Leave a Reply

Your email address will not be published. Required fields are marked *