
ಪ್ರಧಾನಿ ಮೋದಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕಗಳನ್ನು ಆತುರವಾಗಿ ಜಾರಿಗೊಳಿಸಲು ಯತ್ನಿಸುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಪ್ರತಿ
- ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ
ತಮಿಳುನಾಡು, ಪಶ್ಟಿಮ ಬಂಗಾಳ ವಿಧಾನಸಭೆ ಚುನಾವಣಾ ಪ್ರಚಾರ ತಾರಕಕ್ಕೇರಿರುವ ಹೊತ್ತಿನಲ್ಲೇ ಪ್ರಧಾನಿ ಮೋದಿಯವರು ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡಣೆ ವಿಧೇಯಕಗಳನ್ನು ಅಂಗೀಕರಿಸಲು ಪ್ರತಿಪಕ್ಷಗಳ ಸಹಕಾರ ಕೇಳುತ್ತಿದ್ದಾರೆ. ಈ ರೀತಿ ಆತುರಾತುರವಾಗಿ ವಿಧೇಯಕಗಳನ್ನು ಮಂಡಿಸುವ ಕೇಂದ್ರದ ನಡೆಯ ಹಿಂದೆ, ನಮಗೆ ಗೋಚರಿಸುತ್ತಿರುವ ಏಕೈಕ ಕಾರಣವೆಂದರೆ ಅದು, ರಾಜಕೀಯ ಲಾಭ ಪಡೆಯುವುದು ಮತ್ತು ವಿಪಕ್ಷಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದು. ಮೋದಿಯವರು ಯಥಾ ರೀತಿ ಸತ್ಯ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ.
ಸಂಸತ್ತು 2023ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಧಿನಿಯಮವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಅಧಿನಿಯಮದ ಮೂಲಕ ಸಂವಿಧಾನದ 334-ಎ ವಿಧಿಯನ್ನು ಪ್ರಸ್ತಾಪಿಸಲಾಗಿದ್ದು, ಇದು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದಷ್ಟು ಮೀಸಲಾತಿಯನ್ನು ಕಲ್ಪಿಸುತ್ತದೆ. ಈ ಮೀಸಲಾತಿಯನ್ನು ಮುಂದಿನ ಜನಗಣತಿ ಮತ್ತು ಜನಗಣತಿ ಆಧರಿತ ಕ್ಷೇತ್ರ ಮರುವಿಂಗಡಣೆಯನ್ನು ಆಧರಿಸಿ ಕಲ್ಪಿಸಲಾಗುವುದು ಎಂದು ಆ ಸಂದರ್ಭದಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಮುಂದಿನ ಜನಗಣತಿ ಬಳಿಕವೇ ಮೀಸಲಾತಿ ಜಾರಿ ಮಾಡಬೇಕೆಂಬ ಪ್ರಸ್ತಾಪ ಪ್ರತಿಪಕ್ಷಗಳದ್ದಲ್ಲ. ಬದಲಾಗಿ 2024ರ ಲೋಕಸಭಾ ಚುನಾವಣೆಯಿಂದಲೇ ಮೀಸಲಾತಿ ಜಾರಿಯಾಗಬೇಕೆಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟವಾಗಿ ಒತ್ತಾಯಿಸಿದ್ದರು. ಆದರೆ, ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಕೇಂದ್ರ ಸರ್ಕಾರ ನಮ್ಮ ಆಗ್ರಹವನ್ನು ಪರಿಗಣಿಸಲೇ ಇಲ್ಲ.
ಇದೀಗ 2029ರಿಂದಲೇ ಮಹಿಳಾ ಮೀಸಲಾತಿ ಜಾರಿ ಉದ್ದೇಶದಿಂದ ಕೇಂದ್ರ ಸರ್ಕಾರ ಸಂವಿಧಾನದ 334-ಎ ವಿಧಿಯ ತಿದ್ದುಪಡಿಗೆ ಹೊರಟಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹಾಗಿದ್ದರೆ ಪ್ರಧಾನಿ ಮೋದಿ ತಮ್ಮ ನಿಲುವು ಬದಲಿಸಲು 30 ತಿಂಗಳಷ್ಟು ಸಮಯ ತೆಗೆದುಕೊಂಡಿದ್ದು ಏಕೆ? ವಿಶೇಷ ಅಧಿವೇಶನ ಕರೆಯಲು ಇನ್ನೂ ಕೆಲವು ವಾರ ಕಾಯಲು ಅವರು ಏಕೆ ಸಿದ್ಧರಿಲ್ಲ?
