
Vemula Act ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ರಕ್ಷಿಸಲು ಉದ್ದೇಶಿಸಿರುವ ‘ಕರ್ನಾಟಕ ರೋಹಿತ್ ವೇಮುಲಾ ವಿಧೇಯಕ’ ಅನುಷ್ಠಾನದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಬೆಂಗಳೂರು (ಏ.16) ಸಾರ್ವಜನಿಕ, ಖಾಸಗಿ, ಡೀಮ್ಡ್ ಸೇರಿದಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಘನತೆಯ ಹಕ್ಕು ರಕ್ಷಣೆಗಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಕರ್ನಾಟಕ ರೋಹಿತ್ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ ಅನುಷ್ಠಾನ ಸಂಬಂಧ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.
ಕರ್ನಾಟಕ ರೋಹಿತ್ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ ಅನುಷ್ಠಾನ ಕುರಿತಂತೆ ಈ ಹಿಂದೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಅದರಂತೆ ಈ ಹಿಂದೆಯೂ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕ ಚರ್ಚೆಗೆ ಬಂದಿತ್ತಾದರೂ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಬದಲಿಗೆ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಲು ಸಂಪುಟ ಸಭೆಯಲ್ಲಿ ಸೂಚಿಸಿ, ವಿಧೇಯಕದ ಬಗೆಗಿನ ನಿರ್ಧಾರವನ್ನು ಮುಂದೂಡಲಾಗಿತ್ತು. ಇದೀಗ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಿದ್ದು, ವಿಧೇಯಕದ ಕುರಿತಂತೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ರಕ್ಷಣೆ ನೀಡುವುದು ವಿಧೇಯಕದ ಆಶಯವಾಗಿದೆ. ವಿಧೇಯಕದಲ್ಲಿನ ಅಂಶಗಳ ಉಲ್ಲಂಘನೆಯು ಜಾಮೀನುರಹಿತ ಅಪರಾಧವಾಗಲಿದ್ದು, ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಜತೆಗೆ ಸಂಬಂಧಪಟ್ಟ ಸಂಸ್ಥೆಗೆ ಸರ್ಕಾರದಿಂದ ಹಣಕಾಸು ನೆರವು ಮತ್ತು ಅನುದಾನ ನಿಲ್ಲಿಸುವ ಅಂಶಗಳು ಈ ಹಿಂದೆ ವಿಧೇಯಕದಲ್ಲಿ ಸೇರಿಸಲಾಗಿತ್ತು. ಇದೀಗ ಹೊಸದಾಗಿ ಚರ್ಚೆಗೆ ಬರುತ್ತಿರುವ ವಿಧೇಯಕದಲ್ಲಿಯೂ ಆ ರೀತಿಯ ಅಂಶಗಳನ್ನು ಸೇರಿಸಲಾಗಿದೆ.