
ಇಂಡಿಗೋ ಸಂಸ್ಥೆಯು ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್‌ಅಪ್ ‘ಸರಳಾ ಏವಿಯೇಷನ್’ ನಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. ‘ಶೂನ್ಯ’ ಹೆಸರಿನ eVTOL ವಿಮಾನಗಳನ್ನು ಅಭಿವೃದ್ಧಿ ಮಾಡುತ್ತಿದೆ.
ಬೆಂಗಳೂರು (ಏ.17): ಭಾರತದ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿರುವ ಇಂಡಿಗೋ ಸಂಸ್ಥೆಯು, ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್‌ಅಪ್ ಆಗಿರುವ ‘ಸರಳಾ ಏವಿಯೇಷನ್’ (Sarla Aviation) ನಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಪಾಲನ್ನು ಖರೀದಿಸಿದೆ. ಈ ಮೂಲಕ ಇಂಡಿಗೋ ಅಧಿಕೃತವಾಗಿ ಭಾರತದ ಬೆಳೆಯುತ್ತಿರುವ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. ರೆಗ್ಯುಲೇಟರಿ ಫೈಲಿಂಗ್‌ಗಳ ಪ್ರಕಾರ, ಇಂಡಿಗೋ ವೆಂಚರ್ಸ್ ಫಂಡ್-I ಮೂಲಕ ಈ ಹೂಡಿಕೆ ಮಾಡಲಾಗಿದೆ. ಸರಳಾ ಏವಿಯೇಷನ್‌ನ ಮಂಡಳಿಯು ಇಂಡಿಗೋಗೆ ಪ್ರತಿ ಷೇರಿಗೆ ₹1,87,425 ಪ್ರೀಮಿಯಂ ದರದಲ್ಲಿ 10 ಈಕ್ವಿಟಿ ಷೇರುಗಳನ್ನು ಮತ್ತು 524 ಸರಣಿ A1 ಕಡ್ಡಾಯ ಪರಿವರ್ತಿತ ಸಂಚಿತ ಆದ್ಯತೆಯ ಷೇರುಗಳನ್ನು (CCPS) ನೀಡಲು ನಿರ್ಧರಿಸಿದೆ. ಈ ಹೂಡಿಕೆಯ ಒಟ್ಟು ಮೊತ್ತ ಸುಮಾರು 10 ಕೋಟಿ ರೂಪಾಯಿಗಳಾಗಿವೆ.
ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ‘ಸರಳಾ’
2023ರಲ್ಲಿ ಆಡ್ರಿಯನ್ ಸ್ಮಿತ್, ಕನ್ನಡಿಗ ರಾಕೇಶ್ ಗಾಂವ್ಕರ್ ಮತ್ತು ಶಿವಂ ಚೌಹಾಣ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಸರಳಾ ಏವಿಯೇಷನ್ ಪ್ರಸ್ತುತ ‘ಶೂನ್ಯ’ (Shunya) ಹೆಸರಿನ ಎಲೆಕ್ಟ್ರಿಕಲ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಹೆಲಿಕಾಪ್ಟರ್‌ನಂತೆ ಲಂಬವಾಗಿ ಟೇಕ್‌ಆಫ್ ಮತ್ತು ಲ್ಯಾಂಡ್ ಆಗಬಲ್ಲ ವಿದ್ಯುತ್ ಚಾಲಿತ ವಿಮಾನವಾಗಿದೆ.
ಈ ವರ್ಷದ ಏಪ್ರಿಲ್ ವೇಳೆಗೆ ಕಂಪನಿಯು ಒಟ್ಟು 13.4 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಇದರಲ್ಲಿ 2025ರ ಆರಂಭದಲ್ಲಿ ‘ಅಕ್ಸೆಲ್’ (Accel) ಮತ್ತು ‘ನಿಖಿಲ್ ಕಾಮತ್’ ನೇತೃತ್ವದಲ್ಲಿ ನಡೆದ 10 ಮಿಲಿಯನ್ ಡಾಲರ್ ಸರಣಿ A1 ಹೂಡಿಕೆಯೂ ಸೇರಿದೆ. ಸಂಗ್ರಹಿಸಿದ ಮೊತ್ತವನ್ನು ಏರ್-ಟ್ಯಾಕ್ಸಿಗಳ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, 2028ರ ವೇಳೆಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ.
ಇಂಡಿಗೋದ ಎರಡನೇ ಪ್ರಯತ್ನ
ಇಂಡಿಗೋ ಈ ಹಿಂದೆ ಅಮೆರಿಕ ಮೂಲದ ‘ಆರ್ಚರ್ ಏವಿಯೇಷನ್’ (Archer Aviation) ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಆರ್ಚರ್ ಏವಿಯೇಷನ್ ನಿಗದಿತ ಸಮಯಕ್ಕೆ ವಿಮಾನಗಳನ್ನು ನೀಡಲು ಸಾಧ್ಯವಾಗದ ಕಾರಣ ಆ ಒಪ್ಪಂದವು ಮುರಿದುಬಿದ್ದಿತ್ತು. ಹೀಗಾಗಿ, ಇಂಡಿಗೋ ಈಗ ದೇಶೀಯ ಸ್ಟಾರ್ಟ್‌ಅಪ್ ‘ಸರಳಾ’ ಜೊತೆ ಕೈಜೋಡಿಸಿ ವಾಯು ಟ್ಯಾಕ್ಸಿ ಕನಸನ್ನು ನನಸು ಮಾಡಲು ಮುಂದಾಗಿದೆ.