ಪಶ್ಚಿಮ ಬಂಗಾಳ ಚುನಾವಣೆಯ ಕೊನೆಯ ಹಂತ ಮುಗಿದ ಬಳಿಕ ಅಂದರೆ ಏ.29ರ ನಂತರವೇ ಸರ್ವಪಕ್ಷಗಳ ಸಭೆ ಕರೆಯಿರಿ ಎಂದು ಪ್ರತಿಪಕ್ಷಗಳ ನಾಯಕರು 3 ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ, ಈ ಸಕಾರಣ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ. ಅದರ ಬದಲು ಪ್ರಧಾನಮಂತ್ರಿಗಳು ಪತ್ರಿಕೆಗಳ ಸಂಪಾದಕೀಯ ಪುಟಕ್ಕೆ ಲೇಖನಗಳನ್ನು ಬರೆದು ರಾಜಕೀಯ ಪಕ್ಷಗಳಿಗೆ ಮೀಸಲಾತಿ ವಿಧೇಯಕದ ಕುರಿತು ಮನವಿ ಮಾಡುವ ಮತ್ತು ಸಮ್ಮೇಳನಗಳನ್ನು ಆಯೋಜಿಸುವ ಕೆಲಸ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಮಹತ್ವದ ನಿರ್ಧಾರಗಳ ವಿಚಾರದಲ್ಲಿ ‘ನನ್ನದೇ ದಾರಿ’ ಎಂಬುದು ಅವರ ದೃಷ್ಟಿಕೋನ ಎಂಬಂತಿದೆ.
2021ರಲ್ಲೇ ನಡೆಯಬೇಕಿತ್ತು ಜನಗಣತಿ
ಹಾಗೆ ನೋಡಿದರೆ ಹಿಂದಿನ ದಶಕದ ಜನಗಣತಿ 2021ರಲ್ಲೇ ನಡೆಯಬೇಕಿತ್ತು. ಆದರೆ ಮೋದಿ ಸರ್ಕಾರ ಅದನ್ನು ಮುಂದೂಡುತ್ತಾ ಬಂದಿತ್ತು. ಇದರ ಪರಿಣಾಮವಾಗಿ 10 ಕೋಟಿಗೂ ಹೆಚ್ಚು ಮಂದಿ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ತಮ್ಮ ಕಾನೂನುಬದ್ಧ ಹಕ್ಕಿನಿಂದ ವಂಚಿತರಾಗಬೇಕಾಯಿತು. ಇದೀಗ ಸುಮಾರು 5 ವರ್ಷಗಳ ಅವಿವರಣೀಯ ವಿಳಂಬದ ಬಳಿಕ ಜನಗಣತಿ ಶುರುವಾಗಿದೆ. ಈ ಗಣತಿಯನ್ನು ‘ಡಿಜಿಟಲ್ ಜನಗಣತಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತಿದೆ. ಗಣತಿಯ ಬಹುತೇಕ ಅಂಕಿ-ಅಂಶಗಳು 2027ರಲ್ಲೇ ಲಭ್ಯವಾಗಲಿವೆ ಎಂದು ಅನೇಕ ಹಿರಿಯ ಅಧಿಕಾರಿಗಳು ಸಾರ್ವಜನಿಕವಾಗಿಯೇ ಘೋಷಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮೀಸಲಾತಿ ವಿಚಾರವಾಗಿ ತುರ್ತು ವಿಶೇಷ ಅಧಿವೇಶನ ಮತ್ತು ಕ್ಷೇತ್ರ ಮರುವಿಂಗಡಣೆಗೆ ತೋರುತ್ತಿರುವ ಆತುರಕ್ಕೆ ನೀಡುತ್ತಿರುವ ಸಮರ್ಥನೆಗಳಿಗೆ ಯಾವುದೇ ಅರ್ಥ ಇಲ್ಲ ಎಂಬಂತಾಗಿದೆ.
