ಗಣರಾಜ್ಯೋತ್ಸವ ದಿನಾಚರಣೆ ಹಿನ್ನಲೆ ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಮೂರು ದಿನದ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ನಿನ್ನೆ ಆರಂಭವಾದ ಫಲಪುಷ್ಪ ದರ್ಶನಕ್ಕೆ ಇಂದು ಜನಸಾಗರವೇ ಹರಿದುಬಂದಿತ್ತು.
ಯಾದಗಿರಿ ಜಿಲ್ಲೆಯ ರೈತರು ಬೆಳೆದಿರುವ ಹೂವು ಮತ್ತು ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜಿಲ್ಲೆಯ ನಾನಾ ಭಾಗಗಳಲ್ಲಿ ರೈತರು ಬೆಳೆದಿರುವ ವಿವಿಧ ಹಾಗೂ ಹೂವುಗಳಿಗೆ ಹಣ್ಣುಗಳನ್ನು ಇಡಲಾಗಿದೆ.
ಕಲ್ಲಂಗಡಿ ಹಣ್ಣಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಭಾವಚಿತ್ರಗಳನ್ನು ಬಿಡಲಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ಪ್ರಮುಖ ಅಧಿಕಾರಿಗಳಾದ ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಪಂಚಾಯತಿ ಸಿಐಒ ಹಾಗೂ ಅಪರ ಜಿಲ್ಲಾಧಿಕಾರಿಗಳ ಭಾವಚಿತ್ರಗಳನ್ನೂ ಸಹ ಕೆತ್ತಲಾಗಿದೆ. ಇದರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಭಗತ್ ಸಿಂಗ್, ಬಸವೇಶ್ವರ ಚಿತ್ರಗಳನ್ನ ಕಲ್ಲಂಗಡಿ ಮತ್ತು ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಲಾಗಿದೆ.
ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಕೇವಲ ಹೂವುಗಳಿಂದ ನಾನಾ ರೀತಿಯ ಪಕ್ಷಿ ಪ್ರಾಣಿಗಳನ್ನು ನಿರ್ಮಿಸಲಾಗಿದೆ. ಅದರಲ್ಲೂ ಡಾಲ್ಫಿನ್ ಹಾಗೂ ಬಾತಕೋಳಿಯ ಪ್ರತಿಮೆ ಎಲ್ಲರನ್ನ ಸೆಳೆಯುತ್ತಿದೆ. ಜನರ ಇವುಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.
ಇನ್ನು ರೈತರು ಬೆಳೆದ ತರಕಾರಿಗಳಲ್ಲಿ ನವಿಲನ್ನು ತಯಾರಿಸಲಾಗಿದೆ. ಥರ್ಮಾಕೋಲ್ ನಿಂದ ಬುದ್ಧ, ಬಸವ ಅಂಬೇಡ್ಕರ್ ಹಾಗೂ ಸಾಲು ಮರದ ತಿಮ್ಮಕ್ಕನ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಸಿರಿ ಧಾನ್ಯಗಳಾದ ರಾಗಿ, ಅಕ್ಕಿ, ಜೋಳ, ಸಜ್ಜೆ ಸೇರಿದಂತೆ ಇತರೆ ಧಾನ್ಯಗಳ ಬಳಕೆ ಮಾಡಿ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ತೋಟಗಾರಿಕೆ ಪಿತಾಮಹ ಮರಿಗೌಡರ ಚಿತ್ರವನ್ನ ರಂಗೋಲಿಯಲ್ಲಿ ಅದ್ಬುತವಾಗಿ ಬಿಡಲಾಗಿದೆ.
ಒಟ್ಟಿನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಯಾದಗಿರಿ ನಗರದ ಲುಂಬಿನಿ ವನದಲ್ಲಿ ಫಲ ಪುಷ್ಪ ಲೋಕವೇ ಅನಾವರಣಗೊಂಡಿದೆ. ಪ್ರತಿ ವರ್ಷ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಕಾರಣಕ್ಕಾಗಿ ಜನರು ಮತ್ತಷ್ಟು ಉತ್ಸಾಹ, ಸಂತೋಷದಲ್ಲಿ ಭಾಗವಹಿಸುತ್ತಿದ್ದಾರೆ.





