ಬಾಗಲಕೋಟೆ, (ಏಪ್ರಿಲ್ 17): ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ (ದಾವಣಗೆರೆ ದಕ್ಷಿಣ ಉಪಚುನಾವಣೆ) ಕೆಲ ಮುಸ್ಲಿಂ ನಾಯಕರು ಪಕ್ಷ ವಿರೋಧಿ ಚಟುವಟಿಕೆಂಬ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಅಬ್ದುಲ್ ಜಬ್ಬಾರ್ ಅವರನ್ನ ಕಾಂಗ್ರೆಸ್ ಅಮಾನತುಗೊಳಿಸಿದೆ. ಇನ್ನು ನಸೀರ್ ಅಹಮ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿ ವಜಾ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಾಗಲಕೋಟೆ ಬೈ ಎಲೆಕ್ಷನ್ ನಲ್ಲೂ (ಬಾಗಲಕೋಟ ಉಪಚುನಾವಣೆ) ಸಹ ಕಾಂಗ್ರೆಸ್ ಪಕ್ಷದ ವಿರೋಧಿ ಚಟುವಟಿಕೆ ನಡೆಸಿರುವುದು ಕಂಡುಬಂದಿದೆ, ಈ ಸಂಬಂಧ ಕಾಂಗ್ರೆಸ್ ಪಕ್ಷದ ಇಬ್ಬರು ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಹಿರಿಯ ಮುಖಂಡರನ್ನು 6 ವರ್ಷಗಳ ಕಾಲ ಉಚ್ಚಾಟನೆಗೆ ಶಿಫಾರಸ್ಸು ಮಾಡಲಾಗಿದೆ.
ಮೂವರ ಉಚ್ಛಾಟನೆಗೆ ಶಿಫಾರಸ್ಸು
ಕಮತಗಿ ಪಟ್ಟಣ ಪಂಚಾಯತ ಸದಸ್ಯರಾದ ರಮೇಶ ಜಮಖಂಡಿ, ಗುರುಲಿಂಗಪ್ಪ ಪಾಟೀಲ್ ಹಾಗೂ ಹಿರಿಯ ಮುಖಂಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಮತ ಕೇಳುವುದು ಬಿಟ್ಟು, ಬಿಜೆಪಿಗೆ ಮತ ಹಾಕುವಂತೆ ಒಳಗೊಳಗೆ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು, ಇವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪೂರ ಅವರು ಜಿಲ್ಲಾ ಸಮಿತಿಗೆ ಶಿಫಾರಸ್ಸು ಮಾಡಿದ್ದಾರೆ.
ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಜಮೀರ್ ಆಪ್ತೆಗೆ ಗೇಟ್‌ಪಾಸ್, ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ!
ಇದರ ಬೆನ್ನಲ್ಲೇ ಮೂವರ ವಿರುದ್ಧ ಸೂಕ್ತ ಕ್ರಮಕ್ಕೆ ಬಾಗಲಕೋಟೆ ಜಿಲ್ಲಾ ಸಮಿತಿ ಮುಂದಾಗಿದೆ. ಪಟ್ಟಣ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿರುವ ರಮೇಶ್ ಜಮಖಂಡಿ ಮತ್ತು ಗುರುಲಿಂಗಪ್ಪ ಪಾಟೀಲ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಜಿಲ್ಲಾಧಿಕಾರಿಗೆ ದೂರು ನೀಡಲು ಸೂಚಿಸಿದ್ದಾರೆ.
ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಾಗಲಕೋಟೆ ಮತಕ್ಷೇತ್ರದ ಕಮತಗಿ ಪಟ್ಟಣ ಪಂಚಾಯತಿ ಭಾಗದಲ್ಲಿ ಮಾತ್ರ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ದೂರು ಬಂದಿದೆ. ಇಬ್ಬರು ಪಟ್ಟಣ ಪಂಚಾಯತಿ ಸದಸ್ಯರು ಸೇರಿ ಒಟ್ಟು ಮೂವರ ವಿರುದ್ಧ ದೂರು ಬಂದಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪೂರ ದೂರು. ಅದನ್ನು ಪರಿಶೀಲಿಸಿ ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗುವುದು. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಬಿಡುವುದಿಲ್ಲ. ಎರಡು ಪಟ್ಟಣ ಪಂಚಾಯಿತಿ ಸದಸ್ಯರು ನಮ್ಮ ಕಾಂಗ್ರೆಸ್ ಪಕ್ಷದ ಬಿ ಫಾರ್ಮ ಮೇಲೆ ಆಯ್ಕೆಯಾದವರು. ರಮೇಶ ಜಮಖಂಡಿ ಮತ್ತು ಗುರುಲಿಂಗಪ್ಪ ಪಾಟೀಲ್ ವಿರುದ್ಧ ಅಮಾನತು ಕ್ರಮ ಕೈಗೊಳ್ಳುತ್ತೇವೆ. ಇನ್ನು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ ಈಗ ಪಕ್ಷದಲ್ಲಿ ಯಾವುದೇ ಪದಾಧಿಕಾರಿ ಇಲ್ಲ. ಹೀಗಾಗಿ ಉಳಿದವರ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