ಜಾತಿಗಣತಿ ವಿಚಾರದಲ್ಲಿ ಇಬ್ಬಗೆ ನೀತಿಈ ಮೊದಲು ಕಾಂಗ್ರೆಸ್ ಜಾತಿ ಗಣತಿಗೆ ಸ್ವಯಂ ಒತ್ತಾಯಿಸಿದ್ದ ವೇಳೆ, ನಮ್ಮನ್ನ ನಗರ ನಕ್ಸಲ್ ಮನಸ್ಥಿತಿಗೆ ಪ್ರಧಾನಿ ಮೋದಿ ಹೋಲಿಸಿದ್ದರು. ಬಳಿಕ ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗಲೂ ಅಂಥ ಯಾವುದೇ ಚಿಂತನೆ ಇಲ್ಲ ಎಂದು ಸರ್ಕಾರ ಹೇಳಿತ್ತು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ ವೇಳೆಯೂ ಇದೆ ವಾದ ಮಂಡಿಸಲಾಗಿತ್ತು. ಅದರೆ ಸರಿಯಾಗಿ ಒಂದು ವರ್ಷದ ಮೊದಲು, 2027ರ ಜನಗಣತಿಯು ಜಾತಿ ಗಣತಿಯೂ ಆಗಿರಲಿದೆ ಎಂದು ಪ್ರಧಾನಿ ಘೋಷಿಸಿದ್ದರು.
ಅದೇನೇ ಇದ್ದರೂ 2027ನೇ ಜನಗಣತಿಯು ಜಾತಿ ಆಧಾರದ ಮೇಲೆ ಜನಸಂಖ್ಯೆಯನ್ನು ಲೆಕ್ಕಹಾಕುವುದೇ ಆಗಿದೆ. ಈ ಮೂಲಕ ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಅರ್ಥ ನೀಡುವ ಉದ್ದೇಶ ಗಣತಿಗಿದೆ. ಬಿಹಾರ ಮತ್ತು ತೆಲಂಗಾಣದಲ್ಲಿ ಈ ರೀತಿಯ ಸಮಗ್ರ ಜಾತಿ ಗಣತಿ ಸರ್ವೆಗಳನ್ನು ನಡೆಸಲಾಗಿದೆ. ಈ ಇಡೀ ಪ್ರಕ್ರಿಯೆ 6 ತಿಂಗಳ ಒಳಗೆ ಪೂರ್ಣಗೊಂಡಿದೆ. ಈ ಮೂಲಕ ಜಾತಿಗಣತಿ ಕಾರಣಕ್ಕೆ 2027ರ ಜನಗಣತಿಯ ಅಂಕಿ-ಅಂಶ ಪ್ರಕಟಿಸಲು ವಿಳಂಬವಾಗುತ್ತದೆ ಎಂಬುದಾಗಿ ಮಾಡುತ್ತಿರುವ ಅಪಪ್ರಚಾರಗಳೆಲ್ಲ ಸುಳ್ಳೆನ್ನುವುದು ಸ್ಪಷ್ಟ. ಇದನ್ನೆಲ್ಲ ನೋಡಿದರೆ ಪ್ರಧಾನಮಂತ್ರಿಗಳ ನೈಜ ಉದ್ದೇಶ ಜಾತಿಗಣತಿಯನ್ನು ಇನ್ನಷ್ಟು ವಿಳಂಬ ಮಾಡುವುದು ಮತ್ತು ದಾರಿತಪ್ಪಿಸುವುದೇ ಆಗಿರುವಂತಿದೆ.
