Headlines

ಬಿಡಿಎ ಆಯುಕ್ತರ ‘ಸರ್ವಾಧಿಕಾರಿ’ ಧೋರಣೆಗೆ ಕೆಂಪೇಗೌಡ ಬಡಾವಣೆ ನಿವೇಶನದಾರರು ಕಂಗಾಲು: ಸಭೆ ಬಹಿಷ್ಕರಿಸಿ ಡಿಸಿಎಂ ಮೊರೆ! | Nadaprabhu Kempegowda Layout Open Forum Boycotts Bda Meeting Rera Violation Sat

ಬಿಡಿಎ ಆಯುಕ್ತರ ‘ಸರ್ವಾಧಿಕಾರಿ’ ಧೋರಣೆಗೆ ಕೆಂಪೇಗೌಡ ಬಡಾವಣೆ ನಿವೇಶನದಾರರು ಕಂಗಾಲು: ಸಭೆ ಬಹಿಷ್ಕರಿಸಿ ಡಿಸಿಎಂ ಮೊರೆ! | Nadaprabhu Kempegowda Layout Open Forum Boycotts Bda Meeting Rera Violation Sat



ಬಿಡಿಎ ಆಯುಕ್ತರ ‘ಸರ್ವಾಧಿಕಾರಿ’ ಧೋರಣೆಗೆ ಕೆಂಪೇಗೌಡ ಬಡಾವಣೆ ನಿವೇಶನದಾರರು ಕಂಗಾಲು: ಸಭೆ ಬಹಿಷ್ಕರಿಸಿ ಡಿಸಿಎಂ ಮೊರೆ! | Nadaprabhu Kempegowda Layout Open Forum Boycotts Bda Meeting Rera Violation Sat

ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರರು, ಬಿಡಿಎ ಆಯುಕ್ತರ ಸರ್ವಾಧಿಕಾರಿ ಧೋರಣೆ ಖಂಡಿಸಿ, ಅವರು ಕರೆದಿದ್ದ ಸಭೆಯನ್ನು ಬಹಿಷ್ಕರಿಸಿದ್ದಾರೆ. ನಿವೇಶನದಾರರಿಗೆ ಮಾತನಾಡಲು ಅವಕಾಶ ನಿರಾಕರಿದ್ದರಿಂದ  ಸಭೆಯು ವಿಫಲವಾಯಿತು. ಇದೀಗ ನಿವೇಶನದಾರರು ನ್ಯಾಯಕ್ಕಾಗಿ ಉಪಮುಖ್ಯಮಂತ್ರಿಗಳ ಮೊರೆ ಹೋಗಿದ್ದಾರೆ.

ಬೆಂಗಳೂರು (ಏ.16): ನಾಡಪ್ರಭು ಕೆಂಪೇಗೌಡ ಬಡಾವಣೆಯ (NPKL) ಸಾವಿರಾರು ನಿವೇಶನದಾರರ ಬದುಕು ಕಳೆದ ಹತ್ತು ವರ್ಷಗಳಿಂದ ಬೀದಿಗೆ ಬಿದ್ದಿದೆ. ಇದರ ನಡುವೆ, ಸಮಸ್ಯೆ ಬಗೆಹರಿಸಬೇಕಾದ ಬಿಡಿಎ ಆಯುಕ್ತರೇ ನಿವೇಶನದಾರರ ವಿರುದ್ಧ ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಿಡಿಎ ಆಯುಕ್ತರು ಕರೆದಿದ್ದ ಮಹತ್ವದ ಸಭೆಯನ್ನು ಎನ್‌ಪಿಕೆಎಲ್ ಓಪನ್-ಫೋರಂ ಸಮಿತಿಯು ಬಹಿಷ್ಕರಿಸಿ ಹೊರನಡೆದಿದೆ.

ಘಟನೆಯ ಹಿನ್ನೆಲೆ:

ರೇರಾ (RERA) ಅಧ್ಯಕ್ಷರು ನೀಡಿದ ನಿರ್ದೇಶನದ ಮೇರೆಗೆ (ದೂರು ಸಂಖ್ಯೆ: 399/2018) ಕೆಂಪೇಗೌಡ ಬಡಾವಣೆಯ ಕುಂದುಕೊರತೆಗಳನ್ನು ಆಲಿಸಲು ಈ ಸಭೆ ಕರೆಯಲಾಗಿತ್ತು. ಆದರೆ, ಸಭೆ ಆರಂಭವಾದ ಕೇವಲ 20 ನಿಮಿಷಗಳಲ್ಲಿಯೇ ಆಯುಕ್ತರ ವರ್ತನೆಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಯುಕ್ತರು ಸಭೆಯ ಬಹುಪಾಲು ಸಮಯವನ್ನು ಕಟ್ಟುಪಾಡುಗಳನ್ನು ವಿವರಿಸುವುದರಲ್ಲೇ ಕಳೆದರು ಮತ್ತು ನಿವೇಶನದಾರರಿಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ ಎಂದು ಓಪನ್ ಫೋರಂ ದೂರಿದೆ.