ಸಂಸತ್ತಿನ ವಿಶೇಷ ಅಧಿವೇಶನವನ್ನು ಏ.16ರಂದು ಕರೆಯಲು ನಿರ್ಧರಿಸಲಾಗಿದ್ದು, ಅಧಿವೇಶನದಲ್ಲಿ ಚರ್ಚೆಯಾಗಲಿರುವ ವಿಚಾರದ ಕುರಿತು ಕೇಂದ್ರ ಸರ್ಕಾರ ಸಂಸದರೊಂದಿಗೆ ಈವರೆಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಸೂತ್ರವೊಂದನ್ನು ಮುಂದಿಡುವ ಸಾಧ್ಯತೆ ಇದೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಈ ಹಿಂದಿನಂತೆಯೇ ಜನಗಣತಿ ಬಳಿಕವೇ ನಡೆಯಬೇಕು. ಲೋಕಸಭಾ ಕ್ಷೇತ್ರದ ಸಂಖ್ಯೆ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಯಾವುದೇ ಕ್ಷೇತ್ರ ಮರುವಿಂಗಡೆ ಪ್ರಕ್ರಿಯೆ ಅಂಕಗಣಿತದಲ್ಲಷ್ಟೇ ಅಲ್ಲ, ರಾಜಕೀಯವಾಗಿಯೂ ನ್ಯಾಯಸಮ್ಮತವಾಗಿರಬೇಕು. ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ರಾಜ್ಯಗಳು ಮತ್ತು ಸಣ್ಣ ರಾಜ್ಯಗಳಿಗೆ ಅನ್ಯಾಯವಾಗುವಂತಿರಬಾರದು.
ಆಕಾಶವೇನೂ ತಲೆ ಮೇಲೆ ಬೀಳಲ್ಲ
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ ಮಧ್ಯಾವಧಿಯಲ್ಲಿ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಏ.29ರ ಬಳಿಕ ಸರ್ವಪಕ್ಷ ಸಭೆ ಕರೆದು ಪ್ರತಿಪಕ್ಷಗಳ ಮುಂದೆ ತನ್ನ ಪ್ರಸ್ತಾಪಗಳನ್ನು ಚರ್ಚಿಸಬೇಕು, ಸಾರ್ವಜನಿಕ ಚರ್ಚೆಗೆ ಕಾಲಾವಕಾಶ ಮಾಡಿಕೊಟ್ಟ ತರುವಾಯವೇ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸಿದರೆ ಆಕಾಶವೇನೂ ತಲೆಯ ಮೇಲೆ ಬೀಳುವುದಿಲ್ಲ.
ಆದರೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ತೋರುತ್ತಿರುವ ನಡೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಚರ್ಚೆಗೆ ಬರುವ ವಿಚಾರ ಅಲ್ಲವೇ ಅಲ್ಲ, ಆ ವಿಚಾರ ಈಗಾಗಲೇ ಇತ್ಯರ್ಥ ಆಗಿದೆ. ಬದಲಾಗಿ ಇಲ್ಲಿ ಕ್ಷೇತ್ರ ಮರುವಿಂಗಡಣೆಯೇ ನೈಜ ಚರ್ಚೆಯಾಗಲಿರುವ ವಿಷಯವಾಗಿದೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕೇಂದ್ರದ ಪ್ರಸ್ತಾಪಿತ ಕ್ಷೇತ್ರಮರುವಿಂಗಡಣೆಯು ಆಘಾತ ಹುಟ್ಟಿಸುವಂತಿದೆ ಮತ್ತು ಇದು ಸಂವಿಧಾನದ ಮೇಲಿನ ನೇರ ದಾಳಿಯಾಗಲಿದೆ.
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ, ಜನಗಣತಿ ಬಳಿಕವೇ ನಡೆಯಬೇಕು. ಲೋಕಸಭಾ ಕ್ಷೇತ್ರದ ಸಂಖ್ಯೆ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಯಾವುದೇ ಪ್ರಕ್ರಿಯೆ ಅಂಕಗಣಿತದಲ್ಲಷ್ಟೇ ಅಲ್ಲ, ರಾಜಕೀಯವಾಗಿಯೂ ನ್ಯಾಯಸಮ್ಮತವಾಗಿರಬೇಕು. ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ರಾಜ್ಯಗಳು ಮತ್ತು ಸಣ್ಣ ರಾಜ್ಯಗಳಿಗೆ ಅನ್ಯಾಯವಾಗುವಂತಿರಬಾರದು.
ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