ತಜ್ಞತೆ ಪ್ರಶ್ನಿಸಿದ ಆಯುಕ್ತರು:

ಸಭೆಯಲ್ಲಿ ರೇರಾ ಆದೇಶದಂತೆ ಮೂಲಸೌಕರ್ಯದ ಸಮಸ್ಯೆಗಳನ್ನು ಎತ್ತಿದಾಗ, ಬಿಡಿಎ ಆಯುಕ್ತರು ನೀಡಿದ ಪ್ರತಿಕ್ರಿಯೆ ನಿವೇಶನದಾರರನ್ನು ಕೆರಳಿಸಿತು. ಬಡಾವಣೆಯ ಡಾಂಬರೀಕರಣ ಕಾಮಗಾರಿಯ ಕಳಪೆ ಗುಣಮಟ್ಟದ ಬಗ್ಗೆ ಓಪನ್ ಫೋರಂ ಪ್ರತಿನಿಧಿ ಮಾತನಾಡಲು ಮುಂದಾದಾಗ, ‘ನೀವು ಸಿವಿಲ್ ಎಂಜಿನಿಯರ್ ಆಗಿದ್ದೀರಾ?’ ಎಂದು ಆಯುಕ್ತರು ಪ್ರಶ್ನಿಸುವ ಮೂಲಕ ನಿವೇಶನದಾರರ ಕಾಳಜಿಯನ್ನು ಅವಹೇಳನ ಮಾಡಿದ್ದಾರೆ ಎಂದು ಸಮಿತಿ ಆರೋಪಿಸಿದೆ.

ವೃದ್ಧರು ಮತ್ತು ಉತ್ತರಾಧಿಕಾರಿಗಳಿಗೆ ಅನ್ಯಾಯ:

ಸಭೆಯಲ್ಲಿ ಕೇವಲ ‘ಮೂಲ ನಿವೇಶನದಾರರು’ ಮಾತ್ರ ಮಾತನಾಡಬೇಕು ಎಂದು ಆಯುಕ್ತರು ಷರತ್ತು ವಿಧಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕಳೆದ 9-10 ವರ್ಷಗಳಿಂದ ಬಡಾವಣೆ ನೆನೆಗುದಿಗೆ ಬಿದ್ದಿರುವುದರಿಂದ ಅನೇಕ ಮೂಲ ಮಾಲೀಕರು ಮೃತಪಟ್ಟಿದ್ದಾರೆ ಅಥವಾ ಹಾಸಿಗೆ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಅಥವಾ ಉತ್ತರಾಧಿಕಾರಿಗಳಿಗೆ ಸಮಸ್ಯೆ ವಿವರಿಸಲು ಅವಕಾಶ ನೀಡದಿರುವುದು ರೇರಾ ಆದೇಶದ ಸ್ಪಷ್ಟ ಉಲ್ಲಂಘನೆ ಮತ್ತು ಸಂವೇದನಾಶೂನ್ಯ ವರ್ತನೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓಪನ್ ಫೋರಂನ ಹೋರಾಟದ ಹಾದಿ:

‘ಬಿಡಿಎ ಆಯುಕ್ತರ ಈ ನಿಲುವು ಬಡಾವಣೆಯ ಸಮಸ್ಯೆಗಳನ್ನು ಬಗೆಹರಿಸುವ ಬದಲು ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ. ನಾವು ಇಂತಹ ಸರ್ವಾಧಿಕಾರಿ ವರ್ತನೆಗೆ ಹೆದರುವುದಿಲ್ಲ,’ ಎಂದು ಎನ್‌ಪಿಕೆಎಲ್ ಓಪನ್-ಫೋರಂ ಸ್ಪಷ್ಟಪಡಿಸಿದೆ. ನಿವೇಶನದಾರರ ಹಿತಾಸಕ್ತಿ ಕಾಯುವಲ್ಲಿ ಬಿಡಿಎ ವಿಫಲವಾಗಿದೆ ಮತ್ತು ಈ ವಿಷಯದಲ್ಲಿ ರೇರಾ ಆದೇಶದ ಆಶಯವನ್ನೇ ಗಾಳಿಗೆ ತೂರಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ:

ಒಂಬತ್ತು ವರ್ಷಗಳಿಂದ ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವ ನಿವೇಶನದಾರರು ಈಗ ಅಸಹಾಯಕರಾಗಿದ್ದಾರೆ. ಆದ್ದರಿಂದ, ಗೌರವಾನ್ವಿತ ಉಪಮುಖ್ಯಮಂತ್ರಿಗಳು ಮತ್ತು ಬಿಡಿಎ ಅಧ್ಯಕ್ಷರು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು. ಆಯುಕ್ತರ ಧೋರಣೆಯನ್ನು ತಿದ್ದಿ, ಎಲ್ಲಾ ಬಾಧಿತ ನಿವೇಶನದಾರರು ಮತ್ತು ಅವರ ಕುಟುಂಬದವರಿಗೆ ನ್ಯಾಯೋಚಿತವಾಗಿ ಮಾತನಾಡಲು ಅವಕಾಶ ನೀಡುವಂತೆ ಸಭೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ.

ಸಾವಿರಾರು ಜನರ ಜೀವಮಾನದ ಉಳಿತಾಯವನ್ನು ಬಂಡವಾಳವಾಗಿ ಹೂಡಿರುವ ಕೆಂಪೇಗೌಡ ಬಡಾವಣೆಯ ನಿವೇಶನದಾರರಿಗೆ ಬಿಡಿಎ ಕೇವಲ ಭರವಸೆಗಳನ್ನು ನೀಡದೆ, ವಾಸಯೋಗ್ಯ ಬಡಾವಣೆಯನ್ನಾಗಿ ಮಾಡಿಕೊಡುವ ಜವಾಬ್ದಾರಿಯನ್ನು ಹೊರಬೇಕಿದೆ.



Source link

Leave a Reply

Your email address will not be published. Required fields are marked *